Asianet Suvarna News Asianet Suvarna News

ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟವರ ಪುತ್ರಿಗೆ ಇದೆಂಥಾ ಗತಿ: ಉಕ್ಕಿನ ಮಹಿಳೆಯ ದುರಂತ ವಿದಾಯ

ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜೀಬರ್ ರೆಹಮಾನ್ ಪುತ್ರಿಯಾಗಿ ರಾಜಕೀಯಕ್ಕೆ ಕಾಲಿಟ್ಟು ಉಕ್ಕಿನ ಮಹಿಳೆ ಎನ್ನಿಸಿಕೊಂಡಿದ್ದ ಹಸೀನಾಗೆ ಈಗ ಸ್ವದೇಶದಲ್ಲೇ ಜೀವಭೀತಿ ಎದುರಾಗಿದ್ದು, ಪರದೇಶದ ಆಶ್ರಯ ಬೇಡುವಂತಾಗಿದ್ದು ಮಾತ್ರ ದುರಂತ

Bangladesh riots tragic farewell of the Bangladesh Iron woman Sheikh Hasina Daughter of Muzbir Rahman akb
Author
First Published Aug 6, 2024, 8:56 AM IST | Last Updated Aug 6, 2024, 8:56 AM IST

ಢಾಕಾ: ಸತತ 4 ಬಾರಿ ಮತ್ತು ಒಟ್ಟು 5 ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಇದೀಗ ದೇಶದ ತೊರೆದು ಪರದೇಶಕ್ಕೆ ಪಾಲಾಯನ ಮಾಡಿದ್ದಾರೆ. ಹಾಗೆ ನೋಡಿದರೆ ಅವಾಮಿ ಲೀಗ್ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿತ್ತು. ಅದರ ನಾಯಕರಾಗಿದ್ದ ಶೇಖ್ ಮುಜೀಬರ್ ರೆಹಮಾನ್, ಬಾಂಗ್ಲಾದ ಸಂಸ್ಥಾಪಕರೆಂದೇ ಗುರುತಿಸಿಕೊಂಡವರು. ಅವರ ಪುತ್ರಿಯಾಗಿ ರಾಜಕೀಯಕ್ಕೆ ಕಾಲಿಟ್ಟು ಉಕ್ಕಿನ ಮಹಿಳೆ ಎನ್ನಿಸಿಕೊಂಡಿದ್ದ ಹಸೀನಾ ಇದೀಗ ಅಸ್ತಿತ್ವದ ಪ್ರಶ್ನೆ ಎದುರಿಸುವ ಸ್ಥಿತಿ ತಲುಪಿದ್ದಾರೆ.

1947ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಜನಿಸಿದ ಹಸೀನಾ ಢಾಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ನಡೆಸುತ್ತಿದ್ದಾಗಲೇ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ತಂದೆ ರೆಹಮಾನ್‌ರನ್ನು ಪಾಕಿಸ್ತಾನ ರಾಜಕೀಯ ಸರ್ಕಾರ ಬಂಧಿಸಿದ ಸಂದರ್ಭದಲ್ಲಿ ಅವರ ರಾಜಕೀಯ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1975ರಲ್ಲಿ ತಂದೆ, ತಾಯಿ ಮತ್ತು ಮೂವರು ಸಹೋದರರನ್ನು ಕಳೆದುಕೊಂಡ ವೇಳೆ ಹಸೀನಾ ಮುಂದಿನ ಆರು ವರ್ಷಗಳ ಕಾಲ ಭಾರತದಲ್ಲಿ ಆಶ್ರಯ ಪಡೆದಿದ್ದರು. 1981ರಲ್ಲಿ ತಾಮ್ನಾಡಿಗೆ ಮರಳಿದ ಹಸೀನಾ, ತಮ್ಮ ತಂದೆ ಸ್ಥಾಪಿಸಿದ್ದ ಅವಾಮಿ ಲೀಗ್‌ನ ನಾಯಕಿಯಾದರು. ಸೇನಾ ಆಡಳಿತದಲ್ಲಿ ನಲುಗುತ್ತಿದ್ದ ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವದ ಪರ ದನಿಯೆತ್ತಿ ಗೃಹ ಬಂಧನಕ್ಕೆ ಒಳಗಾಗಿದ್ದರು.

1991ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಬಿಎನ್‌ಪಿಯ ಖಲೀದಾ ಜಿಯಾರ ವಿರುದ್ಧ ಸೋಲನ್ನು ಅನುಭವಿಸಿದ್ದರು. ಆದರೂ ಹೋರಾಟ ನಿಲ್ಲಿಸದ ಹಸೀನಾ1996 ರಲ್ಲಿ ಬಾಂಗ್ಲಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2004ರಲ್ಲಿ ರ್ಯಾಲಿ ವೇಳೆ ಗ್ರೆನೇಡ್ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾದ ಅವರು 2009ರಲ್ಲಿ ಮತ್ತೆ ಪ್ರಧಾನಿ ಹುದ್ದೆಗೇರಿ ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದರು. ಈ ಅವಧಿಯಲ್ಲಿ  ಬಿಎನ್‌‌ಪಿಯ ಮಿತ್ರ ಪಕ್ಷ ವಾಗಿದ್ದ ಜಮಾತೆ-ಇ-ಇಸ್ಲಾಂ ಅನ್ನು ನಿಷೇಧಿಸಿ ಖಾಲೀದಾ ಜಿಯಾರನ್ನು ಜೈಲಿಗಟ್ಟಿದರು. 

ಬಾಂಗ್ಲಾ ತೊರೆದ ಹಸೀನಾಗೆ ಬ್ರಿಟನ್ ಆಶ್ರಯ
ನವದೆಹಲಿ: ಬಾಂಗ್ಲಾದೇಶ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ನಿರ್ಗಮಿಸಿದ್ದು, ಲಂಡನ್‌ನಲ್ಲಿ ರಾಜಾಶ್ರಯ ಪಡೆಯ ಲಿದ್ದಾರೆ. ಇದಕ್ಕೆ ಪೂರ್ವ ಭಾವಿಯಾಗಿ ಅವರು ಸಿ130ಜೆ ಮಿಲಿಟರಿ ಸರಕು ವಿಮಾನದಲ್ಲಿ ದಿಲ್ಲಿಗೆ ಆಗಮಿಸಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಅವರು ದೇಶದ ಪ್ರಸ್ತುತ ಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದರು. 

ಜನರ ದಂಗೆ ಹಾಗೂ ಸೇನೆಯ ಎಚ್ಚರಿಕೆಗೆ ಬೆಚ್ಚಿದ ಹಸೀನಾ ಸೋಮವಾರ ಮಧ್ಯಾಹ್ನ ಢಾಕಾದಿಂದ ಸೋದರಿ ರೆಹಾನಾ ಜತೆ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದರು. ಮೊದಲು ಅವರು ಭಾರತದ ಅಗರ್ತಲಾದಲ್ಲಿ ಲ್ಯಾಂಡ್ ಆಗಲಿದ್ದಾರೆ ಎಂಬ ಊಹಾಪೋಹ ಹರಡಿತ್ತು. ಆದರೆ ಅವರು ದಿಲ್ಲಿಯ ಭಾರತೀಯ ವಾಯುನೆಲೆ ಹಿಂಡನ್ ಏರ್‌ಬೇಸ್‌ಗೆ ಬಂದಿಳಿದರು. ಅಲ್ಲಿ ತಮ್ಮನ್ನು ಬರಮಾಡಿಕೊಂಡ ಅಜಿತ್ ದೋವಲ್ ಜತೆ ಮಾತುಕತೆ ನಡೆಸಿದರು. ಅಲ್ಲದೆ, ದಿಲ್ಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಆಗಿರುವ ಪುತ್ರಿ ಸೈಮಾ ವಾಜಿರ ಅವರನ್ನೂ ಭೇಟಿಯಾಗಿ ಹಿಂಡನ್ ನಲ್ಲೇ ರಾತ್ರಿ ಕಳೆದಿದ್ದಾರೆ.

ಬಾಂಗಾಕೋರಿಕೆ ಮೇರೆಗೆ ಭಾರತದ ವಾಯುವಲಯದಲ್ಲಿ ಹಸೀನಾ ವಿಮಾನಕ್ಕೆ ಭಾರತ ಸರ್ಕಾರ ಅವಕಾಶ ಕಲ್ಪಿಸಿತ್ತು. ನಂತರ ಅವರು ದಿಲ್ಲಿಯಿಂದ ಲಂಡನ್‌ಗೆ ಹೊರಡುವ ಚಿಂತನೆಯಲ್ಲಿದ್ದಾರೆ. ಹಸೀನಾ ಸೋದರಿ ರೆಹಾನಾ ಬ್ರಿಟನ್ ಪ್ರಜೆಯಾಗಿದ್ದಾರೆ. ಹೀಗಾಗಿ ಹಸೀನಾ ಕೂಡ ಬ್ರಿಟನ್‌ನಲ್ಲೇ ರಾಜಾಶ್ರಯ ಕೋರಿ ಅರ್ಜಿ ಸಲ್ಲಿಸಿದ್ದು, ಸೋದರಿ ಜತೆ ತಂಗುವ ಯೋಚನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹಸೀನಾ ರಾಜಕೀಯ ನಿವೃತ್ತಿ ಘೋಷಿಸಿದ ಪುತ್ರ ಜಾಯ್

ಢಾಕಾ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಪ್ರಧಾನಿ ಶೇಖ್ ಹಸೀನಾ ಇನ್ನೆಂದೂ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಅವರ ಪುತ್ರ ಸಜೀಬ್‌ ವಾಝೇದ್‌ ಜಾಯ್‌ ಘೋಷಿಸಿದ್ದಾರೆ. 'ನನ್ನ ತಾಯಿ 2009ರಲ್ಲಿ ಅಧಿಕಾರ ವಹಿಸಿಕೊಂಡಾಗ ದುಸ್ಥಿತಿಯಲ್ಲಿದ್ದ ಬಡ ದೇಶವನ್ನು ಸುಸ್ಥಿತಿಗೆ ತಂದಿದ್ದಾರೆ. ಇಲ್ಲಿನ ಆರ್ಥಿಕತೆ ಪ್ರತಿ ವರ್ಷ ಶೇ.6ರಷ್ಟು ಬೆಳವಣಿಗೆ ಕಂಡಿದೆ. ಆದರೆ ಈಗ ಅವರ ಕೊಡುಗೆಯನ್ನು ಲೆಕ್ಕಿಸದ ಸಣ್ಣ ಗುಂಪು ತಿರುಗಿ ಬಿದ್ದಿರುವುದು ಆಕೆಗೆ ನಿರಾಶೆಯನ್ನು ಉಂಟು ಮಾಡಿದೆ' ಎಂದು ಜಾಯ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios