ವಾಷಿಂಗ್ಟನ್(ನ.19)‌: ವಿಶ್ವವಿಖ್ಯಾತ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ನ ಇಮೇಜ್‌ಗೆ ಧಕ್ಕೆ ತಂದಿದ್ದ ಹೊಸ ಮಾದರಿಯ 737 ಮ್ಯಾಕ್ಸ್‌ ವಿಮಾನಗಳ ಮರು ಹಾರಾಟಕ್ಕೆ ‘ಅಮೆರಿಕದ ಕೇಂದ್ರೀಯ ವಿಮಾನಯಾನ ಆಡಳಿತ’ ಮತ್ತೆ ಅನುಮತಿ ನೀಡಿದೆ.

2019ರಲ್ಲಿ ಇಂಡೋನೇಷ್ಯಾ ಮತ್ತು ಇಥಿಯೋಪಿಯಲ್ಲಿ ನಡೆದ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಅಪಘಾತ ಪ್ರಕರಣಗಳಲ್ಲಿ 350ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಹೀಗಾಗಿ ತಕ್ಷಣದಿಂದ ವಿಮಾನಗಳ ಹಾರಾಟಕ್ಕೆ ತಡೆ ನೀಡಲಾಗಿತ್ತು. ಜೊತೆಗೆ ವಿಶ್ವದ ಬಹುತೇಕ ದೇಶಗಳ ನೂರಾರು ಕಂಪನಿಗಳು ತಾವು ಖರೀದಿಗೆ ನೀಡಿದ್ದ ಆರ್ಡರ್‌ ಅನ್ನೂ ರದ್ದು ಮಾಡಿದ್ದವು. ಈ ಪ್ರಕರಣ ಬೋಯಿಂಗ್‌ ವಿಮಾನಗಳ ಸುರಕ್ಷತೆಯ ಇಮೇಜ್‌ಗೆ ಭಾರೀ ಧಕ್ಕೆ ನೀಡಿತ್ತು.

ಅದರ ಬೆನ್ನಲ್ಲೇ ವಿಮಾನದ ಸುರಕ್ಷತೆ ಕುರಿತು ಸುದೀರ್ಘ ಪರಿಶೀಲನೆ ನಡೆದಿತ್ತು. ಅದರನ್ವಯ ಇದೀಗ ಮತ್ತೆ 737 ಮ್ಯಾಕ್ಸ್‌ ವಿಮಾನಗಳ ಹಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಈ ನಡುವೆ ಭಾರತದಲ್ಲಿ ಈ ವಿಮಾನಗಳ ಸಂಚಾರಕ್ಕೆ ಅನುಮೋದನೆ ನೀಡಲು ಇನ್ನಷ್ಟು ಸಮಯ ಕಾದು ನೋಡುವುದಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರ ತಿಳಿಸಿದ್ದಾರೆ.