Asianet Suvarna News Asianet Suvarna News

ತೆಂಗಿನ ತದ್ರೂಪು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ!

* ಜಗತ್ತಿನಲ್ಲೇ ಮೊದಲ ಬಾರಿ ಬೆಲ್ಜಿಯಂ ವಿಜ್ಞಾನಿಗಳ ಸಾಧನೆ

* ಹಳದಿ ರೋಗ ಸೇರಿದಂತೆ ತೆಂಗಿನ ಸಮಸ್ಯೆಗಳಿಗೆ ಪರಿಹಾರ?

* ತೆಂಗಿನ ತದ್ರೂಪು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ

Belgian scientists claim breakthrough in cloning coconut trees pod
Author
Bangalore, First Published Oct 11, 2021, 8:54 AM IST
  • Facebook
  • Twitter
  • Whatsapp

ತಿರುವನಂತಪುರಂ(ಅ.11): ಜಗತ್ತಿನಲ್ಲಿ ಮೊದಲ ಬಾರಿ ತೆಂಗಿನ ಮರದ ತದ್ರೂಪು ಸೃಷ್ಟಿಸುವಲ್ಲಿ ಬೆಲ್ಜಿಯಂನ(Belgium) ಜೀವ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕಸಿಯ ಮೂಲಕ ತೆಂಗಿನ ತದ್ರೂಪು(Cloning Coconut) ಸೃಷ್ಟಿಸುವುದು ಹಾಗೂ ವಿವಿಧ ತೆಂಗಿನ ತಳಿಗಳನ್ನು ಸಂರಕ್ಷಿಸಿಡುವ ವಿಧಾನ ಇದಾಗಿದ್ದು, ತೆಂಗಿನ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಅಡಗಿದೆ ಎಂದು ವಿಜ್ಞಾನಿಗಳು(Scientist) ಹೇಳಿಕೊಂಡಿದ್ದಾರೆ.

ಬೆಲ್ಜಿಯಂನ ಕೆ.ಯು.ಲೀವನ್‌(K U Leuven) ವಿಶ್ವವಿದ್ಯಾಲಯದ ವಿಜ್ಞಾನಿಗಳು ತದ್ರೂಪು ಸೃಷ್ಟಿಯ ಮೂಲಕ ತೆಂಗಿನ ಸಸಿಗಳು ಬೇಗ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ತೆಂಗಿನ ವಂಶವಾಹಿ ಗುಣಗಳನ್ನು ದೀರ್ಘಾವಧಿಗೆ ಸಂರಕ್ಷಿಸಿಡುವ ವಿಧಾನವನ್ನೂ ಕಂಡುಹಿಡಿದಿದ್ದು, ಇದರಿಂದ ಭಾರತ ಮುಂತಾದ ದೇಶಗಳಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿರುವ ಹಳದಿ ರೋಗ, ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರುವಿಕೆ ಹಾಗೂ ತೆಂಗಿನ ತೋಟಗಳು ಹಳೆಯದಾಗಿರುವುದು ಮುಂತಾದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತೆಂಗಿನ ಬೀಜವು ಒಂದೇ ಮೊಳಕೆಯೊಡೆದು, ರೆಂಬೆಗಳಿಲ್ಲದೆ ನೇರವಾಗಿ ಬೆಳೆಯುವುದರಿಂದ ಅದರ ತದ್ರೂಪು ಸೃಷ್ಟಿಸಾಧ್ಯವಿರಲಿಲ್ಲ. ಹೊಸ ಕಸಿ ವಿಧಾನದ ಮೂಲಕ ಅದನ್ನು ವಿಜ್ಞಾನಿಗಳು ಈಗ ಮಾಡಿದ್ದಾರೆ. ಇದರಿಂದಾಗಿ ಒಂದೇ ಬೀಜದಿಂದ ಹಲವು ತೆಂಗಿನ ಸಸಿಗಳನ್ನು ತಯಾರಿಸಬಹುದು. ಇದರಿಂದ ರೈತರಿಗೆ ತೆಂಗಿನ ತೋಟ ಮಾಡುವ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಈ ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಯಾವಾಗ ಸಿಗುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿಲ್ಲ.

Follow Us:
Download App:
  • android
  • ios