ಸಹ ಪ್ರಯಾಣಿಕನಿಗೆ ವಿಮಾನದಲ್ಲಿ ಸಖತ್ ಪಂಚ್ ತಾಳ್ಮೆ ಕಳೆದುಕೊಂಡ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಫ್ಲೋರಿಡಾಗೆ ಹೊರಟಿದ್ದ ವಿಮಾನದಲ್ಲಿ ಘಟನೆ
ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ (Mike Tyson) ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಹಾರಲು ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕನೋರ್ವನಿಗೆ ಸರಿಯಾಗಿ ಪಂಚ್ ಮಾಡಿದ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆತನೊಂದಿಗೆ ಮಾತನಾಡಲು ವ್ಯಕ್ತಿಯೊಬ್ಬ ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದಿದ್ದರಿಂದ ಕಿರಿಕಿರಿಗೊಳಗಾದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಆತನಿಗೆ ಸರಿಯಾಗಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ವೀಡಿಯೋದಲ್ಲಿ, ಟೈಸನ್ ತನ್ನ ಸೀಟಿನ ಹಿಂಭಾಗಕ್ಕೆ ತಿರುಗಿ ಹಿಂಬದಿ ಕುಳಿತಿದ್ದ ಸಹ ಪ್ರಯಾಣಿಕನಿಗೆ ಸರಿಯಾಗಿ ಬಾರಿಸುತ್ತಾನೆ. ಇದರಿಂದ ಸಹ ಪ್ರಯಾಣಿಕ ಗಂಭೀರವಾಗಿ ಗಾಯಗೊಳ್ಳುತ್ತಾನೆ.
ಈ ವಾಗ್ವಾದ ಸಂಭವಿಸುವುದಕ್ಕೂ ಮೊದಲು, ಮಾಜಿ ಬಾಕ್ಸರ್ ಸದ್ದಿಲ್ಲದೆ ಕುಳಿತಿರುತ್ತಾನೆ. ಈ ವೇಳೆ ಸಹ ಪ್ರಯಾಣಿಕ ಟೈಸನ್ ಕುಳಿತಿದ್ದ ಆಸನದ ಹಿಂಭಾಗದಲ್ಲಿ ನಿಂತು, ತೋಳುಗಳನ್ನು ಬೀಸುತ್ತಾ ಅವನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. TMZ ವರದಿಯ ಪ್ರಕಾರ, ಟೈಸನ್ ಆರಂಭದಲ್ಲಿ ಪ್ರಯಾಣಿಕನೊಂದಿಗೆ ಸ್ನೇಹಪರವಾಗಿ ವರ್ತಿಸಿದ್ದಾನೆ. ಆದರೆ ಆ ವ್ಯಕ್ತಿ ಅವನನ್ನು ಪ್ರಚೋದಿಸುವುದನ್ನು ನಿಲ್ಲಿಸದೇ ಇದ್ದಾಗ ಸಿಟ್ಟಿಗೆದ್ದ ಆತ ಹಿಡಿದು ಬಾರಿಸಿದ್ದಾನೆ.
ಪ್ರಯಾಣಿಕರು ಕುಡಿದಿದ್ದರು ಮತ್ತು ಟೈಸನ್‌ನನ್ನು ಕೆರಳಿಸುತ್ತಿದ್ದರು ಎಂದು ಟೈಸನ್‌ಗೆ ಹತ್ತಿರವಿರುವ ಮೂಲವೊಂದನ್ನು ಉಲ್ಲೇಖಿಸಿ ಟ್ಯಾಬ್ಲಾಯ್ಡ್ ವೆಬ್‌ಸೈಟ್ ವರದಿ ಮಾಡಿದೆ. ಸುಮ್ಮನಿರುವಂತೆ 55 ವರ್ಷದ ಮೈಕ್ ಟೈಸನ್ ಸಹ ಪ್ರಯಾಣಿಕನಿಗೆ ಮನವಿ ಮಾಡಿದರು ಆತ ಸುಮ್ಮನಿರದಿದ್ದಾಗ ಟೈಸನ್ ತಾನು ಕುಳಿತಲ್ಲಿಂದ ಎದ್ದು ಬಂದು ಆತನಿಗೆ ಸರಿಯಾಗಿ ಬಾರಿಸಿದ್ದಾನೆ. ಅಲ್ಲದೇ ನಂತರ ಫ್ಲೋರಿಡಾಕ್ಕೆ ಹೊರಡುವ ಮೊದಲೇ ಅವರು ವಿಮಾನದಿಂದ ಹೊರನಡೆದರು ಎಂದು ವರದಿಯಾಗಿದೆ.
ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್!
ವಿಮಾನದಲ್ಲಿ ಆಕ್ರಮಣಕಾರಿಯಂತೆ ಆಡುತ್ತಿದ್ದ, ಕಿರುಕುಳವನ್ನು ನೀಡುತ್ತಿದ್ದ ಹಾಗೂ ಟೈಸನ್‌ನತ್ತ ನೀರಿನ ಬಾಟಲಿಯನ್ನು ಎಸೆದ ಪ್ರಯಾಣಿಕನೊಂದಿಗೆ ದುರದೃಷ್ಟವಶಾತ್, ಮಿಸ್ಟರ್ ಟೈಸನ್ ಕೂಡ ಕಠಿಣವಾಗಿ ವರ್ತಿಸಬೇಕಾಯಿತು ಎಂದು ಟೈಸನ್ ಅವರ ಪ್ರತಿನಿಧಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.ಇದಾದ ಬಳಿಕ ಅಲ್ಲಿಗೆ ಆಗಮಿಸಿದ ಅಧಿಕಾರಿಗಳು ಟೈಸನ್‌ಗೆ ಕಿರುಕುಳ ನೀಡಿ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಲಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಟೈಸನ್ ಥಳಿಸಿದ್ದರಿಂದ ಗಾಯಗೊಂಡ ಓರ್ವನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ಆ ವಿಚಾರದ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಲಾಗಿದೆ ಎಂದು ಪೊಲೀಸರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೈಕ್ ಟೈಸನ್: ನಿಮಗೆ ಗೊತ್ತಿರದ ಬಾಕ್ಸರ್‌ನ ಡ್ರಗ್ಸ್, ಕ್ರೈಂ, ಸೆಕ್ಸ್ ಕಹಾನಿ