ಮಾಸ್ಕೋ(ನ.6): ಹಿಂದಿನ ಸೋವಿಯತ್‌ ಒಕ್ಕೂಟದ ದೇಶಗಳಲ್ಲಿ ಒಂದಾದ ಅರ್ಮೇನಿಯಾದ ಗಡಿ ಭಾಗದಲ್ಲಿರುವ ಕೆಲ ಹಳ್ಳಿಗಳ ಜನರು ತಮ್ಮ ಮನೆಗಳಿಗೆ ತಾವೇ ಬೆಂಕಿ ಹಚ್ಚಿರುವ ವಿಚಿತ್ರ ವಿದ್ಯಮಾನ ನಡೆದಿದೆ. ಇತ್ತೀಚೆಗೆ ಏರ್ಪಟ್ಟಒಪ್ಪಂದದಲ್ಲಿ ಈ ಹಳ್ಳಿಗಳನ್ನು ಅಜರ್‌ಬೈಜನ್‌ ದೇಶಕ್ಕೆ ಬಿಟ್ಟುಕೊಡಬೇಕು ಎಂದು ನಿರ್ಧಾರವಾದ ಹಿನ್ನೆಲೆಯಲ್ಲಿ ತಮ್ಮ ಮನೆಗಳನ್ನು ಪುಕ್ಕಟೆಯಾಗಿ ಇನ್ನೊಂದು ದೇಶಕ್ಕೆ ಏಕೆ ಬಿಟ್ಟುಕೊಡಬೇಕೆಂದು ಮಾಲಿಕರು ದೇಶ ಬಿಡುವ ಮುನ್ನ ಮನೆಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ.

1990ರ ದಶಕದಲ್ಲಿ ಸೋವಿಯತ್‌ ಒಕ್ಕೂಟ ಛಿದ್ರವಾದ ನಂತರ ಅದರಲ್ಲಿನ ಎರಡು ದೇಶಗಳಾದ ಅರ್ಮೇನಿಯಾ ಮತ್ತು ಅಜರ್‌ಬೈಜನ್‌ ನಡುವೆ ನಿರಂತರವಾಗಿ ಗಡಿ ಸಮರ ನಡೆಯುತ್ತಿತ್ತು. ಕಳೆದ ಆರು ವಾರಗಳಿಂದ ಅದು ತೀವ್ರಗೊಂಡು, ಕೊನೆಗೆ ರಷ್ಯಾ, ಫ್ರಾನ್ಸ್‌, ಅಮೆರಿಕ ಮುಂತಾದ ದೇಶಗಳ ಮಧ್ಯಸ್ಥಿಕೆಯಲ್ಲಿ ಅರ್ಮೇನಿಯಾದ ಕೆಲ ಹಳ್ಳಿಗಳನ್ನು ಅಜರ್‌ಬೈಜನ್‌ಗೆ ಬಿಟ್ಟುಕೊಡಬೇಕೆಂದು ನಿರ್ಧಾರವಾಗಿದೆ. ಆ ಹಳ್ಳಿಗಳ ಜನರು ತಮ್ಮ ಮನೆ ತೊರೆದು ಅರ್ಮೇನಿಯಾದ ಕಡೆಗೆ ತೆರಳಲು ಮೊನ್ನೆಯ ಶನಿವಾರದ ಗಡುವು ನೀಡಲಾಗಿತ್ತು. ಹೀಗಾಗಿ ಮನೆ ತೊರೆದು ಹೋಗುವ ಮುನ್ನ ನೂರಾರು ಗ್ರಾಮಸ್ಥರು ಅಜರ್‌ಬೈಜನ್ನರ ಮೇಲಿನ ದ್ವೇಷದಿಂದ ತಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮೂಲತಃ ಈ ಹಳ್ಳಿಗಳು ಅಜರ್‌ಬೈಜನ್‌ನವೇ ಆಗಿದ್ದು, ದಶಕಗಳಿಂದ ಅರ್ಮೇನಿಯಾದ ಪ್ರತ್ಯೇಕತಾವಾದಿಗಳು ಇವುಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದವು ಎಂದು ಹೇಳಲಾಗುತ್ತದೆ.