ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್ ಡ್ಯಾಮ್!
ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್ ಡ್ಯಾಮ್| ಭಾರತ, ಬಾಂಗ್ಲಾದೇಶಕ್ಕೆ ಕಳವಳ
ಬೀಜಿಂಗ್(ಡಿ.01): ಭಾರತದ ಪ್ರಮುಖ ನದಿಗಳ ಪೈಕಿ ಒಂದಾದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಅಣೆಕಟ್ಟೆನಿರ್ಮಾಣ ಮಾಡುವ ಮೂಲಕ ಬೃಹತ್ ಜಲವಿದ್ಯುತ್ ಯೋಜನೆಯೊಂದನ್ನು ಆರಂಭಿಸಲು ಚೀನಾ ನಿರ್ಧರಿಸಿದೆ. ಇದು ಸಹಜವಾಗಿಯೇ ನದಿಯ ಕೆಳಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಗಳ ಕಳವಳಕ್ಕೆ ಕಾರಣವಾಗಿದೆ. ಈಗಾಗಲೇ ಗಡಿ ವಿಷಯ ಸಂಬಂಧ ಭಾರತದೊಂದಿಗೆ ಸದಾ ಜಗಳ ಕಾಯುವ ಚೀನಾ, ಹೊಸ ಅಣೆಕಟ್ಟಿನ ವಿಷಯದ ಮೂಲಕವೂ ಮತ್ತೊಂದು ವಿವಾದ ಹುಟ್ಟುಹಾಕುವ ಭೀತಿಯೂ ಎದುರಾಗುವಂತೆ ಮಾಡಿದೆ.
ಅರುಣಾಚಲ ಟಿಬೆಟ್ ಜೊತೆ ಗಡಿ ಹಂಚಿಕೊಂಡಿದೆ ಹೊರತು ಚೀನಾ ಅಲ್ಲ; ತಿರುಗೇಟು ನೀಡಿದ CM ಖಂಡು!
ಈ ಯೋಜನೆ ವೇಳೆ ನದಿಯ ಕೆಳಪಾತ್ರದ ದೇಶಗಳ ಕುರಿತು ಗಮನ ಹರಿಸಬೇಕು. ಹಾಲಿ ನದಿ ನೀರಿನ ಬಳಕೆ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು ಎಂದು ಈಗಾಗಲೇ ಚೀನಾಕ್ಕೆ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಚೀನಾ ಕೂಡ ಭಾರತ ಮತ್ತು ಬಾಂಗ್ಲಾದೇಶವನ್ನು ಗಮನದಲ್ಲಿಟ್ಟುಕೊಂಡೇ ಯೋಜನೆ ರೂಪಿಸುವುದಾಗಿ ಹೇಳಿದೆಯಾದರೂ, ಕುತಂತ್ರಕ್ಕೆ ಕುಖ್ಯಾತಿ ಹೊಂದಿರುವ ಚೀನಾವನ್ನು ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ.
ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲುಂಗ್ ಝಾಂಗ್ಬೋ ಎಂದು ಕರೆಯಲಾಗುತ್ತದೆ. ಟಿಬೆಟ್ ಅನ್ನು ಚೀನಾ ಈಗಾಗಲೇ ಕೈವಶ ಮಾಡಿಕೊಂಡಿರುವ ಕಾರಣ, 2021-25ರ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಮೆಡಾಗ್ ಕೌಂಟಿಯಲ್ಲಿ ಸೂಪರ್ ಹೈಡ್ರೋಪವರ್ ಸ್ಟೇಷನ್ ನಿರ್ಮಿಸಲು ಯೋಜಿಸಿದೆ. ಮುಂದಿನ ವರ್ಷ ಹೊಸ ಪಂಚ ವಾರ್ಷಿಕ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಿದ್ದು, ಬಳಿಕ ಯೋಜನೆಯ ಪೂರ್ಣ ಮಾಹಿತಿ ಬಹಿರಂಗವಾಗಲಿದೆ.
ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ!
ಈ ಕುರಿತು ಮಾಹಿತಿ ನೀಡಿರುವ ಜಲವಿದ್ಯುತ್ ಯೋಜನೆ ನಿರ್ಮಾಣದ ಗುತ್ತಿಗೆ ಪಡೆದಿರುವ ಪವರ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್ ಆಫ್ ಚೀನಾದ ಮುಖ್ಯಸ್ಥ ಯಾನ್ ಝಿಯಾಂಗ್, ‘ಯಾರ್ಲುಂಗ್ ಝಾಂಗ್ಬೋ ನದಿ ಪಾತ್ರದಲ್ಲಿ ಬೃಹತ್ ಜಲವಿದ್ಯುತ್ ಯೋಜನೆ ಜಾರಿಯಾಗಲಿದೆ. ಇದು ಜಲಸಂಪನ್ಮೂಲ ಅಗತ್ಯ ಪೂರೈಸುವ ಜೊತೆಗೆ, ಆಂತರಿಕ ಭದ್ರತೆಗೂ ನೆರವಾಗಲಿದೆ. ಇದು ಚೀನಾದ ಜಲವಿದ್ಯುತ್ ಕೈಗಾರಿಕೆಗೊಂದು ಐತಿಹಾಸಿಕ ಅವಕಾಶ ಎಂದು ಹೇಳಿದ್ದಾರೆ.
ಯಾರ್ಲುಂಗ್ ನದಿಯ ಇಡೀ ಟಿಬೆಟ್‌ನಲ್ಲೇ ಅತ್ಯಂತ ಹೆಚ್ಚು ಜಲಸಂಪನ್ಮೂಲ ಹೊಂದಿರುವ ಖ್ಯಾತಿ ಹೊಂದಿದೆ. ಇದರಲ್ಲಿ 80 ದಶಲಕ್ಷ ಕಿಲೋವ್ಯಾಟ್ ಉತ್ಪಾದನೆಯ ಸಾರ್ಧಯತೆ ಇದೆ. ಇನ್ನು ನದಿಯ 50 ಕಿ.ಮೀ ಉದ್ದದ ಕಾಲುವೆ ಮೂಲಕವೇ 70 ದಶಲಕ್ಷ ಕಿಲೋವ್ಯಾಟ್‌ನಷ್ಟುಉತ್ಪಾದನೆಯ ಸಾಮರ್ಥ್ಯವಿದೆ. ಇದು ಚೀನಾದ ಹುಬೇ ಪ್ರಾಂತ್ಯದಲ್ಲಿನ ತ್ರಿ ಗೋರ್ಜಸ್ ಪವರ್ ಸ್ಟೇಷನ್‌ನ 3 ಪಟ್ಟು ಅಧಿಕ ಎಂಬುದೇ ಯಾರ್ಲುಂಗ್ ನದಿಯ ಸಾಮರ್ಥ್ಯಕ್ಕೆ ಸಾಕ್ಷಿ. ಈ ಹೊಸ ಯೋಜನೆ 2030ರ ವೇಳೆಗೆ ಇಂಗಾಲ ಹೊರಸೂಸುವಿಕೆಯ ಗರಿಷ್ಠ ಮಟ್ಟತಲುಪುವ ಮತ್ತು 2060ರ ವೇಳೆಗೆ ಇಂಗಾಲ ತಟಸ್ಥ ಮಟ್ಟಕ್ಕೆ ತಲುಪುವ ಚೀನಾ ಗುರಿ ಮುಟ್ಟಲು ನೆರವಾಗಲಿದೆ ಎನ್ನಲಾಗಿದೆ.