ನವದೆಹಲಿ(ಜ.12): ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿ ಬೀಡುಬಿಟ್ಟು, ಭಾರತಕ್ಕೆ ಸಡ್ಡು ಹೊಡೆಯುವ ಯತ್ನ ಮಾಡಿದ್ದ ಚೀನಾ ಸೈನಿಕರು ಇದೀದ ಚಳಿಗೆ ಹೆದರಿ ಜಾಗ ಖಾಲಿ ಮಾಡಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಇದೀಗ ಮೈಹೆಪ್ಪುಗಟ್ಟುವ ಚಳಿ ಇದ್ದು, ಮಾನವ ವಾಸವನ್ನು ಅಸಾಧ್ಯವೆನ್ನುವಂತೆ ಮಾಡಿದೆ. ಹೀಗಾಗಿ ಕಳೆದ ಕೆಲ ದಿನಗಳ ಅವಧಿಯಲ್ಲಿ ಗಡಿ ಭಾಗದಲ್ಲಿ ನಿಯೋಜನೆ ಮಾಡಿದ್ದ 50000 ಯೋಧರ ಪೈಕಿ, ಮುಂಚೂಣಿ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 10000 ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಹಿಂದಕ್ಕೆ ಕರೆಸಿಕೊಂಡು ಯೋಧರೆಲ್ಲಾ ಭಾರತದ ಭಾಗದಿಂದ 200 ಕಿ.ಮೀ ದೂರದಲ್ಲಿ ನಿಯೋಜನೆಗೊಂಡಿದ್ದರು ಎನ್ನಲಾಗಿದೆ. ಆದರೆ ಈ ಭಾಗದಲ್ಲಿ ಚೀನಾದ ಯಾವುದೇ ಕುತಂತ್ರವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತ ನಿಯೋಜಿಸಿರುವ ಯೋಧರು ಅದೇ ಸ್ಥಳದಲ್ಲೇ ಉಳಿದುಕೊಂಡಿದ್ದಾರೆ.

ಕಳೆದ ವರ್ಷದ ಮಾಚ್‌ರ್‍-ಏಪ್ರಿಲ್‌ ವೇಳೆಗೆ ಭಾರತದ ಗಡಿ ಭಾಗದಲ್ಲಿ ತನ್ನ 50 ಸಾವಿರ ಯೋಧರನ್ನು ಚೀನಾ ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಅಷ್ಟೇ ಪ್ರಮಾಣದ ಸೈನಿಕರನ್ನು ನಿಯೋಜಿಸಿತ್ತು.