ಕೋಲ್ಕತಾ(ಜೂ.18): 20 ಯೋಧರ ಸಾವಿಗೆ ಕಾರಣವಾದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ದೇಶದಲ್ಲಿ ಜೋರಾಗಿದ್ದು, ಹಲವು ಸಂಘಟನೆಗಳು ಅಭಿಯಾನವನ್ನೇ ಆರಂಭಿಸಿವೆ. ಒಂದು ವೇಳೆ, ಈ ಅಭಿಯಾನ ಯಶಸ್ವಿಯಾದರೆ ‘ಡ್ರ್ಯಾಗನ್‌’ ದೇಶ ವಾರ್ಷಿಕ ಬರೋಬ್ಬರಿ 6.8 ಲಕ್ಷ ಕೋಟಿ ರು. ನಷ್ಟಅನುಭವಿಸುವ ಅಂದಾಜಿದೆ.

ಆಟಿಕೆ, ಗೃಹ ಬಳಕೆ ವಸ್ತು, ಮೊಬೈಲ್‌, ಎಲೆಕ್ಟ್ರಿಕ್‌ ಹಾಗೂ ಎಲೆಕ್ಟ್ರಾನಿಕ್‌ ಗೂಡ್ಸ್‌ ಮತ್ತು ಸೌಂದರ್ಯವರ್ಧಕ ವಸ್ತುಗಳಂತಹ ಸುಮಾರು 1.2 ಲಕ್ಷ ಕೋಟಿ ರು. ಮೌಲ್ಯದ ಚೀನಿ ವಸ್ತುಗಳನ್ನು ಸಣ್ಣ ವ್ಯಾಪಾರಿಗಳು ಪ್ರತಿ ವರ್ಷ ದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈಗ ಇರುವ ಎಲ್ಲ ಸರಕು ಖಾಲಿಯಾದ ಬಳಿಕ ಚೀನಾದಿಂದ ಹೊಸ ಮಾಲು ಖರೀದಿಸಬೇಡಿ ಎಂದು ನಮ್ಮ ಸದಸ್ಯರಿಗೆ ಸೂಚಿಸಿದ್ದೇವೆ ಎಂದು ಅಖಿಲ ಭಾರತ ವ್ಯಾಪಾರ ಮಂಡಲ ಸೂಚಿಸಿದೆ.

ಇದೇ ವೇಳೆ, ಇ- ಕಾಮರ್ಸ್‌ ಕಂಪನಿಗಳು 5.6 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಅವನ್ನೂ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ವ್ಯಾಪಾರ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿ.ಕೆ. ಬನ್ಸಲ್‌ ತಿಳಿಸಿದ್ದಾರೆ.

ವ್ಯಾಪಾರಿಗಳ ರಾಷ್ಟ್ರೀಯ ಸಂಸ್ಥೆಯಾಗಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಈಗಾಗಲೇ ‘ಭಾರತೀಯ ಸಾಮಾನ್‌- ಹಮಾರ ಅಭಿಯಾನ್‌’ ಎಂಬ ಅಭಿಯಾನ ಆರಂಭಿಸಿದೆ. 3000 ಚೀನಾ ಉತ್ಪನ್ನಗಳನ್ನು ಒಳಗೊಂಡ 450 ವಿಭಾಗಗಳ ಪಟ್ಟಿಯನ್ನು ಅದು ಮಾಡಿದೆ. ಚೀನಾ ಉತ್ಪನ್ನಗಳ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಂತೆ ಸೆಲೆಬ್ರಿಟಿಗಳಿಗೂ ಒಕ್ಕೂಟ ಪತ್ರ ಬರೆದಿದೆ.

5.6 ಲಕ್ಷ ಕೋಟಿ: ಇ ಕಾಮರ್ಸ್‌ ಕಂಪನಿಗಳ ವಾರ್ಷಿಕ ಆಮದು

1.2 ಲಕ್ಷ ಕೋಟಿ: ಚಿಲ್ಲರೆ ವ್ಯಾಪಾರಿಗಳ ಆಮದು ಪ್ರಮಾಣ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"