ವಾಷಿಂಗ್ಟನ್(ಮಮೇ.14)‌: ಕೊರೋನಾ ವೈರಸ್‌ ತನ್ನಲ್ಲಿ ವಿಶ್ವದಲ್ಲೇ ಮೊದಲ ಬಾರಿ ಕಾಣಿಸಿಕೊಂಡರೂ ನಿಯಂತ್ರಿಸದೆ ಸೋಂಕು ವಿಶ್ವವ್ಯಾಪಿ ಮಾಡಿದ ಆರೋಪ ಹೊತ್ತಿರುವ ಚೀನಾ ಮೇಲೆ ಅಮೆರಿಕ ಮತ್ತೊಂದು ಗಂಭೀರ ಆರೋಪ ಹೊರಿಸಿದೆ.

ಕೊರೋನಾ ವೈರಸ್‌ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮೇಲೆ ಒತ್ತಡ ಹೇರಲು ಚೀನಾ ಯತ್ನಿಸಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆ (ಸಿಐಎ) ಸಂದೇಹ ವ್ಯಕ್ತಪಡಿಸಿದೆ.

‘ಕೊರೋನಾವನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಬೇಡಿ. ಒಂದು ವೇಳೆ ಘೋಷಿಸಿದರೆ ನಿಮಗೆ ಸಹಕಾರ ನೀಡುವುದನ್ನು ನಿಲ್ಲಿಸಲಾಗುವುದು’ ಎಂದು ಡಬ್ಲ್ಯುಎಚ್‌ಗೆ ಬ್ಲ್ಯಾಕ್‌ಮೇಲ್‌ ಮಾಡಲು ಚೀನಾ ಯತ್ನಿಸಿತ್ತು ಎಂದು ಸಿಐಎ ಗುಪ್ತಚರ ವರದಿ ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಚೀನಾದ ಬಳಿಕ ಜನವರಿಯಲ್ಲಿ ಸ್ಪೇನ್‌ ಹಾಗೂ ಇಟಲಿಯಲ್ಲಿ ಕೊರೋನಾ ತಾಂಡವವಾಡಲು ಆರಂಭಿಸಿತ್ತು. ಈ ವೇಳೆ ಚೀನಾ ಈ ಬೆದರಿಕೆ ತಂತ್ರ ಅನುಸರಿಸಿತ್ತು ಎಂದು ಸಿಐಎ ದೂರಿದೆ.

ಕೊರೋನಾ ತೀವ್ರವಾಗಿದ್ದರೂ ‘ಏನೂ ಆಗೇ ಇಲ್ಲ’ ಎಂಬಂತೆ ವಾಸ್ತವ ಮುಚ್ಚಿಡಲು ಚೀನಾ ಯತ್ನಿಸಿತ್ತು ಎಂದು ಗುಪ್ತಚರ ವರದಿ ಹೇಳಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಡಬ್ಲುಎಚ್‌ಒ, ‘ವಸ್ತುಸ್ಥಿತಿ ಆಧರಿಸಿ ತನ್ನದೇ ಆದ ನಿರ್ಧಾರವನ್ನು ಸಂಸ್ಥೆ ತೆಗೆದುಕೊಂಡಿದೆ. ಮಾಧ್ಯಮದಲ್ಲಿ ವರದಿ ಆದಂತೆ ಚೀನಾ ಅಧ್ಯಕ್ಷರು ಹಾಗೂ ಡಬ್ಲುಎಚ್‌ಒ ಮುಖ್ಯಸ್ಥರ ನಡುವೆ ಯಾವುದೇ ಮಾತುಕತೆ ಜನವರಿಯಲ್ಲಿ ನಡೆದಿಲ್ಲ’ ಎಂದಿದೆ.