ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲಿ ಭಾರತದ ಮೇಲೆಯೂ ಪ್ರತಿ ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಭಾರತ ನಮ್ಮ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದ ನಿಧಿ ದುರ್ಬಳಕೆಯ ಬಗ್ಗೆ ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್: ಈಗಾಗಲೇ ಕೆನಡಾ, ಮೆಕ್ಸಿಕೋದಂತಹ ದೇಶಗಳ ಮೇಲೆ ತೆರಿಗೆ ಪ್ರಹಾರ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಶೀಘ್ರದಲ್ಲಿ ಭಾರತದ ಹಾಗೂ ಚೀನಾದ ಮೇಲೆಯೂ ಪ್ರತಿ ತೆರಿಗೆ ಹೇರುತ್ತೇವೆ’ ಎಂದು ಘೋಷಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತ ನಮ್ಮ ವಸ್ತುಗಳ ಮೇಲೆ ಭಾರಿ ತೆರಿಗೆ ಹೇರುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಅಂತೆಯೇ ಮಾಡುತ್ತೇವೆ. ಇಷ್ಟರವರೆಗೆ ನಾವು ಹಾಗೆ ಮಾಡಿರಲಿಲ್ಲ. ಆದರೆ ಈಗ ಅದರ ತಯಾರಿ ನಡೆಸಿದ್ದೇವೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗಲೂ ಹೇಳಿದ್ದೆ’ ಎಂದರು. ಇದೇ ವೇಳೆ ಚೀನಾದ ಮೇಲೆಯೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದರು.
ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್, ‘ನಮ್ಮ ಮೇಲೆ ಅತಿ ಹೆಚ್ಚು ತೆರಿಗೆ ಹೇರುತ್ತಿರುವ ದೇಶ ಭಾರತ. ಅದು ನಮ್ಮ ಪ್ರತಿತೆರಿಗೆಯಿಂದ ಬಚಾವಾಗಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಯಾರೂ ನನ್ನೊಂದಿಗೆ ವಾದಿಸಲಾರರು’ ಎಂದಿದ್ದರು.\
ಇದನ್ನೂ ಓದಿ: ಚುನಾವಣೆಯಲ್ಲಿ ಮೋದಿ ಸೋಲಿಸಲು ಭಾರತಕ್ಕೆ ಬೈಡನ್ ನೀಡಿದ್ದು ಕಿಕ್ ಬ್ಯಾಕ್; ಟ್ರಂಪ್ ಬಾಂಬ್!
ಅಮೆರಿಕ ನಿಧಿ ದುರ್ಬಳಕೆ : ಜೈಶಂಕರ್ ಕಳವಳ
ನವದೆಹಲಿ: ಭಾರತದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಭಾರತಕ್ಕೆ ಅಮೆರಿಕದಿಂದ ಲಕ್ಷಾಂತರ ಡಾಲರ್‌ಗಳನ್ನು ರವಾನಿಸಲಾಗಿದೆ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಮಾಹಿತಿಯ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.ಸಮಾರಂಭವೊಂದರಲ್ಲಿ ಶನಿವಾರ ಮಾತನಾಡಿದ ಅವರು, ‘ಟ್ರಂಪ್ ಆಡಳಿತದ ಅಧಿಕಾರಿಗಳು ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆಂದು ನಾನು ಭಾವಿಸುತ್ತೇನೆ ಮತ್ತು ಅದು ಕಳವಳಕಾರಿಯಾಗಿದೆ. ಅಮೆರಿಕ ನೀಡಿದ 180 ಕೋಟಿ ರು. ನಿಧಿಯನ್ನು ಭಾರತದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ಬಳಸಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು. ಅಮೆರಿಕ ಮಾಡಿದ ಆರೋಪಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸತ್ಯಗಳು ಹೊರಬರುತ್ತವೆ ಎಂಬುದು ನನ್ನ ಭಾವನೆ’ ಎಂದೂ ಜೈಶಂಕರ್ ನುಡಿದರು.
ಭಾರತಕ್ಕೆ ಅಮೆರಿಕ ಹಣ ನೀಡಿಲ್ಲ:
ಬಾಂಗ್ಲಾದೇಶ ಹಾಗೂ ಭಾರತಕ್ಕೆ ಅಮೆರಿಕ ಪ್ರತ್ಯೇಕ ಚುನಾವಣಾ ನಿಧಿ ನೀಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ಹೊರತಾಗ್ಯೂ ಅಮೆರಿಕದ ವಾಷಿಂಗ್ಟನ್ ಪೋಸ್ಟ್, ಅಮೆರಿಕದಿಂದ ಬಾಂಗ್ಲಾದೇಶಕ್ಕೆ ಹಣ ಹೋಗಿದೆಯೇ ವಿನಾ ಭಾರತಕ್ಕಲ್ಲ ಎಂದು ವರದಿ ಮಾಡಿದೆ. ಈ ಮೂಲಕ 2008 ರಿಂದ ಭಾರತವು ಯಾವುದೇ ಚುನಾವಣೆಗೆ ಸಂಬಂಧಿಸಿದ ಯೋಜನೆಗೆ ಅಮೆರಿಕದಿಂದ ನಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂಬ ಭಾರತದ ಪತ್ರಿಕೆಯೊಂದರ ವರದಿಯನ್ನು ಬೆಂಬಲಿಸಿದೆ.
ಇದನ್ನೂ ಓದಿ: ಬಾಂಗ್ಲಾಕ್ಕಷ್ಟೇ ಅಲ್ಲ, ಭಾರತಕ್ಕೂ 180 ಕೋಟಿ ರೂ. ಹಣ, ಟ್ರಂಪ್ ಹೇಳಿಕೆ ಬೆನ್ನಲ್ಲೇ ಕೇಂದ್ರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್!
