Asianet Suvarna News Asianet Suvarna News

ರಾಪರ್ ಈಗ ಪಾಪರ್... ಕಂಡವರ ದುಡ್ಡಲ್ಲಿ ಜಾಲಿ ಮಾಡಿದವನಿಗೀಗ ಜೈಲೇ ಗತಿ

ಆಸ್ಟ್ರೇಲಿಯಾದ ಸಿಡ್ನಿ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಒಮ್ಮಿಂದೊಮ್ಮೆಲೇ ಬರೋಬರಿ  25,000 ಯುರೋ ಅಂದರೆ ಸುಮಾರು 4.33 ಕೋಟಿ ಭಾರತೀಯ ರೂಪಾಯಿಗಳು ಬಂದು ಬಿದ್ದಿದ್ದು, ಆತನಿಗೆ ಬಾಯಿಗೆ ಬಂದು ಲಡ್ಡು ಬಿದ್ದಂತಾಗಿದೆ. 

Australia Man arrested after he spent 4.33 amount which accidentally deposited in his bank account akb
Author
First Published Dec 14, 2022, 10:30 PM IST

ತನ್ನ ಖಾತೆಗೆ ಆಕಸ್ಮಿಕವಾಗಿ ಬಿದ್ದ ಬರೋಬ್ಬರಿ 4.33 ಕೋಟಿ ಹಣವನ್ನು ವೆಚ್ಚ ಮಾಡಿದ ಆರೋಪದ ಮೇಲೆ ಯುವಕನೋರ್ವನನ್ನು ಜೈಲಿಗಟ್ಟಲಾಗಿದೆ. ಒಮ್ಮಿಂದೊಮ್ಮೆಲೇ ನಿಮ್ಮ ಖಾತೆಗೆ ಕೋಟ್ಯಾಂತರ ರೂಪಾಯಿ ಬಂದು ಬಿದ್ದರೆ ಏನು ಮಾಡುತ್ತೀರಿ. ತಕ್ಷಣದ ಮಟ್ಟಿಗಂತೂ ಖುಷಿ ಪಡುವುದು ನಿಜ ನಂತರ ಪ್ರಾಮಾಣಿಕರಾದರೆ, ಪರರ ವಸ್ತು ಪಾಶಾಣಕ್ಕೆ ಸಮ ಎಂದು ಯೋಚಿಸುತ್ತಿದ್ದರೆ ಗಾಬರಿಗೊಂಡು ಬ್ಯಾಂಕ್‌ಗೆ ಹೋಗಿ ವಿಚಾರ ತಿಳಿಸುವಿರಿ. ಆದರೆ ಯಾರದ್ದಾದರೇನು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಜಾಲಿ ಮಾಡುವ ಮನಸ್ಥಿತಿಯಲ್ಲಿದ್ದರೆ ಕುಣಿದು ಕುಪ್ಪಳಿಸಿ ಏನೆಲ್ಲಾ ಬೇಕೋ ಅದನ್ನೆಲ್ಲಾ ಖರೀದಿಸುವಿರಿ ಹೇಗೆಲ್ಲಾ ಈ ಹಣವನ್ನು ವೆಚ್ಚ ಮಾಡಬಹುದು ಎಂದು ಯೋಚಿಸುವುದಂತೂ ಪಕ್ಕ. ಹಾಗೆಯೇ ಆಸ್ಟ್ರೇಲಿಯಾದ ಸಿಡ್ನಿ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಒಮ್ಮಿಂದೊಮ್ಮೆಲೇ ಬರೋಬರಿ  25,000 ಯುರೋ ಅಂದರೆ ಸುಮಾರು 4.33 ಕೋಟಿ ಭಾರತೀಯ ರೂಪಾಯಿಗಳು ಬಂದು ಬಿದ್ದಿದ್ದು, ಆತನಿಗೆ ಬಾಯಿಗೆ ಬಂದು ಲಡ್ಡು ಬಿದ್ದಂತಾಗಿದೆ. 


ಆಸ್ಟ್ರೇಲಿಯಾದ (Australia) ಪಶ್ಚಿಮ ಸಿಡ್ನಿ ನಿವಾಸಿಯಾದ ರಾಪರ್ (rapper ) ಅಬ್ದುಲ್ ಘಡಿಯಾ (Abdel Ghadia) ಎಂಬುವವರೇ ಹೀಗೆ ಲಾಟರಿ ಹೊಡೆಸಿಕೊಂಡು ಆಮೇಲೆ ಸಂಕಷ್ಟಕ್ಕೀಡಾದ ನತದೃಷ್ಟ. ಅಂದಹಾಗೆ ಈತನ ಖಾತೆಗೆ ಆಕಸ್ಮಿಕವಾಗಿ ಬಿದ್ದ ಹಣ ದಂಪತಿಗಳದ್ದಾಗಿದ್ದು, ಅವರು ಖಾತೆಗೆ ಹಣ ವರ್ಗಾವಣೆ ಮಾಡುವಾಗ ಖಾತೆ ಸಂಖ್ಯೆಯನ್ನು ತಪ್ಪಾಗಿ ಹಾಕಿದ್ದರಿಂದ ಅದು 24 ವರ್ಷದ ರಾಪರ್ ಖಾತೆಗೆ ಬಂದು ಬಿದ್ದಿತ್ತು. ಈತ ಹೀಗೆ ಆಕಸ್ಮಿಕವಾಗಿ ಬಿದ್ದ ಹಣವನ್ನು ಬಿಂದಾಸ್ ಆಗಿ ವೆಚ್ಚ ಮಾಡಿದ್ದಾನೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಈತ ಚಿನ್ನದ ಗಟ್ಟಿ (gold bullion) ಖರೀದಿಸಿದ್ದು, ಉಳಿದ ಹಣವನ್ನು ಮೇಕಪ್‌ಗೆ ಡಿಸೈನರ್‌ ಬಟ್ಟೆಗಳಿಗೆ ವೆಚ್ಚ ಮಾಡಿದ್ದಾನೆ. 

ಹಣ ತಪ್ಪಾಗಿ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆ ಆಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ

ಘಟನೆಗೆ ಸಂಬಂಧಿಸಿದಂತೆ ಸಿಡ್ನಿ ಪೊಲೀಸರು ಆತನನ್ನು ಬಂಧಿಸಿ ಸಿಡ್ನಿಯ ಬರ್ವುಡ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಲ್ಲಿ ಖಾತೆಗೆ ಬಂದ ಹಣವನ್ನು ವೆಚ್ಚ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಪ್ರಾರಂಭದಲ್ಲಿ ಹಣ ವೆಚ್ಚ ಮಾಡಿದನ್ನು ಆತ ನಿರಾಕರಿಸಿದ್ದ, ಆದರೆ ನಂತರ ದಾಖಲೆಗಳಲ್ಲಿ ಅದು ಸಾಬೀತಾದಾಗ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಈತನ ಖಾತೆಗೆ ಹಣ ಹಾಕಿದ ದಂಪತಿ ಮನೆಯೊಂದನ್ನು ಖರೀದಿಸುವ ಸಲುವಾಗಿ ಕಾಮನ್‌ವೆಲ್ತ್ ಬ್ಯಾಂಕ್ ಖಾತೆಗೆ (Commonwealth Bank account) ಹಣ ಹಾಕುವ ವೇಳೆ ಅದು ತಪ್ಪಾಗಿ ಈತನ ಖಾತೆಗೆ ಬಂದು ಬಿದ್ದಿತ್ತು.

ಮೊದಲಿಗೆ ತಮ್ಮ ಇಷ್ಟು ಮೊತ್ತದ ಹಣ ಎಲ್ಲಿ ಹೋಯಿತು ಎಂದು ತಿಳಿಯದೇ ದಂಪತಿ ಕಂಗಾಲಾಗಿದ್ದರು. ಆದರೆ ನಂತರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಅದು ಗಡಿಯಾ ಖಾತೆಗೆ ಬಂದು ಬಿದ್ದಿದೆ ಎಂಬುದರ ಅರಿವಾಗಿದೆ. ಆದರೆ ಆತ ಮಾತ್ರ ತಾನು ಹಣ ವೆಚ್ಚ ಮಾಡಿಲ್ಲ ಎಂದು ಹೇಳಿದ್ದ ನಂತರ ಪೊಲೀಸರು ಬಂಧಿಸಿ ರುಬ್ಬಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಬೆಳಗ್ಗೆದು ನೋಡಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಇಷ್ಟೊಂದು ಮೌಲ್ಯದ ಹಣ ನೋಡಿ ಅಚ್ಚರಿಪಟ್ಟೆ. ಅಲ್ಲದೇ ಅದನ್ನು ವೆಚ್ಚ ಮಾಡಿದೆ. ಅದು ಎಲ್ಲಿಂದ ಬಂತು ಎಂದು ವಿಚಾರಿಸುವ ಗೋಜಿಗೆ ಹೋಗಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. 

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗೆ ಇಂದಿನಿಂದ ಹೊಸ ಸುರಕ್ಷತೆ: Tokenization ವ್ಯವಸ್ಥೆ ಬಗ್ಗೆ ಇಲ್ಲಿದೆ ಮಾಹಿತಿ..

ಈ ಘಟನೆಗೆ ಸಂಬಂಧಿಸಿದಂತೆ ಈಗ ನ್ಯಾಯಾಲಯ ಆತನಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 10 ತಿಂಗಳ ಅವಧಿಯಲ್ಲಿ ಪೆರೋಲ್ ಮೇಲೆಯೂ ತೆರಳುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. ಒಟ್ಟಿನಲ್ಲಿ ಈತನ ಮುಂದೆ ಸ್ವರ್ಗ ರಫ್ ಅಂತ ಪಾಸಾದಂತಾಗಿದ್ದು, ನಂತರ ನರಕದ ಬಾಗಿಲು ತೆರೆದಿದೆ. ಮತ್ತೆ ಪರರ ವಸ್ತು ಪಾಶಾಣಕ್ಕೆ ಸಮ ಅಂತ ಹಿರಿಯರು ಸುಮ್ನೆ ಹೇಳ್ತಾರಾ ಅಲ್ವಾ? 
 

Follow Us:
Download App:
  • android
  • ios