ಲಂಡನ್‌(ಅ.04): ಕೊರೋನಾ ವೈರಸ್‌ಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆ ಈ ವರ್ಷದ ಅಂತ್ಯದ ಅಂತ್ಯದ ವೇಳೆಗೆ ಬಿಡುಗಡೆ ಆಗುವ ಎಲ್ಲಾ ಸಾಧ್ಯತೆಗಳಿವೆ. ಅದನ್ನು 6 ತಿಂಗಳಿನಲ್ಲಿ ಎಲ್ಲರಿಗೂ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಬ್ರಿಟನ್‌ ಮಾಧ್ಯಮವೊಂದು ವರದಿ ಮಾಡಿದೆ.

ಆಸ್ಟ್ರಾಜೆನೆಕಾ ಎಂಬ ಔಷಧ ತಯಾರಿಕಾ ಸಂಸ್ಥೆಯ ಸಹಯೋಗದೊಂದಿಗೆ ಆಕ್ಸ್‌ಫರ್ಡ್‌ ವಿಜ್ಞಾನಿಗಳು ಸಿದ್ಧಪಡಿಸಿರುವ ಕೋವಿಡ್‌-19 ವ್ಯಾಕ್ಸಿನ್‌ ಅನ್ನು ಸದ್ಯ ಮೂರನೇ ಹಂತದ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದು ವೇಳೆ ಲಸಿಕೆ ಪ್ರಯೋಗ ಯಶಸ್ವಿಯಾದರೆ ಕ್ರಿಸ್‌ಮಸ್‌ ವೇಳೆಗೆ ಆರೋಗ್ಯ ಇಲಾಖೆಯಿಂದ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಇದೇ ವೇಳೆ ಆಕ್ಸ್‌ಫರ್ಡ್‌ ಲಸಿಕೆಯ 10 ಕೋಟಿ ಡೋಸ್‌ಗಳಿಗೆ ಬ್ರಿಟನ್‌ ಸರ್ಕಾರ ಈಗಾಗಲೇ ಆರ್ಡರ್‌ ನೀಡಿದೆ. ಲಸಿಕೆ ಬಿಡುಗಡೆ ಆಗುತ್ತಿದ್ದಂತೆ ಮೊದಲು 65 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಬಳಿಕ ಅಪಾಯದಲ್ಲಿರುವ ಜನರಿಗೆ ಆದ್ಯತೆಯ ಮೇರೆಗೆ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯವಂತರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.