ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ನೌಕಾಪಡೆ ಕಮಾಂಡರ್ ಅಲಿರೇಜಾ ತಂಗಸಿರಿ ಅವರು ಅಮೆರಿಕ-ಇಸ್ರೇಲ್ ಜಂಟಿ ವಾಯು ದಾಳಿಗೆ ಬಲಿಯಾಗಿದ್ದಾರೆ.
ಜೆರುಸಲೇಂ: ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ನೌಕಾಪಡೆ ಕಮಾಂಡರ್ ಅಲಿರೇಜಾ ತಂಗಸಿರಿ ಅವರು ಅಮೆರಿಕ-ಇಸ್ರೇಲ್ ಜಂಟಿ ವಾಯು ದಾಳಿಗೆ ಬಲಿಯಾಗಿದ್ದಾರೆ.
ಬಂದರ್ ಅಬ್ಬಾಸ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಅಲಿರೇಜಾ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ, ಅಲಿರೇಜಾ ಸಾವನ್ನು ಇರಾನ್ ಮಾತ್ರ ಇನ್ನೂ ಖಚಿತಪಡಿಸಿಲ್ಲ.
ಇಸ್ರೇಲ್, ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಸೇರಿ ಇರಾನ್‌ನ ಹಲವು ಪ್ರಮುಖ ನಾಯಕರು ಸಾವಿಗೀಡಾದರೂ ಅಲಿರೇಜಾ ಬಚಾವಾಗಿದ್ದರು. 2018ರಿಂದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಅಲಿರೇಜಾ ಅವರು ಹೊರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ನಿರ್ಬಂಧ ಹೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಖಮೇನಿ ಅವರ ಸಲಹೆಗಾರ ಲಾರಿಜಾನಿ ಹತ್ಯೆ ಇರಾನ್ ಪಾಲಿಗೆ ಅತಿದೊಡ್ಡ ಹಿನ್ನಡೆಯಾಗಿತ್ತು. ಲಾರಿಜಾನಿ ಅವರು ಇರಾನ್ ಆಡಳಿತದ ಮೇಲೆ ತಮ್ಮದೇ ಆದ ಹಿಡಿತ ಹೊಂದಿದ್ದು, ವಿದೇಶಗಳೊಂದಿಗೂ ಮಾತುಕತೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದವರು. ಇದೀಗ ಅಲಿರೇಜಾ ಹತ್ಯೆಯಿಂದ ಇರಾನ್ ನೌಕಾಪಡೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ನಮ್ಮ ಮನವಿ ಮೇರೆಗೆ ಇರಾನ್ 2 ನಾಯಕರ ಹೆಸರು ಇಸ್ರೇಲ್
ಇಸ್ಲಾಮಾಬಾದ್/ಜೆರುಸಲೇಂ: ಈಗಾಗಲೇ ಇರಾನ್‌ನ ಪ್ರಮುಖ ತಲೆಗಳನ್ನು ಹೊಡೆದುರುಳಿಸಿರುವ ಇಸ್ರೇಲ್, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಅವರನ್ನು ತನ್ನ ಹಿಟ್ ಲಿಸ್ಟ್‌ನಿಂದ ಕೈಬಿಟ್ಟಿದೆ. ಇವರನ್ನೂ ಕೊಂದರೆ ಮಾತುಕತೆ ನಡೆಸಲು ಯಾರೂ ಇರುವುದಿಲ್ಲ ಎಂದು ಪಾಕಿಸ್ತಾನ ಮನವರಿಕೆ ಮಾಡಿಕೊಟ್ಟ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.‘ಇಸ್ರೇಲಿಗಳು ತಮ್ಮದೇ ಆದ ಲೆಕ್ಕಾಚಾರ ಹೊಂದಿದ್ದರು. ಅರಾಗ್ಚಿ ಹಾಗೂ ಖಲಿಬಾಫ್ ಅವರನ್ನೂ ಕೊಲ್ಲಲು ಬಯಸಿದ್ದರು. ಆದರೆ ಅವರೂ ಸಾವನ್ನಪ್ಪಿದರೆ ಮಾತನಾಡಲು ಬೇರೆ ಯಾರೂ ಇರುವುದಿಲ್ಲ ಎಂದು ನಾವು ಅಮೆರಿಕಕ್ಕೆ ತಿಳಿಸಿದೆವು. ಆದ್ದರಿಂದ ಅಮೆರಿಕ ಇಸ್ರೇಲನ್ನು ಈ ವಿಚಾರದಿಂದ ಹಿಂದೆ ಸರಿಯುವಂತೆ ಕೇಳಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ದೇಶಗಳು ಇರಾನ್ ಮತ್ತು ಅಮೆರಿಕ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಇರಾನ್‌ಗೆ ರಷ್ಯಾ ಡ್ರೋನ್ ನೀಡುತ್ತಿದೆ: ಅಮೆರಿಕ ಮಾಧ್ಯಮ
ವಾಷಿಂಗ್ಟನ್: ಇರಾನ್‌ಗೆ ರಷ್ಯಾ ಡ್ರೋನ್‌ಗಳನ್ನು ನೀಡುತ್ತಿದೆ ಎಂದು ಅಮೆರಿಕದ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಈ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ಅದು ಹೇಳಿದೆ.ಆದರೆ ಡ್ರೋನ್ ವಿತರಣೆಯ ವರದಿಗಳನ್ನು ರಷ್ಯಾ ತಳ್ಳಿಹಾಕಿದೆ. ವರದಿಗೆ ಪ್ರತಿಕ್ರಿಯಿಸಿದ ಕ್ರೆಮ್ಲಿನ್, ‘ಮಾಧ್ಯಮಗಳು ಬಹಳಷ್ಟು ಸುಳ್ಳುಗಳನ್ನು ಮುದ್ರಿಸುತ್ತಿವೆ ಮತ್ತು ಜನರು ಗಮನ ಹರಿಸಬಾರದು’ ಎಂದು ಗುರುವಾರ ಸ್ಪಷ್ಟಪಡಿಸಿದೆ.


