ತಮ್ಮ ಪುತ್ರ ಪ್ರಿನ್ಸ್‌ ಚಾರ್ಲ್ಸ್ ರಾಜನಾದ ಬಳಿಕ ಅವರ ಪತ್ನಿ ಕ್ಯಾಮಿಲ್ಲಾ ದೇಶದ ರಾಣಿ ಎನ್ನಿಸಿಕೊಳ್ಳಲಿದ್ದಾರೆ ಎಂದು ಬ್ರಿಟನ್‌ನ ಹಾಲಿ ರಾಣಿ ಎರಡನೇ ಎಲಿಜಬೆತ್‌ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ರಾಣಿ ಹುದ್ದೆಯ ಬಗ್ಗೆ ಇದ್ದ ವದಂತಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಲಂಡನ್‌ (ಫೆ.07): ತಮ್ಮ ಪುತ್ರ ಪ್ರಿನ್ಸ್‌ ಚಾರ್ಲ್ಸ್ (Prince Charles) ರಾಜನಾದ ಬಳಿಕ ಅವರ ಪತ್ನಿ ಕ್ಯಾಮಿಲ್ಲಾ (Camilla) ದೇಶದ ರಾಣಿ ಎನ್ನಿಸಿಕೊಳ್ಳಲಿದ್ದಾರೆ ಎಂದು ಬ್ರಿಟನ್‌ನ ಹಾಲಿ ರಾಣಿ ಎರಡನೇ ಎಲಿಜಬೆತ್‌ (Queen Elizabeth) ಘೋಷಿಸಿದ್ದಾರೆ. ಈ ಮೂಲಕ ಮುಂದಿನ ರಾಣಿ ಹುದ್ದೆಯ ಬಗ್ಗೆ ಇದ್ದ ವದಂತಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ತಾವು ಅಧಿಕಾರಕ್ಕೆ ಏರಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಹೇಳಿಕೆ ನೀಡಿರುವ ರಾಣಿ 2ನೇ ಎಲಿಜಬೆತ್‌, ‘ಇಷ್ಟುವರ್ಷ ನೀವು ನನಗೆ ನೀಡಿದ ಎಲ್ಲಾ ಬೆಂಬಲಗಳಿಗೆ ಧನ್ಯವಾದಗಳು. ಇದಕ್ಕೆ ನಾನು ನಿಮಗೆ ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ. ಅದೇ ರೀತಿ ಕಾಲ ಕೂಡಿಬಂದಾಗ, ನನ್ನ ಪುತ್ರ ಚಾರ್ಲ್ಸ್ ರಾಜನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೀವು ಅವರಿಗೆ ಮತ್ತು ಅವರ ಪತ್ನಿ ಕ್ಯಾಮಿಲ್ಲಾಗೂ ಕೂಡಾ ಇದೇ ರೀತಿಯ ಬೆಂಬಲ ನೀಡುತ್ತೀರಿ ಎಂದು ಭಾವಿಸಿದ್ದೇನೆ. ಆ ಸಮಯ ಬಂದಾಗ ಕ್ಯಾಮಿಲ್ಲಾರನ್ನು ಕ್ವೀನ್‌ ಕನ್ಸೋರ್‍ಟ್‌ (ರಾಜನ ಪತ್ನಿ) ಎಂದು ಗೌರವಿಸಬೇಕು ಎಂಬುದು ನನ್ನ ಕಳಕಳಿಯ ಆಶಯ’ ಎಂದು ಹೇಳಿದ್ದಾರೆ.

ಬ್ರಿಟನ್‌ ರಾಣಿ ಎಲಿಜಬೆತ್‌, ಫಿಲಿಪ್‌ ಸೇರಿ ಪ್ರಮುಖರಿಗೆ ಮೊದಲ ಫೈಝರ್‌ ಲಸಿಕೆ!

ಪ್ರಿನ್ಸ್‌ ಚಾರ್ಲ್ಸ್ 1996ರಲ್ಲಿ ಡಯಾನಾರಿಂದ ಡೈವೋ​ರ್ಸ್ ಪಡೆದುಕೊಂಡಿದ್ದರು. ಅದಾದ ಒಂದು ವರ್ಷದ ಬಳಿಕ ಕಾರು ಅಪಘಾತದಲ್ಲಿ ಡಯಾನಾ ಸಾವನ್ನಪ್ಪಿದ್ದರು. 2005ರಲ್ಲಿ ಚಾರ್ಲ್ಸ್ ಕ್ಯಾಮಿಲ್ಲಾರನ್ನು 2ನೇ ಮದುವೆಯಾಗಿದ್ದರು. ಹೀಗಾಗಿ ಅವರಿಗೆ ಮುಂದಿನ ರಾಣಿ ಪಟ್ಟಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಇತ್ತು. ಅದಕ್ಕೆ ಇದೀಗ ರಾಣಿ ತೆರೆ ಎಳೆದಿದ್ದಾರೆ.

ಪುತ್ರ ಚಾರ್ಲ್ಸ್, ಸೊಸೆ ಕ್ಯಾಮಿಲಾ ಸಕ್ರಿಯ: ಜಗತ್ತಿನ ಪ್ರಾಚೀನ ಮತ್ತು ಸುದೀರ್ಘ ಆಡಳಿತ ನಡೆಸಿರುವ ಬ್ರಿಟನ್‌ ರಾಜ ಮನೆತನದ ರಾಣಿ ಎಲಿಜಬೆತ್ ಅವರಿಗೆ ವಯಸ್ಸಾಗಿರುವ ಕಾರಣ ಮತ್ತು ಅನಾರೋಗ್ಯ ಕಾರಣ ಇತ್ತೀಚೆಗೆ ಸಾರ್ವಜನಿಕ ಕಾರ‍್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಣಿಯ ಹಿರಿಯ ಪುತ್ರ ಮತ್ತು ಉತ್ತರಾಧಿಕಾರಿ ಚಾರ್ಲ್ಸ್ ರಾಣಿಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಅಧಿಕೃತ ಸಭೆ, ಸಮಾರಂಭಗಳು ಸೇರಿದಂತೆ ರಾಜಮನೆತನದ ಜವಾಬ್ದಾರಿಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ.

ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾ ಹೆಚ್ಚಾಗಿ ರಾಜಮನೆತನದ ಅಧಿಕೃತ ಕಾರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದು ಜೇಮ್ಸ್‌ ಬಾಂಡ್‌ ಸಿನಿಮಾದಿಂದ ಹಿಡಿದು ಇತ್ತೀಚೆಗೆ ನಡೆದ ಜಿ-7 ಮತ್ತು ವಿಶ್ವಸಂಸ್ಥೆಯ ಹವಾಮಾನ ಶೃಂಗದವರೆಗೂ ಸಾಬೀತಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಲಿಜಬೆತ್‌ ಸ್ಥಾನಕ್ಕೆ ಕ್ಯಾಮಿಲಾ ಬರಬಹುದು ಎಂಬ ಅನುಮಾನ ದಟ್ಟವಾಗಿದೆ.

ಇನ್ಫಿ ನಾರಾಯಣದ ಮೂರ್ತಿ ಮಗಳು ಬ್ರಿಟನ್‌ ರಾಣಿಗಿಂತ ಶ್ರೀಮಂತೆ! ಆಸ್ತಿ ಬಚ್ಚಿಟ್ಟ ವಿವಾದ

ಕ್ಯಾಮಿಲ್ಲಾ ಯಾರು?: ಬ್ರಿಟಿಷ ರಾಜವಂಶದ ಸದಸ್ಯೆ, ರಾಣಿ ಎಲಿಜಬೆತ್‌ ಹಿರಿಯ ಮಗ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ (74) ಅವರನ್ನು ಡಚ್ಚಸ್‌ ಆಫ್‌ ಕಾರ್ನ್‌ವಾಲ್‌ ಎಂದೂ ಕರೆಯುತ್ತಾರೆ. ರಾಜ ಮನೆತನದ ಸೊಸೆ ಆಗುವ ಮುನ್ನ 1973ರಲ್ಲಿ ಬ್ರಿಟಿಷ್‌ ಸೇನಾ ಅಧಿಕಾರಿಯನ್ನು ಅವರು ವಿವಾಹವಾಗಿ 1995ರಲ್ಲಿ ವಿಚ್ಛೇದನ ನೀಡಿದ್ದರು. ಬಳಿಕ 2005ರಲ್ಲಿ ಚಾರ್ಲ್ಸ್ರನ್ನು ವಿವಾಹವಾದರು. ಇತ್ತೀಚೆಗೆ ಎಲಿಜಬೆತ್‌ ಪತಿ ಪ್ರಿನ್ಸ್‌ ಫಿಲಿಪ್‌ ನಿಧನದ ನಂತರ ಚಾರ್ಲ್ಸ್ ಮುನ್ನೆಲೆಗೆ ಬರುತ್ತಿದ್ದಾರೆ. ಅವರ ಜೊತೆಗೆ ಕ್ಯಾಮಿಲಾ ಸಹ ರಾಜಮನೆತನದ ಎಲ್ಲಾ ಚಾರಿಟಿ ಕಾರ‍್ಯಕ್ರಮಗಳು ಅಧಿಕೃತ ಕಾರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಯಾಮಿಲ್ಲಾ ‘ಕೌನ್ಸಲರ್‌ ಆಫ್‌ ಸ್ಟೇಟ್‌’ ಆಗಬಹುದೆಂಬ ಊಹೆಗಳು ಗರಿಗೆದರುತ್ತಿವೆ.