ಲಂಡನ್‌(ಏ.13): ಕೊರೋನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಮೊದಲ ವಿಶ್ವ ನಾಯಕ ಎನಿಸಿಕೊಂಡಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಭಾನುವಾರ ಡಿಸ್ಚಾಜ್‌ರ್‍ ಆಗಿದ್ದಾರೆ.

55 ವರ್ಷದ ಬೋರಿಸ್‌ ಜಾನ್ಸನ್‌ ಅವರಲ್ಲಿ ಕೊರೋನಾ ಸೋಂಕು ಲಕ್ಷಣಗಳು ತೀವ್ರಗೊಂಡ ಹಿನ್ನೆಲೆ ಕಳೆದ ಭಾನುವಾರ ಸೇಂಟ್‌ ಥಾಮಸ್‌ ಆಸ್ಪತ್ರೆಗೆ ದಾಖಲಿಸಿ, ಮೂರು ರಾತ್ರಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅನಂತರ ಆರೋಗ್ಯದಲ್ಲಿ ಅಲ್ಪಮಟ್ಟಿಗೆ ಚೇತರಿಕೆ ಕಂಡುಬಂದ ಹಿನ್ನೆಲೆ ಗುರುವಾರ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು.

ಆಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ವೈದ್ಯ ಸಿಬ್ಬಂದಿಗೆ ಬೋರಿಸ್‌ ಅವರು ಧನ್ಯವಾದ ಅರ್ಪಿಸಿದ್ದಾರೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಋುಣ ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ, ಕೊರೋನಾ ವೈರಸ್‌ ಅನ್ನು ಬ್ರಿಟನ್‌ ಮಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.