ನವದೆಹಲಿ(ಜೂ.08): ಭಾರತದ ಜೊತೆಗೆ ಗಡಿ ವಿವಾದದ ಕುರಿತು ಮಾತುಕತೆ ನಡೆಸುತ್ತಿರುವ ವೇಳೆಯಲ್ಲೇ ತನ್ನ ಈಶಾನ್ಯ ಭಾಗದ ಅತಿ ಎತ್ತರದ ಪ್ರದೇಶದಲ್ಲಿ ಸಾವಿರಾರು ಪ್ಯಾರಾಚೂಟ್‌ಗಳಲ್ಲಿ ಯೋಧರನ್ನು ಇಳಿಸುವ ಮೂಲಕ ಚೀನಾ ಮತ್ತೊಮ್ಮೆ ಧಾಷ್ಟ್ರ್ಯ ಪ್ರದರ್ಶನ ಮಾಡಿದೆ. ಪ್ಯಾರಾಚೂಟ್‌ಗಳ ಜೊತೆಗೆ ಸಾಕಷ್ಟುಸಶಸ್ತ್ರ ವಾಹನಗಳೂ ಇಲ್ಲಿಗೆ ಆಗಮಿಸಿವೆ.

ತುರ್ತು ಸಂದರ್ಭದಲ್ಲಿ ಎಂತಹ ಕಠಿಣ ಪ್ರದೇಶಕ್ಕಾದರೂ ಕ್ಷಣ ಮಾತ್ರದಲ್ಲಿ ಯೋಧರು ಹಾಗೂ ಯುದ್ಧದ ಸಾಮಗ್ರಿಗಳನ್ನು ನಿಯೋಜಿಸುವ ಶಕ್ತಿ ತನಗಿದೆ ಎಂಬುದನ್ನು ತೋರಿಸಲು ಚೀನಾ ಈ ಕಸರತ್ತು ನಡೆಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಈ ಮಿಲಿಟರಿ ಕಾರ್ಯಾಚರಣೆಯ ಕುರಿತು ಚೀನಾ ಸೆಂಟ್ರಲ್‌ ಟೆಲಿವಿಷನ್‌ (ಸಿಸಿಟೀವಿ) ಶನಿವಾರ ವರದಿ ಮಾಡಿದೆ. ಆದರೆ, ಪ್ಯಾರಾಟ್ರೂಪರ್‌ಗಳು ಈ ಪ್ರದೇಶಕ್ಕೆ ಇಳಿದಿದ್ದು ಯಾವಾಗ ಎಂಬುದರ ಕುರಿತು ಮಾಹಿತಿ ಲಭಿಸಿಲ್ಲ. ಹಾಗೆಯೇ, ಈ ಸ್ಥಳ ಭಾರತದ ಗಡಿಯಿಂದ ಎಷ್ಟುದೂರದಲ್ಲಿದೆ ಎಂಬುದೂ ತಿಳಿದುಬಂದಿಲ್ಲ.

ಚೀನಾದಲ್ಲಿ ಮೊದಲ ಬಾರಿ ಕೊರೋನಾ ವೈರಸ್‌ ಪತ್ತೆಯಾಗಿ, ಈಗ ಸಂಪೂರ್ಣ ವೈರಸ್‌ಮುಕ್ತವಾಗಿರುವ ಹುಬೇ ಪ್ರಾಂತದಿಂದ ವಿಮಾನ, ರೈಲ್ವೆ ಮುಂತಾದವುಗಳ ಸಹಾಯದಿಂದ ಪ್ಯಾರಾಟ್ರೂಪರ್‌ಗಳನ್ನು ಇಲ್ಲಿಗೆ ಕಳಿಸಲಾಗಿದೆ. ಹುಬೇ ಪ್ರಾಂತದಿಂದ ಈ ಅನಾಮಧೇಯ ಸ್ಥಳ ಸಾವಿರಾರು ಕಿ.ಮೀ. ದೂರದಲ್ಲಿದೆ ಎಂದು ಹೇಳಲಾಗಿದೆ. ಕೆಲವೇ ಗಂಟೆಗಳಲ್ಲಿ ಇಡೀ ಕಾರ್ಯಾಚರಣೆ ಮುಗಿದಿದೆ ಎಂದು ವರದಿ ಹೇಳಿದೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!

ಗಡಿ ವಿವಾದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಶನಿವಾರವಷ್ಟೇ ಎರಡೂ ದೇಶಗಳ ಸೇನೆಗಳು ಗಡಿಯಿಂದ ಹಿಂದೆ ಸರದಿವೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ಬೆಳಕಿಗೆ ಬಂದಿರುವುದು ಮತ್ತೆ ಎರಡೂ ದೇಶಗಳ ನಡುವೆ ತ್ವೇಷಮಯ ಪರಿಸ್ಥಿತಿ ಹುಟ್ಟುಹಾಕುವ ಸಾಧ್ಯತೆಯಿದೆ.