ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ: ನಾಲ್ವರು ಮೃತಪಟ್ಟಿರುವ ಸಾಧ್ಯತೆ
Big Breaking - Blast in Karachi: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕರಾಚಿ (ಏ.26): ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಇನ್ನೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಗೊಂಡವರ ರಕ್ಷಣಾ ಕಾರ್ಯಾಚರಣೆ (Rescue Operation) ಭರದಿಂದ ಸಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಚೀನಾ (Chinese) ಭಾಷಾ ಶಿಕ್ಷಕರೊಬ್ಬರೂ ಸೇರಿದ್ದಾರೆ ಎನ್ನಲಾಗುತ್ತಿದೆ.
ಸ್ಫೋಟ ನಡೆದ ಸ್ಥಳದ ಕಡೆಗೆ ವಿದೇಶಿ ಶಿಕ್ಷಕರು ವ್ಯಾನ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದರು, ಎಂದು ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಸ್ಪಷ್ಟ ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಮಾಧ್ಯಮದೊಂದಿಗೆ ಮಾತನಾಡಿದ ಪೂರ್ವ ಡಿಐಜಿ ಮುಖದ್ದಾಸ್ ಹೈದರ್ ಘಟನೆಗೆ ಸ್ಪಷ್ಟ ಕಾರಣವಿನ್ನೂ ತಿಳಿದು ಬಂದಿಲ್ಲ. ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಸ್ಥಳದಲ್ಲಿ ಮೊಕ್ಕಾ ಹೂಡಿದ್ದು, ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುತ್ತಿದೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಾನ್ ಭದ್ರತೆಗಾಗಿ ಇವರನ್ನು ನೇಮಿಸಲಾಗಿತ್ತು.
ಏತನ್ಮಧ್ಯೆ, ಸಿಂಧ್ (Sindh) ಮುಖ್ಯ ಮಂತ್ರಿ ಮುರಾದ್ ಆಲಿ ಶಾ ಸ್ಫೋಟದ ಬಗ್ಗೆ ಮಾಹಿತಿ ಪಡೆದಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಗಾಯಗೊಂಡವರನ್ನು ಡೌವ್ ವಿಶ್ವವಿದ್ಯಾಲಯದ ಆರೋಗ್ಯ ಸಂಸ್ಥೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸ್ಫೋಟದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕರಾಚಿ ಕಮಿಷನರ್‌ಗೆ ಶಾ ಆದೇಶಿಸಿದ್ದಾರೆ.
ಕಾಬೂಲ್ 2 ಶಾಲೆಗಳಲ್ಲಿ ಆತ್ಮಾಹುತಿ ದಾಳಿ
ಕರಾಚಿಯ Confucius Institute ಬಳಿ ಈ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಇದು 'ಆತ್ಮಹುತಿ ದಾಳಿ' ಎಂಬಂತೆ ಕಾಣುತ್ತಿದೆ. ಮೃತಪಟ್ಟ ನಾಲ್ವರಲ್ಲಿ ಮೂವರು ಚೀನಾ ನಾಗರಿಕರು ಸೇರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಾನ್ಫ್ಯೂಕಸ್ ಸಂಸ್ಥೆಯ ನಿರ್ದೇಶಕ ಹಾಂಗ್ ಗಿಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾಯಿ ಮತ್ತು ವ್ಯಾನ್ ಚಾಲಕ ಖಾಲೀದ್ ಎಂದು ಗುರುತಿಸಲಾಗಿದೆ. ಕರಾಚಿ ಪೊಲೀಸ್ ಚೀಫ್ ಗುಲಾಮ್ ನಬಿ ಮೆನನ್ ಮಾತನಾಡಿ, ಬುರ್ಖಾಧಾರಿ ಮಹಿಳೆಯೊಬ್ಬಳು ಈ ದಾಳಿಯಲ್ಲಿ ಭಾಗಿಯಾಗಿದ್ದಾಳೆಂದು ತಿಳಿಸಿದ್ದಾರೆ.
ಸ್ಫೋಟ ಖಂಡಿಸಿದ ಪ್ರಧಾನಿ ಶಾಭಾಜ್ ಶರೀಫ್
ಸ್ಫೋಟವನ್ನು ಖಂಡಿಸಿದ ಪ್ರಧಾನಿ (Pakistan Prime Minister) ಶೇಹಬಾಜ್ ಶರೀಫ್ (Shahbaz Sharif) ಮೃತರಿಗೆ ಶ್ರದ್ಧಾಂಜಲಿ (Condolences) ಸಲ್ಲಿಸಿದ್ದಾರೆ. ಮೃತರ ಕುಟುಂಬದೊಂದಿಗೆ ಇರುವುದಾಗಿ ಹೇಳಿದ್ದಾರೆ. ಗಾಯಗೊಂಡವರು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿಯೂ ಉಗ್ರರ ದಾಳಿ (Terror Attack) ನಡೆದಿದ್ದು, ಉಗ್ರರು ಅಮಾಯಕ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದರು. ಕಾಬೂಲ್‌ನ (Kabul) ಪಶ್ಚಿಮ ಪ್ರದೇಶದ ಎರಡು ಶಾಲೆಗಳ ಹೊರಗೆ ಆತ್ಮಾಹುತಿ ಬಾಂಬ್ ದಾಳಿ (Sucicie Bomb Blast) ನಡೆದಿತ್ತು. 25 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದರು. ಹೆಚ್ಚಿನ ಸಂಖ್ಯೆಯ ಮಕ್ಕಳು ಗಾಯಗೊಂಡಿದ್ದರು. ಮಮ್ತಾಜ್ ಎಜುಕೇಶನಲ್ ಸೆಂಟರ್ ಬಳಿ ಮೊದಲ ಸ್ಫೋಟ ಸಂಭವಿಸಿದರೆ, ಅಬ್ದುಲ್ ರಹೀಮ್ ಶಹೀದ್ ಹೈಸ್ಕೂಲ್ ಎದುರು ಎರಡನೇ ಸ್ಫೋಟ ಸಂಭವಿಸಿದೆ. ಈ ಸ್ಫೋಟಗಳು ನಡೆದಾಗ ಮಕ್ಕಳು ರಜೆ ಮುಗಿಸಿ ಮನೆಗೆ ತೆರಳಲು ಸಜ್ಜಾಗಿದ್ದರೆನ್ನಲಾಗಿದೆ. ಕಾಬೂಲ್‌ನ ದಸ್ತಾ-ಬರ್ಚಿ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿತ್ತು.