ಸೇನಾ ಕಾರ್ಯಾಚರಣೆಯ ಸೂಚನೆ, 21 ಚೀನಾ ಯುದ್ಧವಿಮಾನ ತೈವಾನ್ ಪ್ರವೇಶ!
ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ತೈವಾನ್ ಭೇಟಿ ಚೀನಾದ ಉಗ್ರಾವತಾರಕ್ಕೆ ಕಾರಣವಾಗಿದೆ. ಅದರಲ್ಲೂ ಪೆಲೋಸಿ ಭೇಟಿಯ ಬೆನ್ನಲ್ಲಿಯೇ ಶ್ವೇತಭವನ ಹೊರಡಿಸಿದ ಪ್ರಕಟಣೆಯ ಬೆನ್ನಲ್ಲಿಯೇ ಚೀನಾ ಕೆಂಡಾಮಂಡಲವಾಗಿದ್ದು, ತೈವಾನ್ ವಿರುದ್ಧ ಸೇನಾ ಕಾರ್ಯಾಚರಣೆಯ ಸೂಚನೆ ನೀಡಿದೆ. ಈ ನಡುವೆ ತೈವಾನ್, 21 ಚೀನಾ ಯುದ್ಧವಿಮಾನಗಳು ತಮ್ಮ ವಾಯುಗಡಿ ಪ್ರವೇಶ ಮಾಡಿದೆ ಎಂದು ಹೇಳಿದೆ.
ತೈಪೆ ಸಿಟಿ (ಆ.2): ಯುಎಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಚೀನಾ ಸೇನಾ ಕಾರ್ಯಾಚರಣೆ ಆರಂಭಿಸಿದೆಯೇ? ತೈವಾನ್‌ನ ಸೇನೆಯು ಇಂತಹದೊಂದು ಆಘಾತಕಾರಿ ಹೇಳಿಕೆಯನ್ನು ನೀಡಿದೆ. ಚೀನಾದ 21 ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ಹೇಳಿದೆ. ತೈವಾನ್‌ಗೆ ನ್ಯಾನ್ಸಿ ಪೆಲೋಸಿಯ ಭೇಟಿಯಿಂದ ಕೆಂಡಾಮಂಡಲವಾಗಿರುವ ಚೀನಾ, 50 ನಿಮಿಷಗಳಲ್ಲಿ ತೈವಾನ್‌ನ ಸುತ್ತಲೂ ಮಿಲಿಟರಿ ಡ್ರಿಲ್ ಮತ್ತು 'ಮಿಲಿಟರಿ ಕ್ರಮ' ಬೆದರಿಕೆ ಹಾಕಿದೆ.. ತೈವಾನ್‌ನ ಕೆಲವು ಭಾಗಗಳಲ್ಲಿ ಉದ್ದೇಶಿತ ಮಿಲಿಟರಿ ಕ್ರಮವನ್ನು ಕೈಗೊಳ್ಳಬಹುದು ಎಂದು ಚೀನಾ ಹೇಳಿದೆ. ಅಮೆರಿಕದ ಆಡಳಿತದಲ್ಲಿ ನಂ.3 ಎನಿಸಿಕೊಂಡಿರುವ ಸ್ಪೀಕರ್ ನ್ಯಾನ್ಸಿ ಪೆಲೋಸಿ, ರಾತ್ರಿ 8.14ರ ವೇಳೆಗೆ ತೈವಾನ್ ತಲುಪಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿಯೇ, ಚೀನಾವು ತೈವಾನ್‌ನಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಮಿಲಿಟರಿ ಕ್ರಮಗಳನ್ನು ಆಯ್ದುಕೊಂಡಿದೆ ಎಂದು ಹೇಳಲಾಗಿದೆ. ಇದನ್ನು ತೈವಾನ್ ಕೂಡ ಖಚಿತಪಡಿಸಿದೆ. ಪೆಲೋಸಿ ಅಮೆರಿಕದಿಂದ ತೈವಾನ್ ತಲುಪಿದ ನಂತರ, ಚೀನಾ ಗುರುವಾರದಿಂದ ತೈವಾನ್‌ನ ಆರು ಕಡೆಗಳಲ್ಲಿ ಮಿಲಿಟರಿ ವ್ಯಾಯಾಮವನ್ನು ಘೋಷಿಸಿದೆ.
ಸರ್ವ ದಿಕ್ಕುಗಳಿಂದ ತೈವಾನ್ ಮೇಲೆ ದಾಳಿ: ತೈವಾನ್ ಸುತ್ತ ನಡೆಯಲಿರುವ ಚೀನಾದ ಮಿಲಿಟರಿ ವ್ಯಾಯಾಮ ಬಹಳ ವಿಭಿನ್ನವಾಗಿದ್ದು ಮತ್ತು ಆತಂಕಕಾರಿಯಾಗಿದೆ. ಇದರಲ್ಲಿ ಚೀನಾ ತೈವಾನ್ ಅನ್ನು ಸುತ್ತುವರಿದು ಆರು ಪ್ರದೇಶಗಳಲ್ಲಿ ಮಿಲಿಟರಿ ಕಸರತ್ತು ನಡೆಸಲಿದೆ. ಆರು ಪ್ರದೇಶಗಳಲ್ಲಿ ಅಗತ್ಯ ಸೇನಾ ಸಮರಾಭ್ಯಾಸ ನಡೆಸುವುದಾಗಿ ಚೀನಾ ಸೇನೆ ಹೇಳಿದೆ. ಗುರುವಾರದಿಂದ ಭಾನುವಾರದವರೆಗೆ ತೈವಾನ್ ಸುತ್ತಮುತ್ತಲಿನ ಆರು ಪ್ರದೇಶಗಳಲ್ಲಿ ಅಗತ್ಯ ಸೇನಾ ಸಮರಾಭ್ಯಾಸ ನಡೆಸುವುದಾಗಿ ಚೀನಾ ಸೇನೆಯೂ ಘೋಷಣೆ ಮಾಡಿದೆ. ಇದು ಲೈವ್ ಫೈರ್ ಡ್ರಿಲ್‌ಗಳನ್ನು ಸಹ ಒಳಗೊಂಡಿರುತ್ತದೆ. ಪಿಎಲ್‌ಎ ಈಸ್ಟರ್ನ್ ಥಿಯೇಟರ್ ಕಮಾಂಡ್ ತೈವಾನ್ ಸುತ್ತಲೂ ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತದೆ. ಇದರಲ್ಲಿ, ದ್ವೀಪದ (ತೈವಾನ್) ಸುತ್ತ ಉತ್ತರ, ನೈಋತ್ಯ ಮತ್ತು ಆಗ್ನೇಯದಲ್ಲಿ ದೀರ್ಘ-ಶ್ರೇಣಿಯ ಫಿರಂಗಿಗಳಿಂದ ಶೂಟಿಂಗ್ ಇರುತ್ತದೆ. ಇದಲ್ಲದೇ, ದ್ವೀಪದ ಪೂರ್ವದಲ್ಲಿ ಕ್ಷಿಪಣಿ ಪರೀಕ್ಷಾರ್ಥ ಗುಂಡಿನ ದಾಳಿ ನಡೆಯಲಿದೆ. ತೈವಾನ್‌ಗೆ ಪೆಲೋಸಿಯ ಭೇಟಿಯನ್ನು ಎದುರಿಸಲು ಪಿಎಲ್‌ಎ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತದೆ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಹೇಳಿದೆ. ಚೀನಾ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸುತ್ತದೆ ಎಂದು ಹೇಳಲಾಗಿದೆ.
ಚೀನಾದ ಮಹಾ ಎಚ್ಚರಿಕೆಯ ನಡುವೆ ತೈವಾನ್‌ಗೆ ಕಾಲಿಟ್ಟ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ!
ಈ ಸೇನಾ ಸಮರಾಭ್ಯಾಸದ ವಿಚಾರದಲ್ಲಿ ತೈವಾನ್‌ನ ಪ್ರತಿಕ್ರಿಯೆಯೂ ಬಂದಿದೆ. ಅವರು ಇದನ್ನು 'ಮಾನಸಿಕ ಬೆದರಿಕೆ' ಎಂದು ತೈವಾನ್ ಕರೆದಿದೆ. ತೈವಾನ್‌ನಲ್ಲೂ ಲೆವೆಲ್-2 ಎಚ್ಚರಿಕೆ ನೀಡಲಾಗಿದೆ. ಯುದ್ಧಕ್ಕೆ ಸನ್ನದ್ಧರಾಗಲು ಈ ಎಚ್ಚರಿಕೆ ನೀಡಲಾಗಿದೆ. 1996 ರ ನಂತರ ಮೊದಲ ಬಾರಿಗೆ ತೈವಾನ್‌ನಲ್ಲಿ ಇಂತಹ ಎಚ್ಚರಿಕೆಯನ್ನು ನೀಡಲಾಗಿದೆ.
ಸ್ಪೀಕರ್ ತೈವಾನ್ ಭೇಟಿಗೆ ಕೆಂಡ, ಭಾರತದ ಚೀನಾ ರಾಯಭಾರ ಕಚೇರಿಯಿಂದ ಅಮೆರಿಕಾಗೆ ಎಚ್ಚರಿಕೆ!
ತೈವಾನ್‌ನಲ್ಲಿ ಅಮೆರಿಕ ಸೈನಿಕರು: ಪೆಲೋಸಿ ಭೇಟಿಯ ಹಲವು ದಿನಗಳ ಮೊದಲು, ಅನೇಕ ಅಮೆರಿಕ ಸೈನಿಕರು ಮತ್ತು ಮಿಲಿಟರಿ ತಾಂತ್ರಿಕ ತಜ್ಞರು ತೈವಾನ್ ತಲುಪಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಮಿಲಿಟರಿ ಪರಿಭಾಷೆಯಲ್ಲಿ ಇದನ್ನು ಬೂಟ್ ಆನ್ ಗ್ರೌಂಡ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ದಕ್ಷಿಣ ಚೀನಾ ಸಮುದ್ರ ಅಥವಾ ತೈವಾನ್ ಜಲಸಂಧಿಯಲ್ಲಿ ಚೀನಾದ ಅಬ್ಬರವನ್ನು ತಡೆಯಬೇಕು ಎಂದು ಅಮೆರಿಕ ಈಗ ನಿರ್ಧರಿಸಿದೆ. ತನ್ನ ಪಡೆಗಳು ತೈವಾನ್‌ನಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಯುಎಸ್ ಇನ್ನೂ ಸ್ಪಷ್ಟಪಡಿಸಿಲ್ಲ. ಕಳೆದ ವಾರ, ಪೆಂಟಗನ್ ವಕ್ತಾರರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.