* ಭರದಿಂದ ಸಾಗಿದ ಚೀನಾದ ರಕ್ಷಣಾ ಕಾರ್ಯ* ನೆಲಕ್ಕಪ್ಪಳಿಸಿದ ಚೀನಾ ವಿಮಾನದ ಒಬ್ಬ ಪ್ರಯಾಣಿಕನೂ ಪತ್ತೆ ಇಲ್ಲ* ವಿಮಾನದ ಕೆಲವೊಂದು ಅವಶೇಷ ಮಾತ್ರ ಪತ್ತೆ* 132 ಮಂದಿಗಾಗಿ ನೂರಾರು ಜನರ ಶೋಧ
ಬೀಜಿಂಗ್(ಮಾ.23): ಪರ್ವತ ಪ್ರದೇಶದಲ್ಲಿ ಹಠಾತ್ತನೆ ಕ್ಷಿಪಣಿ ರೀತಿ ನೆಲಕ್ಕಪ್ಪಳಿಸಿ ಹೊತ್ತಿ ಉರಿದ ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನದಲ್ಲಿನ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 1000 ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆಯಾದರೂ, ವಿಮಾನದ ಒಬ್ಬನೇ ಒಬ್ಬ ಪ್ರಯಾಣಿಕನೂ ಈವರೆಗೆ ಜೀವಂತವಾಗಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಲ್ಲೊಂದು ಇಲ್ಲೊಂದು ಎಂಬಂತೆ ವಿಮಾನದ ಸಣ್ಣಪುಟ್ಟಅವಶೇಷಗಳಷ್ಟೇ ದೊರೆತಿವೆ. ಹೀಗಾಗಿ ವಿಮಾನದಲ್ಲಿದ್ದ ಎಲ್ಲ 132 ಮಂದಿ ಸುಟ್ಟು ಭಸ್ಮವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಚೀನಾ ಈಸ್ಟರ್ನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಸೋಮವಾರ 123 ಪ್ರಯಾಣಿಕರು ಹಾಗೂ 9 ಸಿಬ್ಬಂದಿಯನ್ನು ಹೊತ್ತು ಹಾರುತ್ತಿತ್ತು. ಆದರೆ ಸೋಮವಾರ ಮಧ್ಯಾಹ್ನ 2.38ರ ವೇಳೆಗೆ ದಕ್ಷಿಣ ಚೀನಾದ ಪರ್ವತ ಪ್ರದೇಶದ ಮೇಲೆ ಬಿದ್ದಿತ್ತು. ಬಳಿಕ ಇಡೀ ಪರ್ವತಕ್ಕೇ ಬೆಂಕಿ ಹೊತ್ತಿಕೊಂಡಿತ್ತು. ಈ ದುರಂತ ನಡೆದು 24 ತಾಸಿಗಿಂತಲೂ ಅಧಿಕ ಸಮಯ ಕಳೆದಿದ್ದರೂ ಒಬ್ಬರೇ ಒಬ್ಬ ವ್ಯಕ್ತಿಯೂ ಜೀವಂತವಾಗಿ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
ಚೀನಾದ ನೂರಾರು ರಕ್ಷಣಾ ಸಿಬ್ಬಂದಿ ಪರ್ವತ ಪ್ರದೇಶದಲ್ಲಿ ರಾತ್ರಿಯಿಡೀ ಪ್ರಯಾಣಿಕರು ಹಾಗೂ ಅವಶೇಷಗಳಿಗಾಗಿ ಜಾಲಾಡಿದ್ದಾರೆ. ವಿಮಾನ ದುರಂತಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿ ಹೊಂದಿರುವ ಬ್ಲಾಕ್ ಬಾಕ್ಸ್ ಬಗ್ಗೆಯೂ ಸುಳಿವು ಸಿಕ್ಕಿಲ್ಲ. ಈ ನಡುವೆ ದುರಂತ ಕುರಿತು ಚೀನಾ ಸರ್ಕಾರ ತನಿಖೆಗೆ ಆದೇಶಿಸಿದೆ.
ದುರಂತದ ಕೊನೆ ಕ್ಷಣಗಳು
- ಟೇಕಾಫ್ ಆದ ಬಳಿಕ ವಿಮಾನ 29000 ಅಡಿ ಎತ್ತರದಲ್ಲಿ ಹಾರುತ್ತಿತ್ತು
- ಸ್ವಲ್ಪ ಸಮಯದ ಬಳಿಕ 7400 ಅಡಿ, ನಂತರ 1200 ಅಡಿಗೆ ಕುಸಿಯಿತು
- ತಕ್ಷಣವೇ ಸ್ವಲ್ಪ ಮೇಲಕ್ಕೆ ಏರಿತಾದರೂ ಬಳಿಕ ಸಂಪರ್ಕ ಕಡಿತಗೊಂಡಿತು
- ಕುಸಿಯಲು ಆರಂಭಿಸಿದ 96 ಸೆಕೆಂಡ್ ಬಳಿಕ ಮಾಹಿತಿ ರವಾನೆ ಸ್ತಬ್ಧವಾಯಿತು
- ಪೈಲಟ್‌ನಿಂದ ಯಾವುದಾದರೂ ಮಾಹಿತಿ ಬಂದಿದೆಯಾ ಎಂಬ ವಿವರವಿಲ್ಲ
