ಅಶೋಕನಗರದ ಕಾಲೋನಿಯಲ್ಲಿ 2 ಬೆಡ್ ರೂಂನ ಸಣ್ಣ ಮನೆ. ಮಧ್ಯಮ ಕುಟುಂಬದ ಇಕ್ಕಟ್ಟಿನ ಮನೆ. ಇಲ್ಲಿಂದ ಆರಂಭಗೊಂಡ ಪಯಣ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬರೋಬ್ಬರಿ 31 ಎಕರೆ ಪ್ರದೇಶದಲ್ಲಿ ಅತೀ ದೊಡ್ಡ ಬಂಗಲೆ ಮನೆಯ ವರೆಗೆ ಭಾರತೀಯನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಲವು ಭಾರತೀಯರು ಕಡು ಬಡತನದ ಮೂಲಕ ಬೆಳೆದು ಬಂದು ವಿದೇಶಗಳಲ್ಲಿ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ, ಪ್ರತಿಷ್ಠಿತ ಕಂಪನಿಗಳ ಸಿಇಒಗಳಾದಿ ವಿಶ್ವದ ಗಮನಸೆಳೆದಿದ್ದಾರೆ. ಹೀಗೆ ಭಾರತದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, 2 ಬೆಡ್ ರೂಂ ಸಣ್ಣ ಮನೆಯಲ್ಲಿ ಬೆಳೆದು ನೇರವಾಗಿ ಅಮೆರಿಕದಲ್ಲಿ ಉದ್ಯೋಗ ಗಿಟಿಸಿಕೊಂಡು ಇದೀಗ ವಿಶ್ವವನ್ನೇ ತನ್ನ ಕೈಯಲ್ಲಿಟ್ಟುಕೊಂಡಿರುವ ಭಾರತದ ಹೆಮ್ಮೆಯ ಸಾಧಕ, ಗೂಗಲ್ ಸಿಇಒ ಸುಂದರ್ ಪಿಚೈ ಮನೆಯ ರೋಚಕ ಕತೆ ಇಲ್ಲಿದೆ.

ಅಶೋಕನಗರದ ಸಣ್ಣ ಮನೆಯಿಂದ ಪಯಣ ಆರಂಭ

ಗೂಗಲ್ ಸಿಇಒ ಸುಂದರ್ ಪಿಚೈ, ಹುಟ್ಟಿ ಬೆಳೆದಿದ್ದು ಚೆನ್ನೈನ ಅಶೋಕನಗರದಲ್ಲಿ. ಸಣ್ಣ 2 ಬೆಡ್ ರೂಂ ಮನೆಯಲ್ಲಿ ಹುಟ್ಟಿದ ಬೆಳೆದ ಸುಂದರ್ ಪಿಚೈ ಜರ್ನಿ ಕುರಿತು ಹಲವು ವರದಿಗಳಿವೆ. ಹಲವು ಬಾರಿ ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡಿದೆ. ಸಣ್ಣ ಮನೆಯಿಂದ ಅಮೆರಿಕದ ಪ್ರತಿಷ್ಠಿತ ಏರಿಯಾದಲ್ಲಿ ಬರೋಬ್ಬರಿ 31 ಎಕರೆಯಲ್ಲಿ ಹರಡಿಕೊಂಡಿರುವ ಭವ್ಯ ಬಂಗಲೆಯಲ್ಲಿರುವ ಪಿಚೈ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿದೆ.

10 ಸಾವಿರ ಚದರ ಅಡಿ ವಿಸ್ತೀರ್ಣದ ಮನೆ

ಕ್ಯಾಲಿಫೋರ್ನಿಯಾದ ಲಾಸ್ ಅಲ್ಟೋಸ್ ಹಿಲ್ಸ್‌ನಲ್ಲಿ ಸುಂದರ್ ಪಿಚೈ ಮನೆಯಿದೆ. ಇದು ಅತ್ಯಂತ ದುಬಾರಿ ಹಾಗೂ ಐಷಾರಾಮಿ ಮನೆ ಮಾತ್ರವಲ್ಲ, ಏರಿಯಾ ಕೂಡ ಅತ್ಯಂತ ದುಬಾರಿ ಹಾಗೂ ರೆಸಿಡೆನ್ಶಿಯಲ್. ಅತೀ ದೊಡ್ಡ ಬಂಗಲೆ ರೀತಿಯಲ್ಲಿರುವವ ಈ ಮನೆ 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಮರದ ಕೆತ್ತನೆ, ಸೀಲಿಂಗ್, ಗ್ಲಾಸ್ ಸೇರಿದಂತೆ ಹಲವು ರೀತಿಯಲ್ಲಿ ಸುಂದರ್ ಪಿಚೈ ಮನೆ ಅತ್ಯಂತ ಆಕರ್ಷಕವಾಗಿದೆ.

ಬೆಟ್ಟದ ತುದಿಯಲ್ಲಿದೆ ಪಿಚೈ ಮನೆ

ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಅನ್ನೋ ಬೆಟ್ಟದ ತುದಿಯಲ್ಲಿ ಸುಂದರ್ ಪಿಚೈ ಮನೆ ಇದೆ. ಒಟ್ಟು 31 ಎಕರೆ ಎಸ್ಟೇಟ್‌ನಲ್ಲಿ ಪಿಚೈ ಮನೆ ಕಟ್ಟಿಕೊಂಡಿದ್ದಾರೆ. ಸ್ವಾಟ್ ಮೈಯರ್ಸ್ ಆರ್ಕಿಟೆಕ್ಟ್ಸ್ ಸಂಸ್ಥೆ ಈ ಮನೆ ನಿರ್ಮಿಸಿದೆ. ವಿಶೇಷ ಅಂದರೆ ಸುಂದರ್ ಪಿಚೈ ಮನೆ ಹಲವು ಅತ್ಯಾಧುನಿಕ ತಂತ್ರಜ್ಞಾನ, ಹಲವು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ.

ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಜಿಮ್ ಹಾಗೂ ಅಪರೂಪದ ವೈನ್‌ಗಳನ್ನು ಸಂಗ್ರಹಿಸಿಡುವ ವೈನ್ ಸೆಲ್ಲರ್, ಟೆನ್ನಿಸ್ ಕೋರ್ಟ್, ಮಿನಿಯೇಚರ್ ಗಾಲ್ಫ್ ಕೋರ್ಸ್ ಸೇರಿದಂತೆ ಸುಂದರ ಗಾರ್ಡನ್, ಕೊಳಗಳು, ಹೂವಿನ ತೋಟಗಳಿಂದ ಮನೆ ಕಂಗೊಳಿಸುತ್ತಿದೆ. ಅಂಡರ್ ಗ್ರೌಂಡ್ ವ್ಯವಸ್ಥೆಯೂ ಹೊಂದಿದೆ. ಇದೇ ವೇಳೆ, ಕೆಲಸಗಾರರು, ಕೇರ್ ಟೇಕರ್ ಸೇರಿದಂತೆ ಸಿಬ್ಬಂದಿಗಳಿಗೆ ಕೊಠಡಿಗಳ ವ್ಯವಸ್ಥೆಗಳನ್ನು ಮಾಡಲಾಗಿದೆ. ಮನೆ ಸಂಪೂರ್ಣ ಸೋಲಾರ್ ವ್ಯವಸ್ಥೆಯನ್ನೂ ಹೊಂದಿದೆ.