ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಶನಿವಾರ ಬ್ರಿಟನ್‌ನಿಂದ 40 ತಂತ್ರಜ್ಞರು ಆಗಮಿಸಲಿದ್ದಾರೆ.
ತಿರುವನಂತಪುರ: ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಶನಿವಾರ ಬ್ರಿಟನ್‌ನಿಂದ 40 ತಂತ್ರಜ್ಞರು ಆಗಮಿಸಲಿದ್ದಾರೆ.
ಇವರು ಎಫ್-35 ಯುದ್ಧ ವಿಮಾನದ ಕಡೇ ಯತ್ನವನ್ನು ಮಾಡಲಿದ್ದಾರೆ. ಒಂದು ವೇಳೆ ಇದೂ ವಿಫಲವಾದರೆ, ವಿಮಾನದ ಬಿಡಿ ಭಾಗಗಳನ್ನು ಬೇರ್ಪಡಿಸಿ ಏರ್ ಲಿಫ್ಟ್ ಮಾಡಲಿದ್ದಾರೆ.
ಜೂ.14ರಂದು ಹಿಂದೂಮಹಾಸಾಗರದಲ್ಲಿ ಭಾರತೀಯ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿ ಎಫ್-35ಬಿ ಬ್ರಿಟನ್‌ಗೆ ತೆರಳುವಾಗ ಇಂಧನ ಖಾಲಿ ಎಂದು ಹೇಳಿ ತಿರುವನಂತಪುರದಲ್ಲಿ ಇಳಿಸಿತ್ತು. ಆ ಬಳಿಕ ತಾಂತ್ರಿಕ ದೋಷಕ್ಕೊಳಗಾಗಿ ತಿರುವನಂತಪುರದಲ್ಲಿಯೇ ಉಳಿಯಬೇಕಾಯಿತು. ವಿಮಾನದ ತಂತ್ರಜ್ಞಾನ ಕಳವಾಗಬಹುದು ಎಂಬ ಭೀತಿಯಿಂದಾಗಿ ಭಾರತೀಯ ವಾಯುಪಡೆಯವರಿಂದ ರಿಪೇರಿಗೆ ಬ್ರಿಟನ್ ಒಲ್ಲೆಯೆಂದಿತ್ತು.
ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಚಿಂತನೆ
ತಿರುವನಂತಪುರಂ: ಬ್ರಿಟಿಷ್ ರಾಯಲ್ ನೇವಿಯ ಎಫ್-35 ಬಿ ಯುದ್ಧ ವಿಮಾನವು ಹೈಡ್ರಾಲಿಕ್ ದೋಷ ಮತ್ತು ಇಂಧನ ಖಾಲಿಯಾದ ಕಾರಣದಿಂದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಲ್ಯಾಂಡಿಂಗ್ ಆಗಿತ್ತು. 10 ದಿನಗಳಾದರೂ ಕೂಡ ಯುದ್ಧ ವಿಮಾನವು ತಿರುವನಂತಪುರಂನಲ್ಲೇ ಇದ್ದು, ಈಗ ಅದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿತ್ತು
ವಿಮಾನವು ನಿಲ್ದಾಣದ ವಿಐಪಿ ಬೇ 4 ರಲ್ಲಿ ನಿಂತಿದ್ದು, ಈಗಾಗಲೇ ಅಧಿಕಾರಿಗಳು ಅದರ ಪಾರ್ಕಿಂಗ್ ಶುಲ್ಕವನ್ನು ಲೆಕ್ಕ ಹಾಕಲು ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ ನಿಖರ ಮೊತ್ತವನ್ನೂ ನಿಗದಿ ಮಾಡಲಾಗಿಲ್ಲ. ಸದ್ಯ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಕಡಿಮೆ ಇರುವ ಕಾರಣ, ಈ ಜೆಟ್‌ನ ನೆಲೆ ಪ್ರಾರಂಭಿಕ ವಿಮಾನ ಚಲನೆಗೆ ಅಡ್ಡಿಯಾಗಿಲ್ಲ.
ಸಾಮಾನ್ಯವಾಗಿ ಪಾರ್ಕಿಂಗ್ ಶುಲ್ಕವನ್ನು ವಿಮಾನದ ತೂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದರೆ ಎಫ್-35 ಬಿ ಹಗುರವಾದ ಮತ್ತು ನಿಯಮಿತ ನಾಗರಿಕ ಹಾರಾಟಕ್ಕೆ ಸೇರದ ವಿಮಾನವಾಗಿರುವುದರಿಂದ ಈ ಪ್ರಕರಣದಲ್ಲಿ ವಿಶಿಷ್ಟ ಮೌಲ್ಯಮಾಪನವು ಅನ್ವಯಿಸಬಹುದು.
ದೋಷವನ್ನು ಸರಿಪಡಿಸಲು ಯುಕೆ ಮತ್ತು ಯುಎಸ್‌ನ ಎಂಜಿನಿಯರ್‌ಗಳ ತಂಡವು ತಿರುವನಂತಪುರಂಗೆ ಆಗಮಿಸಲಿದ್ದು, ವಿಮಾನ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಆದರೆ ಸಮಸ್ಯೆ ಬಗೆಹರಿಯದಿದ್ದರೆ, ಜೆಟ್ ಅನ್ನು ಸರಕು ಸಾಗಣೆ ವಿಮಾನದ ಮೂಲಕ ಮರಳಿ ತೆಗೆದುಕೊಂಡು ಹೋಗಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಾಗಬಹುದು
