ತೈವಾನ್(ನ.12): ತಮಗಿಷ್ಟವಾಗುವ ತಿಂಡಿಯ ಹೆಸರು ಕೇಳಿ ಜನರ ಬಾಯಲ್ಲಿ ನೀರೂರುತ್ತದೆ. ಆದರೆ ತೈವಾನ್‌ನಲ್ಲಿ ನಡೆದ ಘಟನೆ ಮಾತ್ರ ಸದ್ಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. 62 ದಿನಗಳಿಂದ ಕೋಮಾದಲ್ಲಿದ್ದ ಹದಿನೆಂಟು ವರ್ಷದ ಚಿಯೂ ಎಂಬಾತ ಚಿಕನ್ ಫಿಲೆಟ್ ಹೆಸರು ಕೇಳಿ ಕಣ್ಬಿಟ್ಟಿದ್ದಾನೆ. ಇದನ್ನು ಕಂಡ ಕುಟುಂಬ ಮಂದಿ ಅಚ್ಚರಿಗೀಡಾಗಿದ್ದಾರೆ.

ವರದಿಗಳನ್ವಯ ತೈವಾನ್‌ ನಿವಾಸಿ ಚಿಯೂ ರಸ್ತೆ ಅಪಘಾತದಲ್ಲಿ ಗಂಭೀರವಗಿ ಗಾಯಗೊಂಡಿದ್ದ. ತೈವಾನ್ ನ್ಯೂಸ್ ವರದಿಯನ್ವಯ ಆತ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಹೀಗೆ ಗಂಬೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತಂದಿದ್ದ ಬಾಲಕನಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ಹೀಗಿದ್ದರೂ ಆತ ಕೋಮಾಗೆ ಜಾರಿದ್ದ. ಹೀಗೆ ಕಳೆದ ಎರಡು ತಿಂಗಳಿನಿಂದ ಆತ ಕೋಮಾದಲ್ಲಿದ್ದ.

ಚಿಂತೆಗೀಡಾಗಿದ್ದ ಕುಟುಂಬ ಬಾಲಕ ಕೋಮಾದಿಂದ ಹೊರಬರುವಂತೆ ಪ್ರಾರ್ಥಿಸುತ್ತಿತ್ತು. ಆದರೆ ಚಿಯೂನ ಹಿರಿಯ ಸಹೋದರ ಆತನನ್ನು ನೊಡಲು ಆಸ್ಪತ್ರೆಗೆ ಬಂದಾಗ ಜಾದೂ ಮ್ಯಾಜಿಕ್ಕೇ ನಡೆದಿದೆ. ತಮ್ಮನೊಡನೆ ಮಾತನಾಡುತ್ತಿದ್ದ ಆತ ತಮಾಷೆಗೆಂದು 'ನಾನು ನಿನ್ನ ನೆಚ್ಚಿನ ಚಿಕನ್ ಫಿಲೆಟ್ ತಿನ್ನಲು ಹೋಗುತ್ತಿದ್ದೇನೆ' ಎಂದಿದ್ದಾರೆ. ಈ ಮಾತು ಕೇಳುತ್ತಿದ್ದಂತೆಯೇ ಚಿಯೂ ಪಲ್ಸ್ ರೇಟ್ ಹೆಚ್ಚಿದೆ ಹಾಗೂ ನೋಡ ನೋಡುತ್ತಿದ್ದಂತೆಯೇ ಚಿಯೂಗೆ ಪ್ರಜ್ಞೆ ಬಂದಿದೆ. ಈ ಮೂಲಕ ಆತ ಆಸ್ಪತ್ರೆಯಿಂದ ಬಿಡುಗಡೆ ಪಡೆದುಕೊಂಡಿದ್ದಾನೆ.

;ಸದ್ಯ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಯಾರಿಗೆ ಯಾವ ತಿಂಡಿ ಇಷ್ಟ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.