ನವದೆಹಲಿ(ಜು.10): ಭಾರತಕ್ಕೆ ನೀಡಿದ್ದ ವಾಗ್ದಾನದಂತೆ ಚೀನಾ ಸೇನೆ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮೂರು ವಿವಾದಿತ ಸ್ಥಳದಿಂದ ತನ್ನ ಯೋಧರ ಹಿಂಪಡೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಗುರುವಾರದ ವೇಳೆಗೆ ಪೂರ್ವ ಲಡಾಖ್‌ನ ಗೋಗ್ರಾ ಹಾಗೂ ಹಾಟ್‌ ಸ್ಟ್ರಿಂಗ್‌ ಪ್ರದೇಶದಿಂದ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದಕ್ಕೂ ಮೊದಲೇ ಗಲ್ವಾನ್‌ ಕಣಿವೆಯಿಂದ ತನ್ನ ಸೇನೆಯನ್ನು ಹಿಂಪಡೆದಿತ್ತು. ಅದರೊಂದಿಗೆ, ಈಗ ವಿವಾದಿತ ನಾಲ್ಕು ಸ್ಥಳಗಳ ಪೈಕಿ ಪ್ಯಾಂಗಾಂಗ್‌ ತ್ಸೋ ಪ್ರದೇಶದಲ್ಲಿ ಮಾತ್ರ ಚೀನಾದ ಸೇನೆ ಉಳಿದಂತಾಗಿದೆ.

ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!

ಗಡಿ ಒತ್ತುವರಿ ನಮ್ಮ ಜೀನ್‌ನಲ್ಲೇ ಇಲ್ಲ:

ಈ ನಡುವೆ, ಚೀನಾದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಯಿ, ‘ಗಡಿಯಲ್ಲಿ ಮುನ್ನುಗ್ಗುವುದು ಹಾಗೂ ಭೂಭಾಗ ವಿಸ್ತರಣೆಯ ಮನಸ್ಥಿತಿ ಚೀನಾದ ವಂಶವಾಹಿಯಲ್ಲೇ ಇಲ್ಲ. 5000 ವರ್ಷಗಳ ಇತಿಹಾಸದಲ್ಲಿ ಚೀನಾ ಇಂತಹ ಮನೋಭಾವವನ್ನು ಯಾವತ್ತೂ ಪ್ರದರ್ಶಿಸಿಲ್ಲ’ ಎಂದು ಹೇಳಿದ್ದಾರೆ. ಭಾರತ, ನೇಪಾಳ, ಭೂತಾನ್‌ನ ಭೂಭಾಗಗಳನ್ನು ಕಬಳಿಸಲು ಯತ್ನಿಸುತ್ತಿರುವುದರ ನಡುವೆಯೇ ಅವರು ಈ ಹೇಳಿಕೆ ನೀಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.

'ಉಳಿದವರು ಕುಸಿದು ಕುಳಿತಾಗ, ಆಕೆ ಎದ್ದು ನಿಂತಳು': ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ..!

ಇನ್ನು, ಚೀನಾ ಸಂಘರ್ಷದ ಕುರಿತು ಗುರುವಾರ ಮಾಧ್ಯಮಗಳ ಜೊತೆ ಆನ್‌ಲೈನ್‌ನಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ, ಗಡಿಯಲ್ಲಿ ಶಾಂತಿ ಮತ್ತು ನಿರಾಳ ವಾತಾವರಣವನ್ನು ಕಾಪಾಡಿಕೊಳ್ಳಲು ಭಾರತ ಬದ್ಧವಾಗಿದೆ. ಹೀಗಾಗಿ ಯಾವುದೇ ಭಿನ್ನಮತವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸಲಿದೆ. ಈ ನಿಟ್ಟಿನಲ್ಲಿ ಚೀನಾದ ಜೊತೆಗೆ ಶೀಘ್ರದಲ್ಲೇ ಮುಂದಿನ ಸಭೆ ನಡೆಯಲಿದೆ ಎಂದು ತಿಳಿಸಿದರು.

ಗೋಗ್ರಾದ ಗಸ್ತು ಪಾಯಿಂಟ್‌ 17ರಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಚೀನಾ ಗುರುವಾರ ಪೂರ್ಣಗೊಳಿಸಿದೆ. ಹೀಗಾಗಿ ಭಾರತದ ಸಂಪೂರ್ಣ ಗಮನವೀಗ ಪ್ಯಾಂಗಾಂಗ್‌ ತ್ಸೋ ಪ್ರದೇಶದ ಫಿಂಗರ್‌ 4 ಸ್ಥಳದ ಮೇಲೆ ನೆಟ್ಟಿದೆ. ಇಲ್ಲಿ ಚೀನಾದ ಸೇನೆ ಇನ್ನೂ ಉಪಸ್ಥಿತಿ ಉಳಿಸಿಕೊಂಡಿದೆ.