ಲಂಡನ್‌[ಮಾ.17]: ಕೊರೋನಾ ಪೀಡಿತರ ಸಂಖ್ಯೆ ವಿಶ್ವದಲ್ಲಿ ಏರುತ್ತಿರುವ ನಡುವೆಯೇ, ಯಾವುದೇ ಚಿಕಿತ್ಸೆ ನೀಡದೇ ‘ಹಿಂಡು ನಿರೋಧಕತೆ’ಯ ಮೂಲಕ ಕೊರೋನಾ ಸೋಂಕನ್ನು ಕಡಿಮೆ ಮಾಡುವ ಚಿಂತನೆ ಮೊಳಕೆಯೊಡೆದಿದೆ. ಬ್ರಿಟನ್‌ನಲ್ಲಿ ಈ ಪ್ರಯೋಗಕ್ಕೆ ಅಲ್ಲಿನ ಬೊರಿಸ್‌ ಜಾನ್ಸನ್‌ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದು ಸಾವಿನ ಜತೆ ಚೆಲ್ಲಾಟವಾಗಬಹುದು ಎಂದು ಎಚ್ಚರಿಸಲಾಗಿದೆ.

ಇತರ ದೇಶಗಳಲ್ಲಿ ಈಗಾಗಲೇ ಕೊರೋನಾ ಸೋಂಕು ಹರಡದಂತಾಗಲು ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಪ್ರಯಾಣ ನಿಷೇಧ ಹೇರಲಾಗುತ್ತಿದೆ. ಆದರೆ ಬ್ರಿಟನ್‌ನಲ್ಲಿ ಇದಕ್ಕೆ ತದ್ವಿರುದ್ಧ ನಿಲುವು ತಾಳಲಾಗಿದೆ.

ಏನಿದು ಹಿಂಡು ನಿರೋಧಕತೆ?:

ಕೊರೋನಾ ವ್ಯಾಪಿಸುತ್ತಿದ್ದರೂ ಅನೇಕರಿಗೆ ಕೊರೋನಾ ನಿರೋಧಕ ಶಕ್ತಿ ಇರುತ್ತದೆ. ಇಂತಹ ವ್ಯಕ್ತಿಗಳಿಗೆ ಕೊರೋನಾ ಅಂಟುವುದೇ ಇಲ್ಲ. ಇಂಥವರ ಜತೆ ಕೊರೋನಾ ಪೀಡಿತರನ್ನು ಇರಲು ಬಿಟ್ಟರೆ ಅವರಲ್ಲೂ ಕೊರೋನಾ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕೆ ‘ಹಿಂಡು ನಿರೋಧಕತೆ’ ಎನ್ನುತ್ತಾರೆ. ಈ ಉಪಾಯವು ಕೊರೋನಾ ವಿರುದ್ಧ ದೀರ್ಘಾವಧಿ ಹೋರಾಟದಲ್ಲಿ ನೆರವಾಗುತ್ತದೆ ಎಂದು ಬ್ರಿಟನ್‌ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್‌ ಪ್ಯಾಟ್ರಿಕ್‌ ವ್ಯಾಲೆನ್ಸ್‌ ಹೇಳಿದ್ದಾರೆ.

ದಡಾರ ತಡೆಯುವಲ್ಲೂ ಇಂಥದ್ದೇ ತಂತ್ರ ಪ್ರಯೋಗಿಸಲಾಗುತ್ತದೆ. ದಡಾರ ಲಸಿಕೆ ಹಾಕಿಕೊಂಡವರ ಜತೆ ಲಸಿಕೆ ಹಾಕಿಕೊಳ್ಳದವರು ಇದ್ದರೆ, ಅವರಲ್ಲೂ ದಡಾರ ನಿರೋಧಕತೆ ಸೃಷ್ಟಿಯಾಗುತ್ತದೆ ಎಂದು ವರದಿಗಳು ಹೇಳಿವೆ.