ಬರೋಬ್ಬರಿ 2000 ವರ್ಷ ಹಳೇ ಭಾರತದ ಚಿನ್ನದ ಉಂಗುರ ಥೈಲ್ಯಾಂಡ್‌ನ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ. ಈ ಉಂಗುರದ ಮೇಲಿದ್ದ ಬ್ರಾಹ್ಮಿ ಲಿಪಿಯಲ್ಲಿನ ಬರಹ ಹಾಗೂ ಇತಿಹಾಸವನ್ನು ಪುರಾತತ್ವ ಇಲಾಖೆ ಬಯಲು ಮಾಡಿದೆ

ಥೈಲ್ಯಾಂಡ್ (ಜು.06) ಭಾರತ ಶತಶತಮಾನಗಳ ಹಿಂದೆ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು ಅನ್ನೋದರ ಕುರುಹು ಈಗಲೂ ಸಿಗುತ್ತಿದೆ. ಭಾರತದ ರಾಜ ಮಹಾರಾಜರ ಸಾಮ್ರಾಜ್ಯ ಅತ್ಯಂತ ವಿಸ್ತಾರಗೊಂಡಿತ್ತು. ಥೈಲ್ಯಾಂಡ್ ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳು ಅಂದು ಭಾರತರ ರಾಜರ ಆಳ್ವಿಕೆಯಲ್ಲಿತ್ತು. ಇದೀಗ ಬರೋಬ್ಬರಿ 2000 ವರ್ಷಗಳ ಹಳೇ ಸಾಂಸ್ಕೃತಿಕ ಹಾಗೂ ವಾಣಿಜ್ಯ ಸಂಬಂಧ ಇತಿಹಾಸದ ಕುರುಹು ಥೈಲ್ಯಾಂಡ್‌ನಲ್ಲಿ ಪತ್ತೆಯಾಗಿದೆ. ಭಾರತದ ಚಿನ್ನದ ಉಂಗುರವೊಂದು ಧೈಲ್ಯಾಂಡ್ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ. ಈ ಉಂಗುರದ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಕ್ಷರಗಳಿವೆ. ಈ ಲಿಪಿಯ ರಹಸ್ಯವನ್ನು ಪುರಾತತ್ವ ಇಲಾಖೆ ಬಹಿರಂಗಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುಸರಖಿತಸ ಸೀಕ್ರೆಟ್

ಥೈಲ್ಯಾಂಡ್‌ನ ಲಲಿತ ಕಲಾ ಇಲಾಖೆ ಪತ್ತೆಯಾದ ಉಂಗುರದ ಕುರಿತು ಸಂಶೋಧನೆ ನಡೆಸಿದೆ. ಇದು ಭಾರತದ ಉಂಗುರ ಅನ್ನೋದು ಖಚಿತಪಡಿಸಿದೆ. ಬ್ರಾಹ್ಮಿ ಲಿಪಿಯಲ್ಲಿ "ಪುಸರಖಿತಸ" ಎಂಬ ಅಕ್ಷರಗಳನ್ನು ಕೆತ್ತಲಾಗಿದೆ. ಈ ಪದಗಳನ್ನು ಜೋಡಿಸಿ ಸಂಸ್ಕೃತ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಪುಷ್ಯ ನಕ್ಷತ್ರದಿಂದ ರಕ್ಷಿಸಲ್ಪಟ್ಟವನು ಎಂದಾಗಿದೆ.ಅಂದರೆ ಪವಿತ್ರ ಹಾಗೂ ಶುಭಮಂಗಳ ಪುಷ್ಯ ನಕ್ಷತ್ರ ಉಲ್ಲೇಖ ಥೈಲ್ಯಾಂಡ್‌ನಲ್ಲಿ ಪತ್ತೆಯಾದ ಉಂಗುರದಲ್ಲಿದೆ.

ಎರಡು ಚಿನ್ನದ ಉಂಗುರ ಪತ್ತೆ

ಸಂಶೋಧನೆ ವೇಳೆ ಎರಡು ಚಿನ್ನದ ಉಂಗುರಗಳು ಪತ್ತೆಯಾಗಿದೆ. ಒಂದರಲ್ಲಿ ಮಾತ್ರ ಬ್ರಾಹ್ಮಿ ಲಿಪಿಯ ಕೆತ್ತನೆ ಇದೆ. ಮತ್ತೊಂದರಲ್ಲಿ ಯಾವುದೇ ಕೆತ್ತನೇ ಇಲ್ಲ. ಚಿನ್ನದ ಉಂಗುರ ಜೊತೆ ಮಾನವನ ಪ್ರಾಚೀನ ಕಾಲದ ಅಸ್ಥಿಪಂಜರಗಳು ಪತ್ತೆಯಾಗಿದೆ. ಬ್ರಾಹ್ಮಿ ಲಿಪಿ ಹಾಗೂ ಸಮಾಧಿ ಶೈಲಿಯನ್ನು ಆಧರಿಸಿ ಇದು ಭಾರತದ ಪ್ರಾಚೀನ ವರ್ತಕರ ಸಮುದಾಯಕ್ಕೆ ಸೇರಿದ ಶ್ರೀಮಂತ ವ್ಯಾಪಾರಿಯ ಉಂಗುರವಾಗಿರಬಹುದು ಎಂದಿದ್ದಾರೆ. ಭಾರತ ಹಾಗೂ ಥೈಲ್ಯಾಂಡ್ ನಡುವೆ ಸಮುದ್ರ ವ್ಯಾಪಾರ ನಡೆಸುವ ಸಂದರ್ಭದಲ್ಲಿ ವರ್ತಕ ಕುಟುಂಬ ಸಮಾಧಿ ಮಾಡಿರುವ ಸಾಧ್ಯತೆ ಇದೆ. ಸಮಾಧಿ ವೇಳೆ ಅವರ ಪ್ರಿಯ ವಸ್ತುಗಳನ್ನು ಸಮಾಧಿ ಮಾಡುವ ಪದ್ಥತಿ ಈಗಲೂ ಹಲವೆಡೆ ಇದೆ.

ಬ್ಯಾಂಕಾಕ್‌ನಿಂದ 130 ಕಿಲೋಮೀಟರ್ ದೂರದ ಡಾನ್‌ಯಾಯಿ ಥಾಂಗ್ ಪ್ರದೇಶದಲ್ಲಿ ಈ ಚಿನ್ನದ ಉಂಗುರ ಪತ್ತೆಯಾಗಿದೆ. ರೈತನೊಬ್ಬ ತನ್ನ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಸಜ್ಜುಗೊಳಿಸುವಾಗ ಪರಂಪರೆ ಕುರುಹುಗಳ ಪತ್ತೆಯಾಗಿದೆ. ಹೀಗಾಗಿ ರೈತ ನೇರವಾಗಿ ಥೈಲ್ಯಾಂಡ್ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದ. ಹೀಗಾಗಿ ಸಂಶೋಧಕರು ಉಲ್ಲಿ ಉತ್ಖನನ ಮಾಡುತ್ತಿದ್ದಾರೆ. ಇತಿಹಾಸದ ಹಲವು ಕುರುಹುಗಳು ಪತ್ತೆಯಾಗಿದೆ. ಈ ಪೈಕಿ ಭಾರತ ಹಾಗೂ ಥೈಲ್ಯಾಂಡ್ ನಡುವಿನ ಸಂಬಂಧ, ಇತಿಹಾಸಗಳ ಕರುಹುಗಳೇ ಹೆಚ್ಚಾಗಿದೆ.

ಸದ್ಯ ಉತ್ಖನನ ನಡೆಸುತ್ತಿರುವ ಪ್ರದೇಶ ಥೈಲ್ಯಾಂಡ್‌ ಇತಿಹಾಸದಲ್ಲಿ ಕಬ್ಬಿಣದ ಪ್ರಾಂತ್ಯವಾಗಿ ಹೆಸರುವಾಸಿಯಾಗಿತ್ತು. ರಾಜ ಮಹಾರಾಜರು ಇಲ್ಲಿಂದ ಕಬ್ಬಿಣದ ವಿವಿಧ ಹಲವು ಸಲಕರಣೆಗಳ ಖರೀದಿ ನಡೆಯುತ್ತಿತ್ತು ಎಂಬ ಇತಿಹಾಸವಿದೆ.