ಲಂಡನ್‌(ಏ.20): ಕೊರೋನಾ ವೈರಸ್‌ನಿಂದಾಗಿ ಬ್ರಿಟನ್‌ನಲ್ಲಿ ದಿನ ಪತ್ರಿಕೆಗಳ ಮಾರಾಟ ಹಾಗೂ ಜಾಹೀರಾತು ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಲಾಕ್‌ಡೌನ್‌ ವೇಳೆ ದಿನನಿತ್ಯ ಖರೀದಿಸುವ ಅಗತ್ಯ ವಸ್ತುಗಳ ಪಟ್ಟಿಗೆ ದಿನ ಪತ್ರಿಕೆಗಳನ್ನು ಸೇರಿಸುವಂತೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ಟೈಮ್ಸ್‌ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿರುವ ಸಾಂಸ್ಕೃತಿಕ ಸಚಿವ ಒಲಿವರ್‌ ಡೋವೆನ್‌, ಸುದ್ದಿ ಮಾಧ್ಯಮಗಳು ಕೊರೋನಾ ವೈರಸ್‌ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡುತ್ತಿವೆ. ಆದರೆ, ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡದೇ ಇರುವ ಕಾರಣ ಕೋಟ್ಯಂತರ ರು. ನಷ್ಟವಾಗುತ್ತಿದೆ. ಹೀಗಾಗಿ ಜನರು ಪತ್ರಿಕೆಗಳನ್ನು ಖರಿದಿಸುವ ಮೂಲಕ ಸುದ್ದಿ ಮಾಧ್ಯಮವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಡೋವೆನ ಅವರ ಲೇಖನವನ್ನು ಬೆಂಬಲಿಸಿರುವ ಕನ್ಸರ್ವೇಟಿವ್‌ ಪಕ್ಷದ ಸಂಸದ ಸಜಿದ್‌ ಜಾವಿದ್‌, ಪತ್ರಿಕೆಗಳು ನಾಲ್ಕನೇ ತುರ್ತು ಸೇವೆ ಆಗಿದೆ ಎಂದು ಬಣ್ಣಿಸಿದ್ದಾರೆ.