ಭಾರತಕ್ಕೆ ಅಮೆರಿಕ, ಬ್ರಿಟನ್‌ ರೆಡ್‌ ಅಲರ್ಟ್‌| ಕೋವಿಡ್‌ ಹೆಚ್ಚಾಗಿದೆ, ಭಾರತಕ್ಕೆ ಹೋಗಲೇಬೇಡಿ: ಅಮೆರಿಕ| ಭಾರತದಿಂದ ಬರುವವರಿಗೆ ಸಂಪೂರ್ಣ ನಿಷೇಧ: ಬ್ರಿಟನ್‌

ನ್ಯೂಯಾರ್ಕ್/ಲಂಡನ್(ಏ.21)‌: ಕೊರೋನಾ 2ನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ ದಿನೇದಿನೇ ದಾಖಲೆ ಪ್ರಮಾಣದ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಪ್ರಜೆಗಳಿಗೆ ಅಮೆರಿಕ ಹಾಗೂ ಬ್ರಿಟನ್‌ ಸರ್ಕಾರಗಳು ಕಟ್ಟುನಿಟ್ಟಿನ ಎಚ್ಚರಿಕೆ ಸಾರಿವೆ. ಪೂರ್ಣ ಪ್ರಮಾಣದ ಕೊರೋನಾ ಲಸಿಕೆಯನ್ನು ಈಗಾಗಲೇ ಪಡೆದಿದ್ದರೂ ಭಾರತಕ್ಕೆ ಹೋಗಬೇಡಿ. ಒಂದು ವೇಳೆ ಭೇಟಿ ಅನಿವಾರ್ಯವಾದರೆ ಲಸಿಕೆಯ ಎಲ್ಲ ಡೋಸ್‌ ಪಡೆದುಕೊಂಡೇ ಹೋಗಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ತಾಕೀತು ಮಾಡಿದೆ. ಅಲ್ಲದೆ ಭಾರತವನ್ನು ‘ಲೆವೆಲ್‌ 4’ ವಿಭಾಗಕ್ಕೆ ಸೇರಿಸಿದೆ. ತನ್ಮೂಲಕ ಅತಿಹೆಚ್ಚು ಕೊರೋನಾದಿಂದ ಬಾಧಿತವಾಗಿರುವ ದೇಶ ಎಂದು ಪರಿಗಣಿಸಿದೆ.

ಮತ್ತೊಂದೆಡೆ, ಭಾರತವನ್ನು ಬ್ರಿಟನ್‌ ‘ಕೆಂಪು ಪಟ್ಟಿ’ಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಬ್ರಿಟನ್‌ ಪ್ರಜೆಗಳನ್ನು ಹೊರತುಪಡಿಸಿ ಬೇರೆಯವರು ಬ್ರಿಟನ್‌ಗೆ ಪ್ರಯಾಣ ಬೆಳೆಸುವಂತಿಲ್ಲ. ಬ್ರಿಟನ್‌ ನಿವಾಸಿಗಳು ಭಾರತದಿಂದ ಹೋದರೆ, 10 ದಿನ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ.

ಅಮೆರಿಕ ಅಲರ್ಟ್‌:

ಭಾರತದಲ್ಲಿರುವ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಈಗಾಗಲೇ ಕೊರೋನಾ ಲಸಿಕೆ ಪಡೆದಿರುವವರಿಗೂ ಕೋವಿಡ್‌ ಬರುವ ಹಾಗೂ ಅವರಿಂದ ಪ್ರಸರಣವಾಗುವ ಅಪಾಯವಿದೆ. ಹೀಗಾಗಿ ಭಾರತ ಭೇಟಿಯನ್ನು ತಪ್ಪಿಸಿ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಸೂಚನೆ ನೀಡಿದೆ. ಒಂದು ವೇಳೆ, ಭಾರತಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಲ್ಲಿ, ಪ್ರಯಾಣಕ್ಕೂ ಮುನ್ನ ಎಲ್ಲ ಲಸಿಕೆಯನ್ನು ಪಡೆದುಕೊಳ್ಳಿ. ಅಲ್ಲಿಗೆ ಹೋದ ಮೇಲೆ ಮಾಸ್ಕ್‌ ಧರಿಸಿರಿ. ಇತರರಿಂದ 6 ಅಡಿ ಅಂತರ ಕಾಪಾಡಿಕೊಳ್ಳಿ. ಜನದಟ್ಟಣೆ ಪ್ರದೇಶದಿಂದ ದೂರವಿರಿ. ಕೈಗಳನ್ನು ತೊಳೆದುಕೊಳ್ಳಿ ಎಂದು ಸಲಹೆ ಮಾಡಿದೆ.

ಬ್ರಿಟನ್‌ ಕೆಂಪು ಪಟ್ಟಿಗೆ ಭಾರತ:

ಮತ್ತೊಂದೆಡೆ, ಬ್ರಿಟನ್‌ ಸಂಸತ್ತಿನ ಕೆಳಮನೆ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಮಾತನಾಡಿದ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಅವರು, ಬ್ರಿಟನ್‌ ಅಥವಾ ಐರ್ಲೆಂಡ್‌ ಪ್ರಜೆ ಅಲ್ಲದವರು 10 ದಿನಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಅವರಿಗೆ ಬ್ರಿಟನ್‌ಗೆ ಪ್ರವೇಶವಿರುವುದಿಲ್ಲ ಎಂದು ಘೋಷಿಸಿದರು.

ಬ್ರಿಟನ್‌ನಲ್ಲಿ ಈಗಾಗಲೇ ಭಾರತ ರೂಪಾಂತರಿ ವೈರಸ್‌ನ 103 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇವೆಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದ್ದಾಗಿವೆ. ಭಾರತ ರೂಪಾಂತರಿ ವೈರಸ್‌ ಹೆಚ್ಚು ಪ್ರಸರಣ ಅಥವಾ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆಯೇ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಲಾಗಿದೆ ಎಂದು ಸಂಸದರಿಗೆ ತಿಳಿಸಿದರು.