* ತಾಲಿಬಾನ್‌ ಸರ್ಕಾರ ರಚನೆ ಬೆನ್ನಲ್ಲೇ ಗೊತ್ತು​ವ​ಳಿ* ನೆರೆ ದೇಶ​ಗ​ಳಿಗೆ ಆಫ್ಘನ್‌ ಬೆದ​ರಿಕೆ ಆಗ​ಬಾ​ರ​ದು: ಮೋದಿ

ನವದೆಹಲಿ(ಸೆ.10): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರಕ್ಕೆ ಖಡಕ್‌ ಸಂದೇಶ ರವಾನಿಸಿರುವ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳು ಭಯೋತ್ಪಾದನೆ ನಿಗ್ರಹ ಯೋಜನೆಯನ್ನು ಅಂಗೀಕರಿಸಿವೆ. ಇತರ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿಗಳಿಗೆ ಅಷ್ಘಾನಿಸ್ತಾನ ಬಳಕೆ ಮಾಡಿಕೊಳ್ಳುವುದಕ್ಕೆ, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಆಸ್ಪದ ನೀಡದಿರಲು, ಭಯೋತ್ಪಾದಕರ ಒಳನುಸುಳುವಿಕೆಯ ವಿರುದ್ಧ ಒಟ್ಟಾಗಿ ಹೋರಾಡಲು ಬ್ರಿಕ್ಸ್‌ ರಾಷ್ಟ್ರಗಳ ನಾಯಕರು ಕರೆ ನೀಡಿದ್ದಾರೆ.

ಅಷ್ಘಾನಿಸ್ತಾನ ತಾಲಿಬಾನ್‌ ವಶವಾದ ಬೆನ್ನಲ್ಲೇ, ಬ್ರಿಕ್ಸ್‌ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಹೋರಾಡಲು ಒಕ್ಕೊರಲಿನ ನಿರ್ಣಯ ಅಂಗೀಕರಿಸಿರುವುದು ಮಹತ್ವ ಪಡೆದುಕೊಂಡಿದೆ.

ವರ್ಚುವಲ್‌ ಆಗಿ ಆಯೋಜಿಸಿದ್ದ ಶೃಂಗ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಮೋದಿ, ಅಷ್ಘಾನಿಸ್ತಾನ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಬೆದರಿಕೆ ಆಗಬಾರದು. ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಮೂಲವಾಗಬಾರದು. ಅಷ್ಘಾನಿಸ್ತಾನದ ನಾಗರಿಕರು ತಮ್ಮ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ತಮ್ಮ ದೇಶ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗೆ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅಷ್ಘಾನಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಗಮನ ನೀಡುವ ಅಗತ್ಯವಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಶೃಂಗ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಕ್ರೈಲ್‌ ರಾಮಫೋಸಾ ಮತ್ತು ಬ್ರೆಜಿಲ್‌ನ ಜೈರ್‌ ಬೊಲ್ಸೊನಾರೊ ಅವರು ಭಾಗಿಯಾಗಿದ್ದರು.

ಇದು ಬ್ರಿಕ್ಸ್‌ ರಾಷ್ಟ್ರಗಳ 15ನೇ ಶೃಂಗ ಸಭೆಯಾಗಿದ್ದು, ಭಾರತ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.