ತುರ್ತು ಲ್ಯಾಂಡಿಂಗ್ ನಂತರ, ಹಾನಿಯನ್ನು ನಿರ್ಣಯಿಸಲು ಬ್ರಿಟಿಷ್ ತಾಂತ್ರಿಕ ತಂಡವು ಮೂರನೇ ದಿನ ಆಗಮಿಸಿತು. 

ನವದೆಹಲಿ (ಜೂ.20): ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಎಫ್-35ಬಿ ಫೈಟರ್ ಜೆಟ್ ತುರ್ತು ಲ್ಯಾಂಡಿಂಗ್ ಮಾಡಿದ ಕೆಲವು ದಿನಗಳ ಬಳಿಕ, ಬ್ರಿಟಿಷ್ ತಾಂತ್ರಿಕ ತಂಡವು ದುರಸ್ತಿ ಕಾರ್ಯ ಕೈಗೊಳ್ಳಲು ಸಹಾಯ ಮಾಡಲು ಭಾರತವು ಜೆಟ್ ಅನ್ನು ವಿಮಾನ ನಿಲ್ದಾಣದಲ್ಲಿನ ಹ್ಯಾಂಗರ್‌ಗೆ ಸ್ಥಳಾಂತರಿಸಲು ಮುಂದಾಯಿತು.

ಆದರೆ, ಈ ಪ್ರಸ್ತಾಪವನ್ನು ರಾಯಲ್ ನೇವಿ ತಿರಸ್ಕರಿಸಿದೆ ಎಂದು ಭಾರತೀಯ ರಕ್ಷಣಾ ಸಂಶೋಧನಾ ವಿಭಾಗವು ಮೂಲಗಳನ್ನು ಉಲ್ಲೇಖಿಸಿ ತಿಳಿಸಿದೆ. ನಂತರ ಭಾರತೀಯ ವಾಯುಪಡೆಯು ವಿಮಾನ ಮತ್ತು ಗ್ರೌಂಡ್‌ ಸ್ಟಾಫ್‌ಅನ್ನು ಮಳೆ ಮತ್ತು ಶಾಖದಿಂದ ರಕ್ಷಿಸಲು ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲು ಸೂಚಿಸಿತು, ಆದರೆ ಈ ಪ್ರಸ್ತಾಪವನ್ನು ಸಹ ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.

ಜೂನ್ 14 ರ ರಾತ್ರಿ ತುರ್ತು ಭೂಸ್ಪರ್ಶ ಮಾಡಿದ ನಂತರ ಬ್ರಿಟಿಷ್ F-35B ಫೈಟರ್ ಜೆಟ್ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ನಿಂತು 6 ದಿನಗಳಾಗಿವೆ. ಯುಕೆಯ HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿರುವ ಈ ಸುಧಾರಿತ ಯುದ್ಧ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಗಂಭೀರ ಹಾನಿಯನ್ನು ಅನುಭವಿಸಿದೆ ಎಂದು ನಂಬಲಾಗಿದೆ, ಇದರಿಂದಾಗಿ ರಿಪೇರಿ ಕಾರ್ಯ ಇನ್ನಷ್ಟು ವಿಳಂಬವಾಗಿದೆ.

ಹಿಂದೂ ಮಹಾಸಾಗರದಲ್ಲಿನ ಕೆಟ್ಟ ಹವಾಮಾನ ಮತ್ತು ಕಡಿಮೆ ಇಂಧನ ಮಟ್ಟದಿಂದಾಗಿ ಜೆಟ್ ತನ್ನ ವಿಮಾನವಾಹಕ ನೌಕೆಯಿಂದ ಬೇರೆಡೆಗೆ ತಿರುಗಿಸಬೇಕಾಯಿತು. ಭಾರತದ ವಾಯು ರಕ್ಷಣಾ ಗುರುತಿನ ವಲಯದ ಹೊರಗೆ ಕಾರ್ಯನಿರ್ವಹಿಸುತ್ತಿದ್ದ ಅದು ತಿರುವನಂತಪುರವನ್ನು ತನ್ನ ಎಮರ್ಜೆನ್ಸಿ ರಿಕವರಿ ಏರ್‌ಫೀಲ್ಡ್‌ ಆಗಿ ಗೊತ್ತು ಮಾಡಿತ್ತು.

ತುರ್ತು ಲ್ಯಾಂಡಿಂಗ್ ನಂತರ, ಹಾನಿಯನ್ನು ನಿರ್ಣಯಿಸಲು ಬ್ರಿಟಿಷ್ ತಾಂತ್ರಿಕ ತಂಡವು ಮೂರನೇ ದಿನ ಆಗಮಿಸಿತು. ಆದರೆ, ರಾಯಲ್ ನೇವಿಯಿಂದ ಹ್ಯಾಂಗರ್ ಪ್ರವೇಶ ಮತ್ತು ರಕ್ಷಣಾತ್ಮಕ ಹೊದಿಕೆ ಎರಡನ್ನೂ ನಿರಾಕರಿಸಲಾಗಿರುವುದರಿಂದ, ದುರಸ್ತಿ ಪ್ರಯತ್ನಗಳು ನಿಧಾನವಾಗಿ ನಡೆಯುತ್ತಿವೆ. ವಿಮಾನವು ಭಾರೀ ಭದ್ರತೆಯ ಅಡಿಯಲ್ಲಿ ವಿಮಾನ ನಿಲ್ದಾಣದ ಬೇ 4 ರಲ್ಲಿ ನಿಂತಿದ್ದು, ಹವಾಮಾನಕ್ಕೆ ಸಂಪೂರ್ಣವಾಗಿ ಒಡ್ಡಿಕೊಂಡಿದೆ.

ಪರಿಸ್ಥಿತಿಯನ್ನು ನಿರ್ವಹಿಸಲು ರಾಯಲ್ ನೇವಿಯ ನಾಲ್ವರು ಸಿಬ್ಬಂದಿ ಪ್ರಸ್ತುತ ನಗರದಲ್ಲಿ ಬೀಡುಬಿಟ್ಟಿದ್ದಾರೆ. F-35B ವಿಶ್ವದ ಅತ್ಯಂತ ಸುಧಾರಿತ ಮತ್ತು ದುಬಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಕಡಿಮೆ ಸಮಯದಲ್ಲಿ ಟೇಕ್-ಆಫ್ ಮತ್ತು ಲಂಬವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಕೇರಳದಲ್ಲಿ ಇದರ ಅನಿರೀಕ್ಷಿತ ಉಪಸ್ಥಿತಿಯು ವಾಯುಯಾನ ಉತ್ಸಾಹಿಗಳು ಮತ್ತು ಪ್ರಯಾಣಿಕರಲ್ಲಿ ಕುತೂಹಲವನ್ನು ಕೆರಳಿಸಿದೆ.

ಯುಕೆಯ HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಪ್ರಸ್ತುತ ಇಂಡೋ-ಪೆಸಿಫಿಕ್‌ನಲ್ಲಿ ನಿಯೋಜಿಸಲಾಗಿದ್ದು, ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ನೌಕಾ ವ್ಯಾಯಾಮವನ್ನು ಪೂರ್ಣಗೊಳಿಸಿದೆ. ಎರಡೂ ನೌಕಾಪಡೆಗಳ ನಡುವಿನ ಸಹಕಾರದ ಹೊರತಾಗಿಯೂ, ಹಾನಿಗೊಳಗಾದ ಫೈಟರ್ ಜೆಟ್ ಅನ್ನು ನಿರ್ವಹಿಸುವ ಬಗ್ಗೆ ಭಾರತದ ವಾಯುಪಡೆ ನೀಡಿದ್ದ ಬೆಂಬಲವನ್ನು ರಾಯಲ್ ನೇವಿ ತಿರಸ್ಕರಿಸಿದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.