ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್‌ಲೈನ್. ಮಾತುಕತೆ, ಒಪ್ಪಂದ, ವಿಷಯ ಹಂಚಿಕೆ, ಮೀಟಿಂಗ್, ಸಭೆ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಈ ವೇಳೆ ಇಮೋಜಿಗಳ ಬಳಕೆ ಇದೀಗ ಹೆಚ್ಚಾಗಿದೆ. ಇಮೋಜಿಗಳ ಮೂಲಕವೇ ಉತ್ತರ ನೀಡುವುದು ಸಾಮಾನ್ಯವಾಗಿದೆ. ಹೀಗೆ ಬಂದ ಮೆಸೇಜ್‌ಗೆ ಥಂಬ್ಸ್ ಅಪ್ ಇಮೋಜಿ ಕಳುಹಿಸಿದ ರೈತ ಕೊನೆಗೆ 60 ಲಕ್ಷ ರೂಪಾಯಿ ಕೊಡಬೇಕಾಗಿ ಬಂದಿದೆ.
ಕೆನಡ(ಜು.10) ಮೆಸೇಜ್‌ಗಳಿಗೆ ಉತ್ತರ ನೀಡುವಾಗ ಇಮೋಜಿಗಳನ್ನು ಬಳಸುತ್ತೀರಾ? ಹಾಗಾದರೆ ಎಚ್ಚರಿಕೆ ವಹಿಸುವುದು ಸೂಕ್ತ. ಕಾರಣ ರೈತನೊಬ್ಬ ತನಗೆ ಬಂದ ಮೆಸೇಜ್‌ಗೆ ಥಂಬ್ಸ್ ಅಪ್ ಇಮೋಜಿ ಕಳುಹಿಸಿದ್ದಾನೆ. ಇದು ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ. ಕೊನೆಗೆ ನ್ಯಾಯಾಲಯ ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥಿ ಮಾಡಿದೆ.ಆದರೆ ಥಂಬ್ಸ್ ಅಪ್ ಇಮೋಜಿ ಕಳುಹಿಸಿದ ರೈತ ಬರೋಬ್ಬರಿ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆ ನಡೆದಿರುವುದು ಕೆನಡಾದಲ್ಲಿ. ಕೆನಡಾದ ರೈತ ಇದೀಗ ತನ್ನ ಬೆಳೆಯಿಂದ ಬಂದ ಹಣವನ್ನು ಸುಖಾಸುಖಮ್ಮನೆ ಥಂಬ್ಸ್ ಅಪ್ ಇಮೋಜಿ ಕಳುಹಿಸಿ ಕಳೆದುಕೊಂಡಿದ್ದಾನೆ.
ಕೆನಡಾದ ರೈತ ಅಗಸೆ ಸೇರಿದಂತೆ ಇತರ ಬೇಳೆಕಾಳುಗಳನ್ನು ಬೆಳೆದಿದ್ದಾನೆ. ಇದರಲ್ಲಿ ಅಗಸೆ ಬೀಜಗಳನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ. ಫೋನ್ ಮೂಲಕ ರೈತರನ ಜೊತೆ ಮಾತನಾಡಿದ್ದಾರೆ. ಒಟ್ಟು 86 ಟನ್ ಅಗಸೆ ಬೀಜಗಳನ್ನು ಖರೀದಿ ಕುರಿತು ಮಾತುಕತೆ ನಡೆಸಿದ್ದಾನೆ. ಪ್ರತಿ ಚೀಲಕ್ಕೆ $12.73 ಡಾಲರ್ ಬೆಲೆಯಲ್ಲಿ ಒಟ್ಟು 86 ಟನ್ ಖರೀದಿಸುವುದಾಗಿ ವ್ಯಾಪಾರಿ ಹೇಳಿದ್ದಾನೆ. ಮಾತುಕತೆ ಬಳಿಕ ವ್ಯಾಪಾರಿ ಅಗಸೆ ಬೀಜ ಒಪ್ಪಂದದ ಕುರಿತ ಪತ್ರವನ್ನು ಮೊಬೈಲ್‌ಗೆ ಕಳುಹಿಸಿದ್ದಾನೆ.
ಒಪ್ಪಂದ ಲೆಟರ್ ಬಂದ ತಕ್ಷಣವೇ ನಿಮ್ಮ ಸಂದೇಶ ಬಂದಿದೆ ಅನ್ನೋ ಅರ್ಥದಲ್ಲಿ ರೈತ ಥಂಬ್ಸ್ ಅಪ್ ಇಮೋಜಿ ಕಳುಹಿಸಿದ್ದಾನೆ. ಇದಾದ ಬಳಿಕ ಒಂದು ತಿಂಗಳಾದರೂ ವ್ಯಾಪಾರಿಗೆ ಅಗಸೆ ಬೀಜಗಳು ತಲುಪಿಲ್ಲ. ಫೋನ್ ಕೂಡ ಬಂದಿಲ್ಲ. ಒಪ್ಪಂದದ ಪ್ರಕಾರ ಅಗಸೆ ಬೀಜಗಳನ್ನು ಕಳುಹಿಸಬೇಕಿತ್ತು. ಆದರೆ ಯಾಕೆ ಕಳುಹಿಸಿಲ್ಲ ಎಂದು ಅನುಮಾನಗೊಂಡ ವ್ಯಾಪಾರಿ ನೇರವಾಗಿ ರೈತನ ಬಳಿ ಬಂದು ರಂಪಾಟ ಮಾಡಿದ್ದಾನೆ.
ಕಳೆದ ಒಂದು ತಿಂಗಳಿನಿಂದ ನಾನು ಅಗಸೆ ಬೀಜಗಳಿಗಾಗಿ ಕಾಯುತ್ತಿದ್ದೇನೆ. ಬೇರೆಡೆ ಖರೀದಿ ಮಾಡದೆ ಕುಳಿತಿದ್ದೇನೆ. ಇದೀಗ ನನಗೆ ಅಗಸೆ ಬೀಜಗಳು ಎಲ್ಲಿಯೂ ಸಿಗುತ್ತಿಲ್ಲ. ನೀವು ಒಪ್ಪಿಕೊಂಡ ಬಳಿಕ ಯಾಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರೈತ ನಾನು ಒಪ್ಪಿಕೊಂಡಿಲ್ಲ. ನೀವು ಬೆಲೆ ಕೇಳಿದ್ದೀರಿ, ಬೆಲೆಯನ್ನು ಹೇಳಿದ್ದೇನೆ. ನಿಮಗೆ ಕೊಡುತ್ತೇನೆ ಎಂದು ನಾನು ಒಪ್ಪಿಲ್ಲ ಎಂದು ಸಮರ್ಥನೆ ನೀಡಿದ್ದಾನೆ.
ಆದರೆ ವ್ಯಾಪರಿ ತಾನು ಕಳುಹಿಸಿದ ಪತ್ರ ಹಾಗೂ ಅದಕ್ಕೆ ಥಂಬ್ಸ್ ಅಪ್ ಇಮೋಜಿ ರಿಪ್ಲೈ ತೋರಿಸಿದ್ದಾನೆ. ಇದಕ್ಕೂ ರೈತ ಸಮರ್ಥನೆ ನೀಡಿದ್ದಾನೆ. ನಿಮ್ಮ ಸಂದೇಶ ಸ್ವೀಕೃತಗೊಂಡಿದೆ ಎಂದು ನಾನು ಥಂಬ್ಸ್ ಹಾಕಿದ್ದಾನೆ. ನಿಮ್ಮ ಸಂದೇಶ ಬಂದ ಮರುಕ್ಷಣದಲ್ಲೇ ನಾನು ಥಂಬ್ಸ್ ಹಾಕಿದ್ದಾನೆ. ಟೈಮ್ ಎಷ್ಟಿದೆ ನೋಡಿ. ಆದರೆ ನೀವು ಕಳುಹಿಸಿದ ಒಪ್ಪಂದ ಪತ್ರವನ್ನು ನಾನು ಓದಿಲ್ಲ ಎಂದು ರೈತ ಹೇಳಿದ್ದಾನೆ. ಇತ್ತ ವ್ಯಾಪಾರಿ ನಾನು ಒಪ್ಪಂದ ಪತ್ರ ಕಳುಹಿಸಿದ್ದೇನೆ. ನೀವು ಥಂಬ್ಸ್ ಅಪ್ ಇಮೋಜಿ ಮೂಲಕ ಸಮ್ಮತಿ ಸೂಚಿಸಿದ್ದೀರಿ. ಹೀಗಾಗಿ ನನಗೆ ನಷ್ಟವಾಗಿದೆ ಎಂದು ವ್ಯಾಪಾರಿ ವಾಗ್ವಾದ ಮಾಡಿದ್ದಾನೆ. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ದಿನ ನಿತ್ಯ ಬಳಸುವ ಎಮೋಜಿಗಳು ನಿಮ್ಮ ವ್ಯಕ್ತಿತ್ವ ಹೇಳುತ್ತೆ!
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇಮೋಜಿ ಕುರಿತ ಅರ್ಥಗಳನ್ನು ಹುಡುಕಿದೆ. ಥಂಬ್ಸ್ ಅಪ್ ಇಮೋಜಿಯ ಅರ್ಥವೇನು ಅನ್ನೋದನ್ನು ಹುಡುಕಿ ತೆಗೆದ ಕೋರ್ಟ್, ಇಲ್ಲಿ ರೈತನ ತಪ್ಪು ಕಾಣಿಸುತ್ತಿದೆ ಎಂದಿದೆ. ಡಿಕ್ಷನರಿ ಡಾಟ್ ಕಾಂನಲ್ಲಿ ಇಮೋಜಿಗೆ ನೀಡಿರುವ ಅರ್ಥಗಳಲ್ಲಿ ಥಂಬ್ಸ್ ಅಪ್ ಎಂದರೆ ಸಮ್ಮತಿ ಸೂಚಿಸುವುದು, ಅಪ್ರೂವಲ್ ನೀಡುವುದು ಎಂದರ್ಥ. ಹೀಗಾಗಿ ಒಪ್ಪಂದ ಪತ್ರಕ್ಕೆ ರೈತ ಅನುಮತಿ ನೀಡಿದ್ದಾರೆ. ಒಪ್ಪಂದ ಪತ್ರ ಓದದಿರುವುದು ರೈತನ ತಪ್ಪು. ಹೀಗಾಗಿ ರೈತ ಪರಿಹಾರ ಮೊತ್ತವಾಗಿ 60 ಲಕ್ಷ ರೂಪಾಯಿ ವ್ಯಾಪಾರಿಗೆ ನೀಡಬೇಕು ಎಂದು ಕೋರ್ಟ್ ಹೇಳಿದೆ.
