ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಗೆ ಭದ್ರತೆ ಹೆಸರಲ್ಲಿ ಮಿಲಿಟರಿ ಪೋಸ್ಟ್‌, ಈ ವಿಶೇಷ ಪೋಸ್ಟ್‌ಗಳಲ್ಲಿ ತನ್ನ ಯೋಧರ ನಿಯೋಜನೆಗೆ ಪಾಕ್‌ಗೆ ಕೋರಿಕೆ

ಇಸ್ಲಾಮಾಬಾದ್‌(ಆ.18): ಭಾರತದ ದಕ್ಷಿಣ ತುದಿಯ ಶ್ರೀಲಂಕಾವನ್ನು ತನ್ನ ಸಾಲದ ಬಲೆಗೆ ಹಾಕಿಕೊಂಡು, ಅಲ್ಲಿ ಇದೀಗ ತನ್ನ ಬೇಹುಗಾರಿಕಾ ನೌಕೆಯನ್ನು ತಂದು ನಿಲ್ಲಿಸಿರುವ ಚೀನಾ, ಇದೀಗ ಇಂಥದ್ದೇ ಸಾಲದ ಬಲೆಯಲ್ಲಿ ಸಿಕ್ಕಿರುವ ಪಾಕಿಸ್ತಾನದಲ್ಲಿ ತನ್ನ ಯೋಧರ ನಿಯೋಜನೆಗೆ ದೊಡ್ಡ ಸಂಚು ರೂಪಿಸಿದೆ. ಇದು ಭಾರತದ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

ಶತಮಾನಗಳ ಹಿಂದಿದ್ದ ಸಿಲ್‌್ಕ ರೂಟ್‌ ಅನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮತ್ತು ತನ್ನ ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಚೀನಾ ಸರ್ಕಾರ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆ ರೂಪಿಸಿದೆ. ಈ ಸಂಬಂಧ 147 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಚೀನಾ, ಅವುಗಳಿಗೆ ನೆರವಿನ ರೂಪದಲ್ಲಿ ಸಾಲ ನೀಡಿ, ಬಳಿಕ ಸಾಲದ ಬಲೆಗೆ ಬಿದ್ದ ಮೇಲೆ ಆ ದೇಶಗಳು ತಾನು ಹೇಳಿದಂತೆ ಕೇಳುವ ತಂತ್ರ ರೂಪಿಸಿದೆ.

4 ಲಕ್ಷ ಪಾಕ್​​ ಪ್ರಜೆಗಳ ಮುಂದೆ ಭಾರತದ ತಾಕತ್ತು ಹೇಳಿದ ಇಮ್ರಾನ್​ ಖಾನ್

ಅದರ ಭಾಗವಾಗಿ ಪಾಕಿಸ್ತಾನದಲ್ಲೂ ಕಾಮಗಾರಿಯನ್ನು ಚೀನಾ ಕಂಪನಿಗಳು ಕೈಗೊಂಡಿವೆ. ಆದರೆ ಹಲವು ಬಾರಿ ಚೀನಾ ಕಾರ್ಮಿಕರು, ಅಧಿಕಾರಿಗಳ ಮೇಲೆ ಪಾಕಿಸ್ತಾನೀಯರು ದಾಳಿ ನಡೆಸಿದ್ದಾರೆ. ಹೀಗಾಗಿ ಅವರಿಗೆ ಭದ್ರತೆ ನೀಡುವ ಹೆಸರಲ್ಲಿ ಯೋಜನೆ ಸಾಗಿ ಹೋಗುವ ಮಾರ್ಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಅಲ್ಲಿ ತನ್ನ ಯೋಧರನ್ನು ನಿಯೋಜನೆ ಮಾಡಲು ಚೀನಾ ಸರ್ಕಾರ ಪ್ರಸ್ತಾಪಿಸಿದೆ.

ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ನೋಂಗ್‌ ರಾಂಗ್‌, ಈಗಾಗಲೇ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ, ಸೇನಾ ಮುಖ್ಯಸ್ಥ ಜ.ಖಮರ್‌ ಜಾವೇದ್‌ ಬಜ್ವಾ ಜೊತೆಗೆ ಮಾತುಕತೆ ನಡೆಸಿದ್ದಾರೆ. ಚೀನಾ ಸೇನೆ ಕೂಡಾ ಸೇನೆ ನಿಯೋಜನೆಗೆ ಅವಕಾಶ ನೀಡುವಂತೆ ಪಾಕ್‌ ಮೇಲೆ ಒತ್ತಡ ಹೇರುತ್ತಿದೆ. ಆರ್ಥಿಕವಾಗಿ ಮತ್ತು ಮಿಲಿಟರಿಗಾಗಿ ಪೂರ್ಣ ಚೀನಾವನ್ನೇ ನಂಬಿರುವ ಪಾಕಿಸ್ತಾನ ಚೀನಾದ ಬೇಡಿಕೆಯನ್ನು ತಳ್ಳಿಹಾಕುವಂತೆಯೂ ಇಲ್ಲ, ಒಪ್ಪಿಕೊಳ್ಳುವಂತೆಯೂ ಇಲ್ಲ ಎಂಬ ಪರಿಸ್ಥಿತಿ ತಲುಪಿದೆ.

ಇದರ ಜೊತೆಗೆ ಆಯಕಟ್ಟಿನ ಗ್ವಾದಾರ್‌ ಬಂದರಿನಲ್ಲೂ ಭದ್ರತಾ ಚೆಕ್‌ಪೋಸ್ಟ್‌ ಆರಂಭಕ್ಕೆ ಮತ್ತು ಗ್ವಾದಾರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತನ್ನ ಯುದ್ಧ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡುವಂತೆಯೂ ಚೀನಾ ಪಾಕಿಸ್ತಾನದ ಮೇಲೆ ನಾನಾ ರೀತೀಯ ಒತ್ತಡ ಹೇರುತ್ತಿದೆ. ಒಂದು ವೇಳೆ ಇದಕ್ಕೆ ಪಾಕಿಸ್ತಾನ ಒಪ್ಪಿಕೊಂಡರೆ, ಭಾರತದ ಬಗಲಲ್ಲೇ ಚೀನಾದ ಮತ್ತಷ್ಟುಸೇನೆ ನಿಯೋಜನೆಗೊಂಡು, ಭಾರತಕ್ಕೆ ಭದ್ರತಾ ಆತಂಕ ಹೆಚ್ಚಲಿದೆ.