Asianet Suvarna News Asianet Suvarna News

ಹಿಂದೂ ಮಹಾಸಾಗರದಲ್ಲೂ ಚೀನಾತಂಕ: ಜಿಬೂಟಿಯಲ್ಲಿ ಚೀನಾದ ಮೊದಲ ವಿದೇಶಿ ನೌಕಾ ನೆಲೆ ಆರಂಭ

 ಭಾರತದ ಚಲನವಲನಗಳ ಮೇಲೆ ನಿಗಾ ಇಡಲು ಶ್ರೀಲಂಕಾಗೆ ತನ್ನ ಬೇಹುಗಾರಿಕಾ ನೌಕೆ ಕಳುಹಿಸಿರುವ, ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ತನ್ನ ಸೇನೆ ನಿಯೋಜನೆ ಮಾಡಲು ಮುಂದಾಗಿರುವ ಚೀನಾ ಇದೀಗ ಭಾರತವನ್ನು ಗುರಿಯಾಗಿಸಿಕೊಂಡು ತನ್ನ ಮೊದಲ ವಿದೇಶಿ ನೌಕಾ ನೆಲೆಯನ್ನು ಆರಂಭಿಸಿದೆ. ಚೀನಾದ ಈ ಕುತಂತ್ರದಿಂದಾಗಿ ಭಾರತಕ್ಕೆ ಮತ್ತೊಂದು ಕಳವಳ ಎದುರಾದಂತಾಗಿದೆ.

Chinese domination in the Indian Ocean: China's first foreign naval base started in south Africa's Djibouti akb
Author
Bengaluru, First Published Aug 19, 2022, 8:57 AM IST

ನವದೆಹಲಿ: ಭಾರತದ ಚಲನವಲನಗಳ ಮೇಲೆ ನಿಗಾ ಇಡಲು ಶ್ರೀಲಂಕಾಗೆ ತನ್ನ ಬೇಹುಗಾರಿಕಾ ನೌಕೆ ಕಳುಹಿಸಿರುವ, ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ತನ್ನ ಸೇನೆ ನಿಯೋಜನೆ ಮಾಡಲು ಮುಂದಾಗಿರುವ ಚೀನಾ ಇದೀಗ ಭಾರತವನ್ನು ಗುರಿಯಾಗಿಸಿಕೊಂಡು ತನ್ನ ಮೊದಲ ವಿದೇಶಿ ನೌಕಾ ನೆಲೆಯನ್ನು ಆರಂಭಿಸಿದೆ. ಚೀನಾದ ಈ ಕುತಂತ್ರದಿಂದಾಗಿ ಭಾರತಕ್ಕೆ ಮತ್ತೊಂದು ಕಳವಳ ಎದುರಾದಂತಾಗಿದೆ. ಆಫ್ರಿಕಾದ ಬಡ ದೇಶ ಜಿಬೂಟಿಗೆ ಸಾಕಷ್ಟು ಸಾಲ ನೀಡಿರುವ ಚೀನಾ, ಅಲ್ಲಿ ತನ್ನ ಪರಿಪೂರ್ಣ ನೌಕಾನೆಲೆಯನ್ನು ಸದ್ದಿಲ್ಲದೆ ಕಾರ್ಯಾರಂಭಿಸಿದೆ. 2016ರಲ್ಲಿ ಆರಂಭವಾದ ಈ ನೌಕಾನೆಲೆಯ ಕಾಮಗಾರಿ 4700 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಇದು ಚೀನಾದ ಮೊತ್ತ ಮೊದಲ ಸಾಗರೋತ್ತರ ನೆಲೆಯಾಗಿ ಕಾರ್ಯನಿರ್ವಹಿಸಲಿದೆ. ಯಾವುದೇ ದಾಳಿಯನ್ನೂ ತಡೆದುಕೊಳ್ಳುವ ಪುರಾತನ ಕೋಟೆಯ ರೀತಿ ಆಧುನಿಕ ಶೈಲಿಯಲ್ಲಿ ಈ ನೌಕಾನೆಲೆ ನಿರ್ಮಾಣ ಆಗಿದೆ. ಈಗಾಗಲೇ ದೊಡ್ಡ ದೊಡ್ಡ ನೌಕೆಗಳು ಇಲ್ಲಿ ಲಂಗರು ಹಾಕಿವೆ ಎಂದು ಉಪಗ್ರಹ ಚಿತ್ರಗಳು ಹೇಳುತ್ತಿವೆ.

'ಒನ್‌ ಬೆಲ್ಟ್‌ ಅಂಡ್‌ ರೋಡ್‌' ಹೆಸರಿನಲ್ಲಿ ಜಿಬೂಟಿಗೆ ಸಾಕಷ್ಟು ಸಾಲವನ್ನು ಚೀನಾ ನೀಡಿತ್ತು. ಇದೀಗ ಆ ಸಾಲದ ಮೊತ್ತ ಜಿಬೂಟಿ ಜಿಡಿಪಿ ಮೌಲ್ಯದ ಶೇ.70ರಷ್ಟಾಗಿದೆ. ಅದೇ ದೇಶದಲ್ಲಿ ಚೀನಾ ತನ್ನ ನೌಕಾ ನೆಲೆಯನ್ನು ಆರಂಭಿಸಿದೆ. ಏಡನ್‌ ಕೊಲ್ಲಿ ಹಾಗೂ ಕೆಂಪು ಸಮುದ್ರವನ್ನು ಪ್ರತ್ಯೇಕಿಸುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಬಾಬ್‌-ಎಲ್‌-ಮಾಂಡೆಬ್‌ ಬಳಿ ಇರುವ ಈ ನೆಲೆ, ಸೂಯೆಜ್‌ ಕೆನಾಲ್‌ಗೂ ಮಹತ್ವದ ಸಂಪರ್ಕ ಬೆಸೆಯುತ್ತದೆ.

ಲಂಕಾ ಬಂದರಲ್ಲಿ ಚೀನಾ ಗುಪ್ತಚರ ಹಡಗು ಲಂಗರು: ಭಾರತದ ಸೇನಾ ನೆಲೆಗಳ ಮೇಲೆ ಕಣ್ಣಿಡುವ ಅಪಾಯ

ಈಗಾಗಲೇ ಪಾಕಿಸ್ತಾನದ ಗ್ವಾದಾರ್‌ ಬಂದರಿನ ಸಂಪರ್ಕ ಪಡೆದಿರುವ ಚೀನಾ, ಇದೀಗ ಜಿಬೂಟಿ ನೌಕಾನೆಲೆಯ ಮೂಲಕ ಈ ಭಾಗದ ಪ್ರಮುಖ ದೇಶವಾಗಿರುವ ಭಾರತವನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಜತೆಗೆ ಪರ್ಷಿಯನ್‌ ಕೊಲ್ಲಿಯಲ್ಲಿ ದೊಡ್ಡ ನೆಲೆಗಳನ್ನು ಹೊಂದಿರುವ ಅಮೆರಿಕವೂ ಚೀನಾದ ಗುರಿ ಎನ್ನಲಾಗಿದೆ.

ಇದಕ್ಕೂ ಮೊದಲು  ಭಾರತದ ವಿರೋಧದ ಹೊರತಾಗಿಯೂ ಚೀನಾದ ಗೂಢಚರ ನೌಕೆ ‘ಯುನ್‌ ವಾಂಗ್‌ 5’ ಆಗಸ್ಟ್‌16ರಂದು ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಆಗಮಿಸಿತ್ತು. ದ ಯಾನ್‌ ವಾಂಗ್‌ 5’ ಸಂಶೋಧನೆ ಹಾಗೂ ಸಮೀಕ್ಷಾ ಹಡಗು ಎಂದು ಚೀನಾ ಘೋಷಿಸಿಕೊಂಡಿದ್ದರೂ, ಅದು ಬೇಹುಗಾರಿಕಾ ಸೌಲಭ್ಯವನ್ನು ಹೊಂದಿದೆ. ತನ್ನ ಸೇನಾ ನೆಲೆಗಳ ಮೇಲೆ ಕಣ್ಣಿಡಬಹುದು ಎಂಬುದು ಭಾರತದ ಆಕ್ಷೇಪ. ಇದೇ ಕಾರಣಕ್ಕಾಗಿಯೇ, ಚೀನಾ ಕಂಪನಿಯ ವಶದಲ್ಲೇ ಇರುವ ಹಂಬನ್‌ತೋಟ ಬಂದರಿನಲ್ಲಿ ನೌಕೆ ಲಂಗರು ಹಾಕಲು ಅನುಮತಿ ನೀಡಬಾರದು ಎಂದು ಭಾರತ ಶ್ರೀಲಂಕಾಕ್ಕೆ ಮನವಿ ಮಾಡಿತ್ತು. ಆದರೆ ನೌಕೆ ಆಗಮನವನ್ನು ಕೆಲ ದಿನಗಳ ಕಾಲ ಮುಂದೂಡಿದ್ದ ಲಂಕಾ ಕೊನೆಗೆ ಅನುಮತಿ ನೀಡಿತ್ತು.

ಕೋವಿಡ್‌: ದಿಢೀರ್ ಐಕಿಯಾ ಮುಚ್ಚಲು ಮುಂದಾದ ಚೀನಾ: ಮಾಲ್‌ನಿಂದ ಜನ ಓಡುತ್ತಿರುವ ವಿಡಿಯೋ ವೈರಲ್‌

ಹಂಬನ್‌ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಆದರೆ ಅಭಿವೃದ್ಧಿಪಡಿಸಿದ್ದಕ್ಕೆ ಶ್ರೀಲಂಕಾ ಹಣ ಪಾವತಿ ಮಾಡದ ಕಾರಣ, ಬಂದರನ್ನು 99 ವರ್ಷ ಕಾಲ ಚೀನಾ ಮೂಲದ ಕಂಪನಿಗೆ ಲೀಸ್‌ಗೆ ನೀಡಿದೆ. ಈ ಬಂದರನ್ನು ಚೀನಾ ತಮ್ಮ ಮಿಲಿಟರಿ ನೆಲೆಯನ್ನಾಗಿ ಬಳಸಬಹುದು ಎಂಬುದು ಭಾರತದ ಆತಂಕಕ್ಕೆ ಕಾರಣ. ಜೊತೆಗೆ ದ ಯಾನ್‌ ವಾಂಗ್‌ ಹಡಗು, ಬಾಹ್ಯಾಕಾಶದ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಅಂದರೆ ಅದನ್ನು ಉಪಗ್ರಹಗಳ ಮೇಲೆ ಕಣ್ಗಾವಲು ಇಡಲು, ರಾಕೆಟ್‌, ಖಂಡಾಂತರ ಕ್ಷಿಪಣಿ ಪ್ರಯೋಗದ ಮೇಲೆ ನಿಗಾ ಇಡಲು ಮತ್ತು ದಾಳಿ ನಡೆಸಲು ಬಳಸಬಹುದು. ಅಲ್ಲದೆ ಈ ನೌಕೆ ಕಲ್ಪಕಂ, ಕೂಡಂಕುಳಂ ಪರಮಾಣು ಸ್ಥಾವರ, ಪರಮಾಣು ಸಂಶೋಧನಾ ಕೇಂದ್ರಗಳು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ವ್ಯಾಪ್ತಿಯ ಬಂದರುಗಳ ಮಾಹಿತಿ ಕದಿಯಬಹುದು ಎಂಬುದು ಸರ್ಕಾರದ ಆತಂಕಕ್ಕೆ ಕಾರಣ. ಹೀಗಾಗಿ ಈ ಗೂಢಚರ ನೌಕೆ ತನ್ನ ದೇಶದ ಗಡಿಯಲ್ಲಿ ಲಂಗರು ಹಾಕುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ನೌಕೆ ಆ.22ರವರೆಗೂ ಬಂದರಿನಲ್ಲೇ ಇರಲಿದೆ. ಈ ನಡುವೆ, ನೌಕೆ ಆಗಮನ ಕುರಿತ ವಿವಾದ ಅನಪೇಕ್ಷಿತ ಎಂದು ಲಂಕಾದಲ್ಲಿನ ಚೀನಾ ರಾಯಭಾರಿ ಹೇಳಿದ್ದಾರೆ. ಇಂಥ ಸಂಶೋಧನಾ ಹಡಗು ಲಂಕಾಕ್ಕೆ ಆಗಮಿಸುವುದು ಹೊಸದೇನಲ್ಲ. 2014ರಲ್ಲೂ ಇಂಥ ನೌಕೆ ಆಗಮಿಸಿತ್ತು. ಕೇವಲ ಮರುಪೂರಣ ಕಾರಣಕ್ಕಾಗಿ, ಸೀಮಿತ ಅವಧಿಗೆ ನೌಕೆ ಲಂಕಾ ಬಂದರಿನಲ್ಲಿ ಲಂಗರು ಹಾಕಲಿದೆ ಎಂದು ಅವರು ಹೇಳಿದ್ದಾರೆ. ಆದರೆ ನೌಕೆ ಆಗಮನದ ವೇಳೆ ಶ್ರೀಲಂಕಾದ ಹಿರಿಯ ರಾಜಕಾರಣಿಗಳು ಸ್ಥಳದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಭಾರತದ ಅಸಮಾಧಾನದ ತೀವ್ರತೆ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.
 

Follow Us:
Download App:
  • android
  • ios