ಪಾಕ್‌ನಲ್ಲಿ ಮತ್ತೊಂದು ಬಾಲಾಕೋಟ್‌ ದಾಳಿ ಭೀತಿ!| ಕರಾಚಿಯಲ್ಲಿ ವಿಮಾನಗಳ ಸಂಚಾರದ ಸುದ್ದಿಗೆ ಬೆಚ್ಚಿಬಿದ್ದ ಜನತೆ| ಬಂದರು ನಗರಿ ಸಂಪೂರ್ಣ ಮುಚ್ಚಿದ ಬಗ್ಗೆ ಟ್ವೀಟರ್‌ನಲ್ಲಿ ವದಂತಿ

ನವದೆಹಲಿ(ಜೂ.11): ಭಾರತೀಯ ವಾಯುಪಡೆ ಕಳೆದ ವರ್ಷ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿಯ ಮಾದರಿಯಲ್ಲೇ ಮತ್ತೊಮ್ಮೆ ಪಾಕಿಸ್ತಾನದ ಗಡಿಯೊಳಗೆ ಯುದ್ಧವಿಮಾನಗಳನ್ನು ನುಗ್ಗಿಸಿ ಕರಾಚಿ ಮೇಲೆ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನೀಯರು ಮಂಗಳವಾರ ರಾತ್ರಿ ಟ್ವೀಟರ್‌ನಲ್ಲಿ ಭಯಭೀತರಾದ ಘಟನೆ ನಡೆದಿದೆ.

ಬಾಲಾಕೋಟಲ್ಲಿ ಮತ್ತೆ ಉಗ್ರರ ಫ್ಯಾಕ್ಟ್ರಿ! ಗುಪ್ತಚರ ದಳ ಎಚ್ಚರಿಕೆ

ಕರಾಚಿಯ ಸುತ್ತಮುತ್ತ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಹಾರಾಡುತ್ತಿವೆ, ಹೀಗಾಗಿ ಅಧಿಕಾರಿಗಳು ಕರಾಚಿ ನಗರವನ್ನು ಸಂಪೂರ್ಣ ಮುಚ್ಚಿದ್ದಾರೆ ಎಂದು ಮೊದಲಿಗೆ ಯಾರೋ ಒಬ್ಬ ಪಾಕಿಸ್ತಾನಿ ಟ್ವೀಟ್‌ ಮಾಡಿದ್ದಾನೆ. ನಂತರ ಈ ಕುರಿತು ನಾನಾ ರೀತಿಯಲ್ಲಿ ವ್ಯಾಖ್ಯಾನಿಸುವ ಟ್ವೀಟ್‌ಗಳು ಹರಿದಾಡಿವೆ. ಕೆಲವರು, ಭಾರತೀಯ ವಾಯುಪಡೆ ಇನ್ನೊಂದು ಬಾಲಾಕೋಟ್‌ ಮಾದರಿಯ ದಾಳಿ ನಡೆಸುತ್ತಿದೆ ಎಂದು ಹೇಳಿದರೆ, ಇನ್ನು ಕೆಲವರು ಪಾಕಿಸ್ತಾನದ ವಾಯುಪಡೆ ವಿಮಾನಗಳೇ ಕರಾಚಿ ಮೇಲೆ ಹಾರಾಡುತ್ತಿವೆ ಎಂದು ಹೇಳಿದ್ದಾರೆ. ಒಬ್ಬ ಪಾಕಿಸ್ತಾನಿ ಪತ್ರಕರ್ತ, ‘ಭಾರತದ ಯುದ್ಧವಿಮಾನಗಳು ಪಾಕ್‌ ಆಕ್ರಮಿತ ಕಾಶ್ಮೀರದ ಸಿಂಧ್‌-ರಾಜಸ್ಥಾನ ಸೆಕ್ಟರ್‌ಗೆ ನುಗ್ಗಿರುವ ಬಗ್ಗೆ ವದಂತಿಗಳಿವೆ’ ಎಂದು ಹೇಳಿದ್ದಾನೆ.

ಆದರೆ, ಈ ಕುರಿತು ಪಾಕಿಸ್ತಾನದ ಸೇನೆಯಾಗಲೀ ಭಾರತೀಯ ಸೇನೆಯಾಗಲೀ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.