ಲಂಡನ್(ಡಿ.13): ಬ್ರಿಟನ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಭರ್ಜರಿ ಜಯ ಸಾಧಿಸಿದ್ದು, ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಹಾಲಿ ಫಲಿತಾಂಶದನ್ವಯ ಒಟ್ಟು 650 ಸ್ಥಾನಗಳ ಪೈಕಿ 600 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಕನ್ಸರ್ವೇಟಿವ್ ಪಕ್ಷ 326 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಕನ್ಸರ್ವೇಟಿವ್ ಪಕ್ಷ 43 ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬ್ರಿಟನ್ ಜನತೆ ಬೋರಿಸ್ ಜಾನ್ಸನ್ ಅವರನ್ನು ಮತ್ತೆ ಪ್ರಧಾನಿ ಹುದ್ದೆ ಮೇಲೆ ಕುಳ್ಳಿರಿಸಿದ್ದಾರೆ.

ಭಾರತದ ಅಳಿಯ ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ!

ಇನ್ನು ಪ್ರತಿಪಕ್ಷ ಲೇಬರ್ ಪಾರ್ಟಿ 55 ಸ್ಥಾನಗಳನ್ನು ಕಳೆದುಕೊಂಡಿದ್ದು, ಒಟ್ಟು 197 ಸ್ಥಾನಗಳಲ್ಲಿ ಜಯ ಸಾಧಿಸಿದೆ. 

ಪ್ರಧಾನಿ ಬೋರಿಸ್ ಜಾನ್ಸನ್ ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ಪಡೆದು, ಜನವರಿ 31ರ ಒಳಗಾಗಿ ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಇದೀಗ ಹಾದಿ ಸುಗಮವಾಗಿದೆ. 

2016ರ ಬ್ರೆಕ್ಸಿಟ್ ಜನಮತಗಣನೆಯ ಅಭಿಯಾನವನ್ನು ಜಾನ್ಸನ್ ಯಶಸ್ವಿಯಾಗಿ ಮುಂದುವರಿಸಿದ್ದು, ಈ ಬಾರಿ "ಗೆಟ್ ಬ್ರೆಕ್ಸಿಟ್ ಡನ್" ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದ್ದರು.

ಇನ್ನು ಬ್ರಿಟನ್ ಪ್ರಧಾನಿಯಾಗಿ ಮರು ಆಯ್ಕೆಯಾದ ಬೋರಿಸ್ ಜಾನ್ಸನ್ ಅವರಿಗೆ ಪ್ರಧಾನಿ ಮೋದಿ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದು, ಎರಡೂ ದೇಶಗಳು ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯವ ಭರವಸೆ ವ್ಯಕ್ತಪಡಿಸಿದ್ದಾರೆ.