ಬೀಜಿಂಗ್‌[ಫೆ.28]: 2 ದಶಗಳಲ್ಲೇ ಕಂಡುಕೇಳರಿಯದ ರೀತಿಯ ಮಿಡತೆ ಹಾವಳಿಗೆ ಸಿಕ್ಕಿಬಿದ್ದಿರುವ ಪಾಕಿಸ್ತಾನಕ್ಕೆ, 1 ಲಕ್ಷದಷ್ಟುಬಾತುಕೋಳಿ ‘ಪಡೆ’ಯನ್ನು ರವಾನಿಸಲು ಚೀನಾ ನಿರ್ಧರಿಸಿದೆ. ಮಿಡತೆ ಹಾವಳಿಯಿಂದ ಬಳಲುತ್ತಿರುವ ಪಾಕ್‌ನ ಪ್ರದೇಶಗಳಿಗೆ ತೆರಳಿದ್ದ ಚೀನಾದ ತಜ್ಞರ ತಂಡ ನೀಡಿದ ಸಲಹೆ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಸರ್ಕಾರದಿಂದ ಈ ಬಗ್ಗೆ ಯಾವುದೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅದರನ್ವಯ ಚೀನಾ ಝೆಜಿಯಾಂಗ್‌ ಪ್ರಾಂತ್ಯದಿಂದ ಶೀಘ್ರವೇ ಸುಮಾರು 1 ಲಕ್ಷ ಬಾತುಕೋಳಿಗಳನ್ನು ಕಳುಹಿಸಲಾಗುವುದು. ಬಾತುಕೋಳಿಗಳ ಸಾಮಾನ್ಯ ಆಹಾರದಲ್ಲಿ ಮಿಡತೆಗಳು ಕೂಡಾ ಸೇರಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಮಿಡತೆ ಹಾವಳಿ ನಿಗ್ರಹಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ಹಿಂದೆ ಚೀನಾದ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲೂ ಭಾರೀ ಮಿಡತೆ ಹಾವಳಿ ಕಾಣಿಸಿಕೊಂಡಾಗ ಹೀಗೆಯೇ ಲಕ್ಷಾಂತರ ಬಾತುಕೋಳಿ ಬಳಸಿ ಅವುಗಳನ್ನು ಯಶಸ್ವಿಯಾಗಿ ನಿಗ್ರಹಿಸಲಾಗಿತ್ತು.

ಮಿಡತೆ ತಿನ್ನುವ ಪ್ರಾಣಿಗಳ ಪೈಕಿ ಕೋಳಿ ದಿನಕ್ಕೆ ಗರಿಷ್ಠ 70 ಮಿಡತೆ ತಿಂದರೆ, ಬಾತುಕೋಳಿ 200 ಮಿಡತೆ ತಿನ್ನಬಲ್ಲದು. ಜೊತೆಗೆ ಬೇರೆ ಕ್ರಮಗಳಿಗೆ ಹೋಲಿಸಿದರೆ ಇದರ ವೆಚ್ಚವೂ ಕಡಿಮೆ, ಪರಿಸರ ಸ್ನೇಹಿಯೂ ಹೌದು. ಅಲ್ಲದೆ ಕೋಳಿಗಳಿಗೆ ಹೋಲಿಸಿದರೆ ಬಾತುಕೋಳಿಗಳು ಗುಂಪುಗುಂಪಾಗಿಯೇ ಇರುವ ಕಾರಣ, ಅವುಗಳ ನಿರ್ವಹಣೆಯೂ ಸುಲಭ. ಹೀಗಾಗಿ ಭಾರೀ ಪ್ರಮಾಣದಲ್ಲಿ ಹತ್ತಿ ಮತ್ತು ಗೋಧಿ ಬೆಳೆಯನ್ನು ಹಾಳುಮಾಡುತ್ತಿರುವ ಮಿಡತೆ ನಿಗ್ರಹಕ್ಕೆ ಬಾತುಕೋಳಿಗಳ ನೆರವು ಪಡೆಯಲು ನಿರ್ಧರಿಸಲಾಗಿದೆ.