ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಈಗಾಗಲೇ 630 ಜನರು ಮೃತಪಟ್ಟಿದ್ದು, 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಬರೀ ಚೀನಾದಲ್ಲಿ ಮಾತ್ರವಲ್ಲದೆ ನೆರೆಯ ದೇಶಗಳಿಗೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲೂ (ಕೇರಳ) ಮೂವರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಮಾರಣಾಂತಿಕ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಭಾರತ ಸರ್ಕಾರ ಏನು ಮಾಡುತ್ತಿದೆ, ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ, ಚೀನಾ ವೈರಸ್‌ನಿಂದ ಭಾರತದ ಯಾವ ಯಾವ ಉದ್ಯಮಗಳು ನಷ್ಟದ ಭೀತಿ ಎದುರಿಸುತ್ತಿವೆ ಎಂಬ ವಿವರ ಇಲ್ಲಿದೆ.

ಕಾರವಾರಕ್ಕೂ ಕೊರೋನಾ ಆತಂಕ : ಮಗನ ರಕ್ಷಣೆಗೆ ಮೊರೆ ಇಡುತ್ತಿರುವ ಪೋಷಕರು

ಚೀನಾದಿಂದ ಭಾರತಕ್ಕೆ ಬಂದವರ ಮೇಲೆ ನಿಗಾ

-ಚೀನಾ ಅಥವಾ ಕೊರೋನಾ ಸೋಂಕು ತಗುಲಿದ ದೇಶಗಳಿಂದ ಯಾರೇ ಬಂದರೂ ಅವರನ್ನು ನೇರ ಮನೆಗೆ ಕಳುಹಿಸದೆ ತಪಾಸಣೆ ನಡೆಸಲಾಗುತ್ತಿದೆ. ಸೋಮಕು ತಗುಲಿರುವ ಸಂಕೆ ಇದ್ದಲ್ಲಿ ಪ್ರತ್ಯೇಕ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಮಾರಣಾಂತಿಕ ಕೊರೋನಾ ವೈರಸ್‌ ವೇಗವಾಗಿ ಹರಡುತ್ತಿದ್ದಂತೆಯೇ ಆರೋಗ ಸಚಿವಾಲಯ ಟ್ರಾವೆಲ್‌ ಅಡ್ವೈಸರಿಯನ್ನು ಬಿಡುಗಡೆ ಮಾಡಿದೆ.

ಚೀನೀಯರಿಗೆ ಮತ್ತು ಕಳೆದ ಎರಡು ವಾರಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ವಿದೇಶಿಯರಿಗೆ ಈಗಾಗಲೇ ನೀಡಿರುವ ವೀಸಾಗೆ ಮಾನ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೊರೋನಾ ವೈರಸ್‌ಗೆ ಸಂಬಂಧಿತ ಪ್ರಕರಣಗಳ ಚಿಕಿತ್ಸೆಗಾಗಿ ದೆಹಲಿ ಸರ್ಕಾರ 24 ಗಂಟೆಯೂ ಕಾರ‍್ಯ ನಿರ್ವಹಿಸುವ ನಿಗಾ ಘಟಕವನ್ನು ಸ್ಥಾಪಿಸಿದೆ.

ಎಷ್ಟು ಜನರ ಮೇಲೆ ನಿಗಾ ವಹಿಸಲಾಗಿದೆ?

ಕೊರೋನಾ ವೈರಸ್‌ ಹರಡದಂತೆ ಮುನ್ನಚ್ಚರಿಕಾ ಕ್ರಮವಾಗಿ ಭಾರತದಲ್ಲಿ 5,123 ಜನರನ್ನು ಕಣ್ಗಾವಲಲ್ಲಿ ಇಡಲಾಗಿದೆ. ಕನಿಷ್ಠ 741ಜನರ ಮೇಲೆ ವೈದ್ಯಕೀಯ ಪರೀಕ್ಷೆ ಕೈಗೊಂಡಿದ್ದು, 738 ಜನರ ಪರೀಕ್ಷೆಯಲ್ಲಿ ನೆಗೆಟಿವ್‌ ಫಲಿತಾಂಶ ಬಂದರೆ ಮೂವರಲ್ಲಿ ಪಾಸಿಟಿವ್‌ ಎಂದು ಬಂದಿದೆ.

ಕೇರಳದಲ್ಲಿ ಏನಾಗುತ್ತಿದೆ?

ಚೀನಾದಿಂದ ಮತ್ತು ಕೊರೋನಾ ವೈರಸ್‌ ಕಂಡುಬಂದಿರುವ ಇತರೆ ದೇಶಗಳಿಂದ ಬಂದಿರುವ ಇತಿಹಾಸ ಇರುವ ಒಟ್ಟು 1,999 ಜನರನ್ನು ಕೇರಳದಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 75 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಘಟಕದಲ್ಲಿ ಇಡಲಾಗಿದೆ. ಉಳಿದ 1,924 ಜನರನ್ನು ಸಾರ್ವಜನಿಕರನ್ನು ಸಂಪರ್ಕಿಸದಂತೆ ಗೃಹ ಬಂಧನದಲ್ಲಿಡಲಾಗಿದೆ. ಫೆ.28ರ ಒಳಗೆ ಹೊರ ಹೋಗದಂತೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ಏನು ಮಾಡುತ್ತಿದೆ?

ಹೊಸ ಟ್ರಾವೆಲ್‌ ಅಡ್ವೈಸರಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಜನವರಿ 15, 2020ರ ನಂತರ ಚೀನದಿಂದ ಆಗಮಿಸಿದ ಪ್ರತಿಯೊಬ್ಬರಿಗೂ ಸಾರ್ವಜನಿಕ ಸಂಪರ್ಕ ನಿಷೇಧಿಸಲಾಗಿದೆ. ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್‌ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದಂತೆಯೇ 647 ಭಾರತೀಯರನ್ನು ವ್ಯೂಹಾನ್‌ನಿಂದ ಲಿಫ್ಟ್‌ ಮಾಡಿದೆ. ಕೇಂದ್ರದ ಈ ಕಾರ‍್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!

ಭಾರತದಿಂದ ಚೀನಾಗೆ ವಿಮಾನಗಳು ಹಾರುತ್ತಿವೆಯೇ?

ಏರ್‌ ಇಂಡಿಯಾ ಮತ್ತು ಇತರೆ ಭಾರತೀಯ ವಿಮಾನಯಾನ ಸಂಸ್ಥೆಗಳು ಭಾರತದಿಂದ ಚೀನಾಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಕೊರೋನಾ ವೈರಸ್‌ ರಿಸ್ಕ್‌ ನಿಯಂತ್ರಣಕ್ಕೆ ಬರುವವರೆಗೂ ವಿಮಾನ ಸೇವೆ ಸ್ಥಗಿತಗೊಳಿಸುವುದಾಗಿ ಇಂಡಿಗೋ ಮತ್ತು ಇತರ ಭಾರತೀಯ ವಿಮಾನಯಾನ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಹಾಗೆಯೇ ಏರ್‌ಇಂಡಿಯಾ ಫೆ.8ರಿಂದ ದೆಹಲಿ-ಹಾಂಕಾಂಗ್‌ ವಿಮಾನ ಸೇವೆಯನ್ನೂ ಸ್ಥಗಿತಗೊಳಿಸುವುದಾಗಿ ಹೇಳಿದೆ.

ಭಾರತದಲ್ಲಿ ಸ್ಕ್ರೀನಿಂಗ್‌ ವಾರ್ಡ್‌ ಹೇಗೆ ಕಾರ‍್ಯ ನಿರ್ವಹಿಸುತ್ತಿವೆ?

ಕರ್ನಾಟಕ: ಕೇರಳದ ಮೂವರಲ್ಲಿ ಕೊರೋನಾ ವೈರಸ್‌ ಪತ್ತೆ ಆಗಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯರು ಮತ್ತು ಸಹಾಯಕರನ್ನು ಒಳಗೊಂಡ ಆರೋಗ್ಯ ಘಟಕವನ್ನು ಸ್ಥಾಪಿಸಲಾಗಿದೆ. ಸೋಂಕು ಕಂಡುಬಂದ ರೋಗಿಗಳ ತಪಾಸಣೆಗಾಗಿ ವೆನ್‌ಲಾಕ್‌ ಆಸ್ಪತ್ರೆಯಲ್ಲಿ 10 ಬೆಡ್‌ಗಳ ಪ್ರತ್ಯೇಕ ನಿಗಾ ಘಟಕ ಸ್ಥಾಪಿಸಲಾಗಿದೆ. ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳÜಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ದೆಹಲಿ: ಮನೆಸಾರ್‌ ಕ್ಯಾಂಪ್‌ನಲ್ಲಿ ಈಗಾಗಲೇ ಚೀನಾದಿಂದ ಬಂದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ರಾಮ್‌ ಮನೋಹರ್‌ ಲೋಹಿಯಾ, ಏಮ್ಸ್‌ ಮತ್ತು ಸಫ್ದರ್‌ಜಂಗ್‌ ಆಸ್ಪತ್ರೆಗಳಲ್ಲಿ ಪ್ರತ್ಯೇಕ ತೀವ್ರ ನಿಗಾ ಘಟಕಗಳ ವ್ಯವಸ್ಥೆ ಮಾಡಲಾಗಿದೆ.

ಮುಂಬೈ: ರಾಜ್ಯದ ಕಸ್ತೂರ್‌ ಬಾ ಆಸ್ಪತ್ರೆ ಮತ್ತು ಪುಣೆಯ ನಾಯ್ಡು ಆಸ್ಪತ್ರೆಯನ್ನು ಸೋಂಕು ತಗುಲಿರಬಹುದಾದ ಅನುಮಾನಾಸ್ಪದ ರೋಗಿಗಳಿಗೆಂದೇ ಮೀಸಲಿಡಲಾಗಿದೆ.

ಮಣಿಪುರ: ವಿವಿಧ ಗಡಿಗಳಲ್ಲಿ 5 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತ್ತು ಇಂಫಾಲದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ.

ಮಿಜೋರಂ: ಮ್ಯಾನ್ಮಾರ್‌ ಗಡಿಯಿಂದ ಭಾರತಕ್ಕೆ ಬರುವವರಿಂಗೆ ತಪಾಸಣಾ ಕೇಂದ್ರವನ್ನು ಆರಂಭಿಸಲಾಗಿದೆ.

ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!

ಚೀನಾ ಸೇರಿ 25 ದೇಶಗಳಲ್ಲಿ ಕೊರೋನಾ ವೈರಸ್‌ ಪತ್ತೆ!

ಚೀನಾ ಮೂಲದ ಕೊರೋನಾ ವೈರಸ್‌ ಇದುವರೆಗೆ 25 ರಾಷ್ಟ್ರಗಳಿಗೆ ಹರಡಿದೆ. ಈವರೆಗೆ 31,428 (ಚೀನಾ, ಹಾಂಕಾಂಗ್‌ನಲ್ಲಿ 31,195) ಜನರಿಗೆ ಕೊರೋನಾ ವೈರಸ್‌ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕೊರೋನಾ ಹರಡಿರುವ ರಾಷ್ಟ್ರಗಳೆಂದರೆ, ಚೀನಾ, ಆಸ್ಪ್ರೇಲಿಯಾ, ಫ್ರಾನ್ಸ್‌, ಜಪಾನ್‌, ನೇಪಾಳ, ರಿಪಬ್ಲಿಕ್‌ ಆಫ್‌ ಕೊರಿಯಾ, ಸಿಂಗಾಪುರ, ಥೈಲ್ಯಾಂಡ್‌, ಅಮೆರಿಕ, ವಿಯೆಟ್ನಂ, ಭಾರತ, ಮಲೇಷಿಯಾ, ಆಸ್ಪ್ರೇಲಿಯಾ, ರಷ್ಯಾ, ಇಟಲಿ, ತೈವಾನ್‌, ಕೆನಡಾ, ಫಿಲಿಪ್ಪೈನ್ಸ್‌, ಬೆಲ್ಜಿಯಂ, ಸ್ಪೇನ್‌, ಸ್ವೀಡನ್‌, ಯುಎಇ, ಕಾಂಬೋಡಿಯಾ ಮುಂತಾದವು.

ಇಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ತುಟ್ಟಿಯಾಗುವ ಆತಂಕ

ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಅವಲಂಬಿತವಾಗಿರುವ ಭಾರತದ ಉದ್ಯಮ ವಲಯ, ಅದರಲ್ಲೂ ಆಟೋಮೊಬೈಲ್‌ ಮತ್ತು ಇಲೆಕ್ಟ್ರಾನಿಕ್ಸ್‌, ಔಷದೀಯ ಉದ್ಯಮಗಳು ತೀವ್ರ ನಷ್ಟಎದುರಿಸುವ ಭೀತಿಯಲ್ಲಿವೆ. ಈಗಾಗಲೇ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಶೀಘ್ರವೇ ಈ ಸಮಸ್ಯೆ ನಿವಾರಣೆಯಾಗದಿದ್ದರೆ ಉತ್ಪನ್ನಗಳ ಕೊರತೆ ಉಂಟಾಗಬಹುದು ಅಥವಾ ಕೆಲ ವಾರಗಳ ವರೆಗೆ ಬೆಲೆ ಏರಿಕೆ ಉಂಟಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಟೆಲಿವಿಷನ್‌ ಪ್ಯಾನೆಲ್ಸ್‌, ಎಲ್‌ಇಡಿ ಚಿಫ್ಸ್‌, ಫ್ರಿಡ್ಜ್‌, ಏರ್‌ ಕಂಡೀಷನರ್‌, ಮೊಬೈಲ್‌ ಹ್ಯಾಂಡ್‌ ಸೆಟ್‌ ಮತ್ತು ಮೋಟಾರ್‌ ಮುಂತಾದ ಇಲೆಕ್ಟ್ರಾನಿಕ್‌ ಉಪಕರಣಗಳು ಭಾರತಕ್ಕೆ ಹೆಚ್ಚು ಆಮದಾಗುವುದು ಚೀನಾದಿಂದ. ಚೀನಾದಲ್ಲಿ ಸದ್ಯ ಕೊರೋನಾ ವೈರಸ್‌ ಭೀತಿ ಹೆಚ್ಚಾಗಿರುವುದುರಿಂದ ರಫ್ತಿಗೆ ಅಡ್ಡಿಯಾಗಿದೆ. ಇದೇ ರೀತಿ ಇನ್ನೂ ಕೆಲ ದಿನಗಳ ವರೆಗೆ ರಫ್ತಿಗೆ ತೊಂದರೆಯಾದರೆ ಈ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಮೆಣಸಿನಕಾಯಿ ಬೆಲೆ ಇಳಿಕೆ ಬಿಸಿ

ಚೀನಾದಲ್ಲಿ ಕೊರೋನಾ ವೈರಸ್‌ ಪರಿಣಾಮ ರಾಜ್ಯದ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ. ಏಕೆಂದರೆ ನಮ್ಮ ದೇಶದಿಂದ ಚೀನಾ ದೇಶಕ್ಕೆ ರಫ್ತಾಗುತ್ತಿದ್ದ ಕೆಂಪು ಮೆಣಸಿನಕಾಯಿ ಸದ್ಯ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ಹೇಳಿಕೇಳಿ ಮೆಣಸಿನಕಾಯಿ ಮಾರಾಟದ ಪ್ರಮುಖ ವ್ಯಾಪಾರಿ ಕೇಂದ್ರ. ಪ್ರಸಿದ್ಧ ಬ್ಯಾಡಗಿ ಮೂಲಕ ಬಳ್ಳಾರಿ ಜಿಲ್ಲೆಯ ಕೆಂಪು ಮೆಣಸಿನಕಾಯಿ ಚೀನಾಕ್ಕೆ ರಫ್ತಾಗುತ್ತಿತ್ತು. ಆದರೆ ಈಗ ರಫ್ತು ನಿಲ್ಲಿಸಲಾಗಿದೆ.

ಕಳೆದ 15 ದಿನಗಳ ಹಿಂದೆ ಬ್ಯಾಡಗಿ ಸೇರಿ ರಾಜ್ಯದಲ್ಲಿ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಕೆಂಪು ಮೆಣಸಿನಕಾಯಿಗೆ 17ರಿಂದ 20 ಸಾವಿರ ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್‌ ಮೆಣಸಿನ ಬೆಲೆ 10 ರಿಂದ 12 ಸಾವಿರಕ್ಕೆ ಇಳಿದಿದೆ. ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ. ಹಾಗೆಯೇ ಚೀನಾ ನೈಸರ್ಗಿಕ ರಬ್ಬರ್‌ನ ಅತಿ ದೊಡ್ಡ ಬಳಕೆದಾರ ರಾಷ್ಟ್ರ. ಸದ್ಯ ಈ ರಬ್ಬರ್‌ಗೂ ಬೇಡಿಕೆ ಕಡಿಮೆಯಾಗಿದೆ.

ನಷ್ಟದತ್ತ ಸೂರತ್‌ ವಜ್ರೋದ್ಯಮ

ಸೂರತ್‌ನಿಂದ ಪಾಲಿಶ್‌ ಮಾಡಿದ ವಜ್ರಾಭರಣ ಆಮದು ಪೈಕಿ ಹಾಂಕಾಂಗ್‌ ಮುಂಚೂಣಿಯಲ್ಲಿದೆ. ಸೂರತ್‌ನಿಂದ ಪ್ರತಿ ವರ್ಷ 50,000 ಕೋಟಿ ರು. ಮೌಲ್ಯದ ವಜ್ರ ಹಾಂಕಾಂಗ್‌ಗೆ ರಫ್ತಾಗುತ್ತದೆ. ಪ್ರತಿ ವರ್ಷ ‘ಚೀನಾ ಹೊಸ ವರ್ಷ’ದಂದು ಭಾರತದಿಂದ ವಜ್ರ ಮತ್ತು ಸೀ ಫುಡ್‌ ಆಮದು ಹೆಚ್ಚಿರುತ್ತಿತ್ತು. ಆದರೆ ಈ ಬಾರಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಾಂಕಾಂಗ್‌ ಜೊತೆಗಿನ ರಫ್ತು ವ್ಯವಹಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೂರತ್‌ ವಜ್ರೋದ್ಯಮ 8000 ಕೋಟಿ ರು. ನಷ್ಟದತ್ತ ಮುಖಮಾಡಿದೆ.

ಕೊರೋನಾ ವೈರಸ್‌ ಮೂಲ ಯಾವುದು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೋನಾ ವೈರಸ್‌ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟುಮಾಡುವ ವೈರಸ್‌ಗಳ ಜಾತಿಗೆ ಸೇರಿದೆ. ಈ ವೈರಸ್‌ಗಳು ಸಹಜವಾಗಿಯೇ ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಗೊಳ್ಳುತ್ತವೆ. ಈ ವೈರಸ್‌ನ ಮೂಲ ಸ್ಥಾನ ಚೀನಾದ ವುಹಾನ್‌ ಎಂಬ ಪ್ರದೇಶದ ಸಮುದ್ರಾಹಾರ ಮಾರುಕಟ್ಟೆ. ಆದ್ದರಿಂದಲೇ ಇದಕ್ಕೆ ಕೊರೋನಾ ವೈರಸ್‌ ಎಂಬ ಹೆಸರಿದೆ.