ಮೆಲ್ಬರ್ನ್‌(ಮೇ.09): ವಿಶ್ವದಲ್ಲಿ 15 ಕೋಟಿ ಜನರನ್ನು ಬಾಧಿಸಿ, 32 ಲಕ್ಷ ಜನರನ್ನು ಬಲಿಪಡೆದ ಕೊರೋನಾ ವೈರಸ್‌ನ ಮೂಲ ಚೀನಾ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟುಅಂಶಗಳು ಹೊರಬಿದ್ದಿವೆ. ಅದರಲ್ಲೂ ಈ ಮಾರಕ ವೈರಸ್‌ ಅನ್ನು ಅದು ಜೈವಿಕ ಅಸ್ತ್ರವಾಗಿ ಬಳಸಿ ಇಡೀ ವಿಶ್ವವನ್ನು ಹಿಂದೆಂದೂ ಕಂಡುಕೇಳರಿಯದಂಥ ವಿನಾಶಕ್ಕೆ ತಳ್ಳಬಹುದು ಎಂಬ ಕುತಂತ್ರವನ್ನು 2015ರಲ್ಲೇ ರೂಪಿಸಿತ್ತು ಎಂಬ ಸ್ಫೋಟಕ ವಿಷಯ ಇದೀಗ ಬೆಳಕಿಗೆ ಬಂದಿದೆ.

ಈ ಕುರಿತ ವರದಿಯೊಂದನ್ನು ಆಸ್ಪ್ರೇಲಿಯಾ ವೀಕೆಂಡ್‌ ಆಸ್ಪ್ರೇಲಿಯನ್‌ ಮ್ಯಾಗಜಿನ್‌ ಮತ್ತು ಇತರೆ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಇದು ಕೊರೋನಾ ವೈರಸ್‌ ಅನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಿ ಬಿಟ್ಟಿರಬಹುದು ಎಂಬ ಊಹಾಪೋಹಗಳು ನಿಜವಾಗುವಂತೆ ಮಾಡಿದೆ.

ಈ ವರದಿ ಸಿದ್ಧಪಡಿಸಿರುವ 18 ವಿಜ್ಞಾನಿಗಳ ಪೈಕಿ ಬಹುತೇಕರು ಚೀನಾ ಸೇನೆಯ ವಿಜ್ಞಾನಿಗಳು ಮತ್ತು ಶಸ್ತ್ರಾಸ್ತ್ರ ತಜ್ಞರೇ ಆಗಿದ್ದಾರೆ. ಉಳಿದವರು ಚೀನಾದ ಸಾರ್ವಜನಿಕ ಆರೋಗ್ಯ ಸೇವೆಯ ಅಧಿಕಾರಿಗಳು.

"

ವರದಿಯಲ್ಲೇನಿದೆ?:

2015ರಲ್ಲಿ ಸಿದ್ಧಪಡಿಸಿರುವ ಈ ವರದಿಯಲ್ಲಿ ಸಾರ್ಸ್‌ ಕೊರೋನಾ ವೈರಸ್‌ ಅನ್ನು ಹೇಗೆ ಶಸ್ತ್ರಾಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಆ ವರದಿಯಲ್ಲಿ ‘ಸಾರ್ಸ್‌ ಕೊರೋನಾ ವೈರಸ್‌ ಅನ್ನು ಹೊಸ ಯುಗದ ಜೈವಿಕ ಅಸ್ತ್ರ ಎಂದು ಬಣ್ಣಿಸಲಾಗಿದ್ದು, ಅದನ್ನು ಕೃತಕವಾಗಿ ಬದಲಾಯಿಸುವ ಮೂಲಕ ಮಾನವರಲ್ಲಿ ಸೋಂಕು ಹಬ್ಬಿಸಬಲ್ಲ ವೈರಸ್‌ ಆಗಿ ಪರಿವರ್ತಿಸಬಹುದು. ಈ ಮೂಲಕ ವೈರಸ್‌ ಅನ್ನು ಶಸ್ತ್ರವಾಗಿ ಬಳಸಿಕೊಂಡು, ಈ ವಿಶ್ವ ಹಿಂದೆಂದೂ ಕಂಡುಕೇಳರಿಯದಂಥ ವಿಶಾನಕ್ಕೆ ತಳ್ಳಬಹುದು’ ಎಂದು ವಿಶ್ಲೇಷಿಸಲಾಗಿದೆ.

ಈ ಕುರಿತು ಆಸ್ಪ್ರೇಲಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ‘ಆಸ್ಪ್ರೇಲಿಯ ವ್ಯೂಹಾತ್ಮಕ ನೀತಿ ಸಂಸ್ಥೆ’ ಕಾರ್ಯನಿರ್ವಾಹಕ ನಿರ್ದೇಶಕ ಪೀಟರ್‌ ಜೆನ್ನಿಂಗ್ಸ್‌ ‘ಈ ವರದಿ ಅತ್ಯಂತ ಮಹತ್ವಪೂರ್ಣದ್ದು. ಏಕೆಂದರೆ ಇದು ಕೊರೋನಾ ವೈರಸ್‌ನ ವಿವಿಧ ತಳಿಗಳನ್ನು ಹೇಗೆ ಮಿಲಿಟರಿ ಅಸ್ತ್ರವಾಗಿ ಬಳಸಿಕೊಳ್ಳಬಹುದು ಮತ್ತು ಅದನ್ನು ಹೇಗೆ ನಿಯೋಜನೆ ಮಾಡಬಹುದು ಎಂಬುದರ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ವೈರಸ್‌ನ ಹಿಂದೆ ಚೀನಾದ ಕೈವಾಡವಿದೆ ಎಂಬ ವಾದಕ್ಕೆ ಇನ್ನಷ್ಟುಬಲತುಂಬಿದೆ. ವೈರಸ್‌ ಮೂಲಕ ಹುಡುಕಲು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಬಾಹ್ಯ ಜಗತ್ತಿನ ವಿಜ್ಞಾನಿಗಳಿಗೆ ಚೀನಾ ಏಕೆ ಮುಕ್ತ ಅವಕಾಶ ನೀಡಲಿಲ್ಲ ಎಂಬುದಕ್ಕೂ ಈ ವರದಿ ಮತ್ತಷ್ಟುಇಂಬು ನೀಡಿದೆ ಎಂದು ಹೇಳಿದ್ದಾರೆ.

ವರದಿಯಲ್ಲೇನಿದೆ?

- ಸಾರ್ಸ್‌ ಕೊರೋನಾ ವೈರಸ್‌ ಅನ್ನು ಹೊಸ ಯುಗದ ಜೈವಿಕ ಅಸ್ತ್ರ ಎಂದು ಬಣ್ಣಿಸಲಾಗಿದೆ

- ಅದನ್ನು ಕೃತಕವಾಗಿ ಬದಲಾಯಿಸಿ ಮಾನವರಲ್ಲಿ ಸೋಂಕು ಹಬ್ಬುವ ವೈರಸ್‌ ಆಗಿಸಬಹುದು

- ಈ ಮೂಲಕ ವೈರಸ್ಸನ್ನು ಶಸ್ತ್ರವಾಗಿಸಿ ವಿಶ್ವವನ್ನು ಕಂಡು ಕೇಳರಿಯದ ವಿನಾಶಕ್ಕೆ ತಳ್ಳಬಹುದು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona