ಬೀಜಿಂಗ್‌ [ಮಾ.18]: ಕೊರೋನಾ ವೈರಸ್‌ ವಿರುದ್ಧ ಲಸಿಕೆ ಕಂಡು ಹಿಡಿ​ಯ​ಲು ವಿಶ್ವದ ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಅವಿರತವಾಗಿ ಸಂಶೋಧನೆ ನಡೆಸುತ್ತಿರುವ ಹೊತ್ತಿನಲ್ಲೇ, ಫವಿಪಿರಾವಿರ್‌ ಎಂಬ ಲಸಿಕೆಯನ್ನು ಚೀನಾ ವಿಜ್ಞಾನಿಗಳು ಯಶಸ್ವಿಯಾಗಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ. ಈ ಪ್ರಯೋಗದ ವೇಳೆ ರೋಗಿಗಳಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಜೊತೆಗೆ ರೋಗಿಗಳಲ್ಲಿ ಜ್ವರ ನಿಯಂತ್ರಣದ ಅವಧಿ 4.2 ದಿನಗಳಿಂದ 2.5 ದಿನಕ್ಕೆ ಇಳಿದಿದೆ ಎಂದು ಸ್ವತಃ ಸರ್ಕಾರ ಪ್ರಕಟಿಸಿದೆ. ಹೀಗಾಗಿ ವಿಶ್ವದಲ್ಲಿ 1.80 ಲಕ್ಷಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿರುವ ವೈರಸ್‌ ನಿಯಂತ್ರಣ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿದೆ.

ಫವಿಪಿರಾವಿರ್‌ ಎಂಬ ಲಸಿಕೆಯನ್ನು 2014ರಲ್ಲೇ ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ವಿವಿಧ ರೀತಿಯ ವೈರಸ್‌ ನಿಯಂತ್ರಣಕ್ಕಾಗಿ ಇದನ್ನು ಬಳಸಲಾಗುತ್ತಿತ್ತು. ಈ ಲಸಿಕೆಯನ್ನೇ ಇದೀಗ ಚೀನಾದ ವಿಜ್ಞಾನಿಗಳು ಕೊರೋನಾ ಸೋಂಕು ಪೀಡಿತರ ಮೇಲೆ ಪ್ರಯೋಗ ನಡೆಸಿದ್ದಾರೆ. ಈ ವೇಳೆ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

ಹೆಚ್ಚಾಗುತ್ತಿರುವ ಕೋರೋನಾ ಕೇಸ್: ಮತ್ತೊಂದು ವಾರ ಕರ್ನಾಟಕ ಸ್ತಬ್ಧ..?...

ಮಾರುಕಟ್ಟೆಗೆ ಬಿಡುಗಡೆಗೂ ಮುನ್ನ ರೋಗಿಗಳ ಮೇಲೆ ನಡೆಸುವ ಕ್ಲಿನಿಕಲ್‌ ಪ್ರಯೋಗದ ವೇಳೆ ಲಸಿಕೆ ಪರಿಣಾಮಕಾರಿ ಫಲಿತಾಂಶ ನೀಡಿದೆ. 35 ರೋಗಿಗಳ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿತ್ತು. ಈ ವೇಳೆ ರೋಗಿಗಳಲ್ಲಿ ಜ್ವರ ನಿಯಂತ್ರಣಕ್ಕೆ ಬರುವ ಅವಧಿ ಗಣನೀಯವಾಗಿ ಇಳಿಕೆಯಾಗಿದೆ. ಲಸಿಕೆ ಸೇವನೆ ಬಳಿಕ ರೋಗಿಗಳಲ್ಲಿ ಗುಣಮುಖವಾಗುವ ಲಕ್ಷಣಗಳು ಕಂಡುಬಂದಿದೆ. ಜೊತೆಗೆ ರೋಗಿಗಳಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಹೀಗಾಗಿ ಆದಷ್ಟುಶೀಘ್ರವೇ ಇದನ್ನು ಕೊರೋನಾ ನಿಯಂತ್ರಣಕ್ಕೆ ಬಳಸುವ ಔಷಧಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

ಉತ್ಪಾದನೆಗೆ ಸಿದ್ಧತೆ:  ಇದೇ ವೇಳೆ ಔಷಧಿ ಯಶಸ್ವಿಯಾಗುತ್ತಲೇ ಚೀನಾದ ಔಷಧ ತಯಾರಿಕಾ ಕಂಪನಿಯೊಂದಕ್ಕೆ ಸರ್ಕಾರ ಭಾರೀ ಪ್ರಮಾಣದಲ್ಲಿ ಔಷಧ ಉತ್ಪಾದನೆಗೆ ಅನುಮತಿಯನ್ನೂ ನೀಡಿದೆ. ಅಮೆರಿಕ ಮತ್ತು ಫ್ರಾನ್ಸ್‌ ಮೂಲದ ಕಂಪನಿಗಳು ಕೊರೋನಾ ಔಷಧಿಯನ್ನು ರೋಗಿಗಳ ಮೇಲೆ ಪ್ರಯೋಗಿಸಲು ಆರಂಭಿಸಿದ ಸುದ್ದಿಯ ಬೆನ್ನಲ್ಲೇ, ಭಾರೀ ಪ್ರಮಾಣದಲ್ಲಿ ಔಷಧಿ ಉತ್ಪಾದಿಸುವಂತೆ ಚೀನಾ ಸರ್ಕಾರ ತನ್ನ ದೇಶದ ಕಂಪನಿಗೆ ಸೂಚಿಸಿದೆ.