ಇಂಡೋನೇಷ್ಯಾ ವಿಮಾನದ ಅವಶೇಷ, ಅಂಗಾಂಗ ಪತ್ತೆ: ಯಾರೂ ಬದುಕುಳಿದ ಸುಳಿವಿಲ್ಲ!
ಇಂಡೋನೇಷ್ಯಾದ ಜಕಾರ್ತದಿಂದ ಟೇಕ್‌ಆಫ್ ಆದ ಕೆಲವೇ ಹೊತ್ತಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನ| ಇಂಡೋನೇಷ್ಯಾ: ವಿಮಾನದ ಅವಶೇಷ, ಅಂಗಾಂಗ ಪತ್ತೆ| ಯಾರೂ ಬದುಕುಳಿದ ಸುಳಿವಿಲ್ಲ
ಜಕಾರ್(ಜ.11): ಇಂಡೋನೇಷ್ಯಾದ ಜಕಾರ್ತದಿಂದ ಟೇಕ್‌ಆಫ್ ಆದ ಕೆಲವೇ ಹೊತ್ತಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ಬೋಯಿಂಗ್ 737-500 ವಿಮಾನದ ಭಗ್ನಾವಶೇಷಗಳು ಮತ್ತು ಮಾನವ ದೇಹದ ಭಾಗಗಳು ಸಮುದ್ರದ 75 ಅಡಿ ಆಳದಲ್ಲಿ ಭಾನುವಾರ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಂಡೋನೇಷ್ಯಾ ಏರ್ ಚೀಫ್ ಮಾರ್ಷಲ್, ‘ಶೋಧ ಕಾರ‍್ಯದಲ್ಲಿ ತೊಡಗಿಕೊಂಡಿರುವವರಿಗೆ ವಿಮಾನದ ಕೆಲ ಭಾಗಗಳು ಪತ್ತೆಯಾಗಿವೆ. ಆದರೆ ವಿಮಾನ ಪತನಕ್ಕೆ ಕಾರಣ ಏನೆಂದು ಈವರೆಗೆ ತಿಳಿದದುಬಂದಿಲ್ಲ. ಹಾಗೆಯೇ ದುರಂತದಲ್ಲಿ ಬದುಕುಳಿದವರ ಸುಳಿವೂ ಇಲ್ಲ’ ಎಂದು ತಿಳಿಸಿದ್ದಾರೆ.
ಶನಿವಾರ ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಬೊರ್ನಿಯೋ ದ್ವೀಪದ ಪೊಟೈನಕ್‌ಗೆ ಹೊರಟಿದ್ದ ಶ್ರೀವಿಜಯ-182 ವಿಮಾನ, ಹಾರಾಟ ಕೈಗೊಂಡ ಕೆಲವೇ ಹೊತ್ತಿನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 62 ಪ್ರಯಾಣಿಕರಿದ್ದು, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಬೋಯಿಂಗ್ 737-500 ವಿಮಾನ ಸುಮಾರು 27 ವರ್ಷಗಳಷ್ಟುಹಳೆಯದಾಗಿದ್ದು, ಸುರಕ್ಷತೆ ವ್ಯವಸ್ಥೆಯ ಲೋಪವೇ ವಿಮಾನ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಮುನ್ನ 2018ರಲ್ಲಿ ಜಕಾರ್ತದಲ್ಲಿ ವಿಮಾನ ಪತನವಾಗಿ 189 ಮಂದಿ ಸಾವಿಗೀಡಾಗಿದ್ದರು.