ಬ್ರಿಟಿಷ್ ಪ್ರವಾಸಿಯನ್ನು ಎಳೆದಾಡಿದ ಪುರುಷರ ಗುಂಪು, ವಿಡಿಯೋ ಹಂಚಿ ನೋವು ತೋಡಿಕೊಂಡ ಮಹಿಳೆ, ಹಗಲಿನಲ್ಲೇ ಈ ರೀತಿ ಕೆಟ್ಟ ಅನುಭವ ಆಗಿದೆ. ಇದು ನನ್ನ ಪ್ರವಾಸಿ ಜೀವನದ ಕೆಟ್ಟ ಅನುಭವ ಎಂದಿದ್ದಾರೆ.

ಲಾಹೋರ್ (ನ.27) ಮಹಿಳಾ ಪ್ರವಾಸಿಗಳು ಏಕಾಂಗಿ ಪ್ರವಾಸದ ವೇಳೆ ಅನುಭವಿಸುವ ಸವಾಲುಗಳು ಹಲವು ಬಾರಿ ಚರ್ಚೆಯಾಗಿದೆ. ಅದರಲ್ಲೂ ವಿದೇಶಿ ಮಹಿಳಾ ಪ್ರವಾಸಿಗರು ಮೇಲೆ ನಡೆಯುವ ದೌರ್ಜನ್ಯಗಳು ಆಯಾ ದೇಶವನ್ನೇ ತಲೆ ತಗ್ಗಿಸುವಂತೆ ಮಾಡುತ್ತದೆ. ಇತ್ತೀಚೆಗೆ ನ್ಯೂಜಿಲೆಂಡ್ ಪ್ರವಾಸಿ ಯುವತಿಯನ್ನು ಮಂಚಕ್ಕೆ ಕರೆದ ಘಟನೆ ಶ್ರೀಲಂಕಾದಲ್ಲಿ ನಡೆದಿತ್ತು. ಇದೀಗ ಬ್ರಿಟಿಷ್ ಪ್ರವಾಸಿ ಮಹಿಳೆಯನ್ನು ಫಾಲೋ ಮಾಡಿದ ಪುರುಷರ ಗುಂಪು ಆಕೆಯನ್ನು ಅಸಭ್ಯವಾಗಿ ಮುಟ್ಟಿದ್ದಾರೆ. ಇಷ್ಟೇ ಅಲ್ಲ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಫೋಟೋ ಕ್ಲಿಕ್ಲಿಸುವ ನೆಪದಲ್ಲಿ ಕಿರುಕುಳ ನೀಡಲು ಆರಂಭಿಸಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ತನ್ನ ಸಂಗಾತಿ ಜೊತೆ ತೆರಳಿದಾಗಲೇ ಈ ಅನುಭವ ಆಗಿದೆ. ತನಗಾದ ಕೆಟ್ಟ ಅನುಭವನ್ನು ಬ್ರಿಟಿಷ್ ಪ್ರವಾಸಿ ಮಹಿಳೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಪ್ರವಾಸಿ ತಾಣಗಳ ಪೈಕಿ ಇದು ಅತ್ಯಂತ ಕೆಟ್ಟ ಅನುಭವ

ಬ್ರಿಟಿಷ್ ಮಹಿಳೆ ಮೊಲಿ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದಾಳೆ. ಈ ವೇಳ ಲಾಹೋರ್‌ನ ಬಾದ್‌ಶಾಹಿ ಮಸೀದಿಗೆ ಭೇಟಿ ನೀಡಿದ್ದಾರೆ. ಮಸೀದಿ ಹಾಗೂ ಸೂರ್ಯಾಸ್ತಮಾನ ವೀಕ್ಷಿಸಲು ತೆರಳಿದ್ದಾರೆ. ಆದರೆ ಈ ಮಸೀದಿ ಬಳಿ ನಡೆದ ಘಟನೆಯಿಂದ ಬ್ರಿಟಿಷ್ ಮಹಿಳೆ ತೀವ್ರ ನೋವು ಅನುಭವಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್ ಹಾಗೂ ಇನ್‌ಫ್ಲುಯೆನ್ಸರ್ ಆಗಿರುವ ಬ್ರಿಟಿಷ್ ಮಹಿಳೆ ಮೊಲಿ ಘಟನೆ ವಿವರಿಸಿದ್ದಾರೆ. ನಾನು ಇಲ್ಲೀ ತನಕ ಭೇಟಿ ನೀಡಿದ ಪ್ರವಾಸಿ ತಾಣಗಳ ಭೇಟಿಯಲ್ಲಿ ಲಾಹೋರ್ ಬಾದ್‌ಶಾಹಿ ಮಸೀದಿ ಭೇಟಿ ಅತ್ಯಂತ ಕೆಟ್ಟ ಅನುಭವ ಎಂದಿದ್ದಾರೆ.

ಎಲ್ಲೆಂದರಲ್ಲಿ ಮುಟ್ಟುವ ಪ್ರಯತ್ನ

ನಾನು ಬಾದ್‌ಶಾಹಿ ಮಸೀದಿ ಬೇಟಿ ಬರುತ್ತಿದ್ದಂತೆ ಕೆಲ ಪುರುಷರ ಗುಂಪು ನನ್ನನ್ನು ಫಾಲೋ ಮಾಡಿತ್ತು. ನನ್ನ ಸುತ್ತುವರಿಯಲು ಪ್ರಯತ್ನಿಸಿದ್ದಾರೆ. ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆ. ಎಲ್ಲೆಂದರಲ್ಲಿ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಪುರುಷರ ಗುಂಪಿನಿಂದ ದೂರ ಸರಿಯುವ ಪ್ರಯತ್ನ ಮಾಡಿದರೂ ಮತ್ತಷ್ಟು ಮಂದಿ ಸೇರಿಕೊಂಡಿದ್ದಾರೆ. ನಮ್ಮನ್ನು ಹಿಡಿದೆಳೆದು ಅನುಮತಿ ಇಲ್ಲದೆ ಫೋಟೋ ಕ್ಲಿಕ್ಲಿಸಿದ್ದಾರೆ. ಪ್ರವಾಸಿ ತಾಣದ ಭೇಟಿ ನಮ್ಮ ಎಲ್ಲಾ ಉತ್ಸಾಹಕ್ಕೆ ಬ್ರೇಕ್ ಹಾಕಿತು ಎಂದು ಬ್ರಿಟಿಷ್ ಮಹಿಳೆ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಮೊಲಿ ಗೆಳೆಯ ಹಾಗೂ ಪಾರ್ಟ್ನರ್ ಘಟನೆ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಲಾಹೋರ್‌ನ ಸ್ಥಳೀಯರು ನನ್ನನ್ನ ಹಿಡಿದೆಳೆದು ಫೋಟೋ ಕ್ಲಿಕ್ಲಿಸಿದ್ದರು, ಅಸಭ್ಯವಾಗಿ ವರ್ತಿಸಿದರು. ಸ್ಥಳೀಯರು ಹೆಚ್ಚು ಉತ್ಸಾಹಗೊಂಡಿದ್ದಾರೆ. ನಾನು ಪ್ರತಿಕ್ರಿಯಿಸಿದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಸುಮ್ಮನಾಗಿದ್ದೆ. ಆದರೆ ಮೊಲಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆ ಪ್ರತಿಕ್ರಿಯಿಸಿದೆ. ಅವರು 50 ಮಂದಿ ಪುರುಷರು ಇದ್ದರು. ಹೀಗಾಗಿ ತೀವ್ರ ಆಕ್ರೋಶಗೊಂಡರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇತ್ತು. ಅವರಿಂದ ದೂರ ಸರಿಯುವ ಮಾರ್ಗ ಬಿಟ್ಟರೆ ಬೇರೆ ಯಾವುದು ಇರಲಿಲ್ಲ ಎಂದಿದ್ದಾರೆ.

ಪಾಕಿಸ್ತಾನ ಸ್ಥಳೀಯರ ವರ್ತನೆ ವಿರುದ್ದ ಹಲವರ ಆಕ್ರೋಶ

ಪಾಕಿಸ್ತಾನ ಪ್ರವಾಸಕ್ಕೆ ಹೋದ ಹಲವು ವಿದೇಶಿಗರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ನಡತೆ, ಗುಂಪಾಗಿ ಮುಗಿ ಬೀಳುವುದು ಇವೆಲ್ಲಾ ಆತಂಕ ಸೃಷ್ಟಿಸುತ್ತದೆ. ಇದೇ ವೇಳೆ ಪಾಕಿಸ್ತಾನ ಪ್ರಜೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕರಾಚಿಯಿಂದ ಲಾಹೋರ್‌ಗೆ ತೆರಳಿ ಇದೇ ಮಸೀದಿಗೆ ಹೋದಾಗ ನನಗೂ ಇದೇ ಅನುಭವವಾಯಿತು ಎಂದದ್ದಾರೆ. ಇದೇ ವೇಳೆ ಹಲವರು ನಿಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದೀರಿ, ಮಹಿಳೆಗೆ ಗೌರವ ನೀಡುವ ಕನಿಷ್ಠ ಪಾಠ, ಜ್ಞಾನವೂ ಇಲ್ಲದಾಯಿತೇ ಎಂದು ಆಕ್ರೋಶ ಹೊರಹಾಕಿದ್ದಾರೆ.

View post on Instagram