Omicron Variant: 'ಮಾಧ್ಯಮಗಳು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ : ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ!'
*ಒಮಿಕ್ರೋನ್ ಮೊದಲು ಪತ್ತೆಯಾದ ದೇಶದಲ್ಲಿ ಕೋವಿಡ್ ಅಬ್ಬರ
*ಮಾಧ್ಯಮಗಳು ಮೊದಲು ಎಚ್ಚರಿಕೆ ನೀಡಿದಾಗ ಗೇಲಿ ಮಾಡಿದ್ದ ಜನರು!
*ಈಗಾಗಲೇ ಕೊರೋನಾ ವೈರಸ್‌ನ 3 ಅಲೆಗಳನ್ನು ಕಂಡಿದೆ ದಕ್ಷಿಣ ಆಫ್ರಿಕಾ
ಪ್ರತ್ಯಕ್ಷ ವರದಿ: ಪ್ರಶಾಂತ್ ರೇವಣ್ಣ, ಜೋಹಾನ್ಸ್‌ಬರ್ಗ್
ಜೋಹಾನ್ಸ್‌ಬರ್ಗ್(ಡಿ. 05): ಕೊರೋನಾದ ರೂಪಾಂತರಿ ಒಮಿಕ್ರೋನ್ (covid 19 Variant Omicron) ಮೊದಲು ಕಂಡುಬಂದ ದೇಶ ದಕ್ಷಿಣ ಆಫ್ರಿಕಾ (South Africa). ಆದರೂ ಇಡೀ ದೇಶದಲ್ಲಿ ಭಯದ ವಾತಾವರಣ ಕಂಡುಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕಳೆದ ಕೆಲವು ತಿಂಗಳ ಹಿಂದೆಯೇ ಡಿಸೆಂಬರ್ ವೇಳೆಗೆ ಕೊರೋನಾ 4ನೇ ಅಲೆ ಬರುವ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿತ್ತು.
ಕೊರೋನಾ 4ನೇ ಅಲೆ 2 ವಾರ ಮೊದಲೇ ಆಗಮಿಸಿದೆ. ಇದನ್ನು ನಿರೀಕ್ಷಿಸದಿದ್ದ ಆಡಳಿತ ವ್ಯವಸ್ಥೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಇತ್ತೀಚೆಗೆ ದೇಶದ ಅಧ್ಯಕ್ಷರು ದೇಶವನ್ನುದ್ದೇಶಿಸಿ ಮಾತನಾಡಿ, ಡಿ.15ರ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಕೊರೋನಾ ನಿರೀಕ್ಷೆಗೂ ಮೀರಿ ಹಬ್ಬುತ್ತಿದೆ.
ಕಳೆದ ಕೆಲವು ತಿಂಗಳ ಹಿಂದೆ ಮಾಧ್ಯಮಗಳು (Media) ಮುಂದಿನ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದಿದ್ದವು. ಆಗ ಟೀವಿಗಳನ್ನು ಕೆಲವರು ಗೇಲಿ ಮಾಡಿದ್ದರು. ಆದರೆ ಟೀವಿಗಳ ಭವಿಷ್ಯ ಈಗ ನಿಜವಾಗಿದೆ. ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ (School Children) ಕೊರೋನಾ ಹಬ್ಬುತ್ತಿದೆ. ಅಲ್ಲದೆ 30 ವರ್ಷದೊಳಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಸರ್ಕಾರದ ಸೂಚನೆ ಕಟ್ಟುನಿಟ್ಟು ಪಾಲನೆ:
ನಿತ್ಯದ ಪ್ರಕರಣಗಳ ಸಂಖ್ಯೆ 14 ಸಾವಿರ ಮೀರಿ ಏರುತ್ತಿದೆ. ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ (Work from Home). ಕೆಲವು ನಿರ್ದಿಷ್ಟಕೆಲಸಗಳಿಗೆ ಜನರು ತೆರಳುವುದು ಅನಿವಾರ್ಯ. ಅದರ ಹೊರತುಪಡಿಸಿ ಜನರು ಅಗತ್ಯ ಓಡಾಟಕ್ಕೆ ಕಡಿವಾಣ ಹಾಕಿಕೊಂಡಿದ್ದಾರೆ. ನಾನು ಕಂಡಂತೆ ದಕ್ಷಿಣ ಆಫ್ರಿಕಾದ ಜನರಿಗೆ ಸಾಮಾಜಿಕ ಪರಿಜ್ಞಾನ ಹೆಚ್ಚು. ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
Omicron Alert: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ಆದ್ರೆ 3ನೇ ಅಲೆಗೆ ದೇಶ ಸಿದ್ಧವಾಗಬೇಕೆಂದ ತಜ್ಞರು
ಇಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಎಲ್ಲರೂ ತಮ್ಮ ಸ್ವಂತದ ವಾಹನಗಳನ್ನು ಬಳಸುತ್ತಾರೆ. ಅಲ್ಲದೆ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ. ಮಾಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಅಲ್ಲದೆ ಜನರೂ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ತೀರಾ ಅನಿವಾರ್ಯವಲ್ಲದೆ ಹೊರಗೆಲ್ಲೂ ಓಡಾಡುತ್ತಿಲ್ಲ. ಗುಂಪುಗೂಡುವುದು, ಪಾರ್ಟಿ ಮಾಡುವುದಕ್ಕೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದಾರೆ. ಆದರೂ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚುತ್ತಿರುವುದರ ಮೂಲ ಇನ್ನೂ ಸ್ಪಷ್ಟವಾಗಿಲ್ಲ.
ಮನೆಯಲ್ಲಿಯೇ ಚಿಕಿತ್ಸೆ:
ಇನ್ನು ಡಿ.15ರ ಬಳಿಕ ಜನರು ಕ್ರಿಸ್‌ಮಸ್ ಮತ್ತು ಹೊಸ ವರ್ಷ ಅಚರಣೆಗೆ ತಮ್ಮ ಊರುಗಳಿಗೆ ತೆರಳುವುದರಿಂದ ಓಡಾಟ ಹೆಚ್ಚುತ್ತದೆ. ಹಾಗಾಗಿ ಅಲ್ಲಿಯವರೆಗೂ ಸ್ಪಷ್ಟಚಿತ್ರಣ ಲಭ್ಯವಾಗುವುದಿಲ್ಲ. ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿದೆ ಎನ್ನಬಹುದು. ಇಲ್ಲಿಯೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಸರ್ಕಾರದ ಆಸ್ಪತ್ರೆಗಳಲ್ಲಿ ಸೌಲಭ್ಯ ಕಡಿಮೆ ಇದ್ದರೂ ಒಟ್ಟಾರೆ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ಉತ್ತಮವಾಗಿಯೇ ಇದೆ.
Covid19 Vaccine: ಒಮಿಕ್ರೋನ್ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?
ಕೊರೋನಾ ಸೋಂಕಿತರು ತೀರಾ ಅನಿವಾರ್ಯವಲ್ಲದೆ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಹಾಗಾಗಿ ಬೆಂಗಳೂರಿನಲ್ಲಿ 2ನೇ ಅಲೆಯ ವೇಳೆ ಸೃಷ್ಟಿಯಾದ ವೈದ್ಯಕೀಯ ತುರ್ತು ಪರಿಸ್ಥಿತಿ ಇಲ್ಲಿ ಇಲ್ಲಿಯವರೆಗೂ ಕಂಡುಬಂದಿಲ್ಲ. ಅದರೊಂದಿಗೆ ಇಲ್ಲಿನ ಹವಾಮಾನವೂ ಉತ್ತಮವಾಗಿಯೇ ಇದೆ. ಅರಣ್ಯ ಪ್ರದೇಶ ಹೆಚ್ಚಿದೆ. ಹಾಗಾಗಿ ಜನರ ಆರೋಗ್ಯಕ್ಕೂ ಹೆಚ್ಚಿನ ಅನುಕೂಲವಾಗಿದೆ. ಇದರಿಂದಾಗಿ ಕೊರೋನಾದಿಂದ ಬಾಧಿತರಾದವರ ಚೇತರಿಕೆ ಪ್ರಮಾಣವೂ ಅಧಿಕವಾಗಿದೆ.
ಇನ್ನು ಸರ್ಕಾರವೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ತಯಾರಿಯನ್ನು ಈಗಾಗಲೇ ನಡೆಸಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಮಸ್ಯೆ ಎದುರಾಗದಂತೆ ಇನ್ನಿತರ ಕಾಯಿಲೆಗಳ ರೋಗಿಗಳು, ಅಪಘಾತದ ಪ್ರಕರಣಗಳು ಹೆಚ್ಚಾಗದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆದರೂ ಸಾರ್ವಜನಿಕರೇ ಅಂತಿಮ. ಡಿ.15ರ ಬಳಿಕ ಮತ್ತಷ್ಟುಕ್ರಮಗಳ ಬಗ್ಗೆ ಸರ್ಕಾರ ಯೋಜಿಸುವ ಸಾಧ್ಯತೆ ಬಗ್ಗೆ ಸುಳಿವು ನೀಡಿದೆ.
ಏನಾಗ್ತಿದೆ ಆಫ್ರಿಕಾದಲ್ಲಿ?
- ಈಗಾಗಲೇ 3 ಕೊರೋನಾ ವೈರಸ್‌ನ ಅಲೆಗಳನ್ನು ಕಂಡಿದೆ ದಕ್ಷಿಣ ಆಫ್ರಿಕಾ
- 4ನೇ ಅಲೆ ಬರಬಹುದು ಎಂದು ಕೆಲ ತಿಂಗಳ ಹಿಂದೆ ಮಾಧ್ಯಮಗಳ ವರದಿ
- ವರದಿ ನೋಡಿ ಗೇಲಿ ಮಾಡಿದ್ದ ಜನರು. ಆದರೆ ಈಗ ಆ ವರದಿಗಳೇ ನಿಜ
- ಶಾಲೆಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ
- 30 ವರ್ಷದೊಳಗಿನ ಜನರಲ್ಲಿ ಹೆಚ್ಚಾಗಿ ಸೋಂಕು ಕಂಡುಬರುತ್ತಿದೆ
- ಶಾಲೆಗಳನ್ನು ಮುಚ್ಚಲಾಗಿದೆ, ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ
- ಜನರು ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ. ಆದರೂ ಸೋಂಕು ಪಸರಿಸುತ್ತಿದೆ