ಪ್ಯಾರಿಸ್‌/ಬರ್ಲಿನ್‌ (ಅ.30) : ಮಾರ್ಚ್- ಏಪ್ರಿಲ್‌ನಲ್ಲಿ ಕೊರೋನಾ ವೈರಸ್‌ ಅಬ್ಬರದಿಂದ ತೀವ್ರ ನಲುಗಿ ಬಳಿಕ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಯುರೋಪ್‌ನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಹೀಗಾಗಿ ಐರೋಪ್ಯ ದೇಶಗಳು ಕೊರೋನಾದಿಂದ ಮತ್ತೊಮ್ಮೆ ಜರ್ಜರಿತವಾಗುವಂತಾಗಿದೆ.

ಫ್ರಾನ್ಸ್‌, ಜರ್ಮನಿ, ಬ್ರಿಟನ್‌, ಇಟಲಿ, ಸ್ಪೇನ್‌, ಬೆಲ್ಜಿಯಂ, ಚೆಕ್‌ ಗಣರಾಜ್ಯ, ಪೋಲೆಂಡ್‌ನಲ್ಲಿ ಭಾರಿ ಪ್ರಕರಣಗಳು ಕಂಡುಬರುತ್ತಿವೆ. ಫ್ರಾನ್ಸ್‌, ಜರ್ಮನಿಯಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಬ್ರಿಟನ್‌, ಸ್ಪೇನ್‌, ಇಟಲಿ, ಚೆಕ್‌ ಗಣರಾಜ್ಯದಲ್ಲಿ ಹಲವು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

ಕೊರೋನಾ ವೈರಸ್: ಸೋಂಕಿತರಲ್ಲಿ ಲಾಂಗ್ ಟರ್ಮ್ ಅಪಾಯದ ರಿಸ್ಕ್ ಯಾರಿಗೆ..?

ಸೋಂಕು ಅಧಿಕ ಪ್ರಮಾಣದಲ್ಲಿದ್ದರೂ, ಆರೋಗ್ಯ ವ್ಯವಸ್ಥೆ ಸುಧಾರಣೆ ಹಾಗೂ ಕೊರೋನಾ ಮೊದಲ ಅಲೆ ವೇಳೆ ಕಲಿತ ಪಾಠಗಳಿಂದಾಗಿ ಸಾವಿನ ಪ್ರಮಾಣ ಕಡಿಮೆ ಇದೆ.

ಫ್ರಾನ್ಸ್‌ನಲ್ಲಿ ಲಾಕ್‌ಡೌನ್‌:  ದೇಶವನ್ನುದ್ದೇಶಿಸಿ ಮಾತನಾಡಿದ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌, ಶುಕ್ರವಾರದಿಂದ ಡಿ.1ರವರೆಗೆ ಫ್ರಾನ್ಸ್‌ ದೇಶದಲ್ಲಿ ಲಾಕ್‌ಡೌನ್‌ ಜಾರಿಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆ, ದಿನಸಿ ಸಾಮಾನು ಖರೀದಿಯಂತಹ ಅವಶ್ಯ ಚಟುವಟಿಕೆಗಳಿಗೆ ಮಾತ್ರ ಜನರು ಮನೆಯಿಂದ ಹೊರಬರಬೇಕು. ಹಾಗೆ ಬರುವ ಮುನ್ನ ನಿಗದಿತ ಅರ್ಜಿ ಭರ್ತಿ ಮಾಡಬೇಕು. ಪ್ರತಿ 15 ದಿನಕ್ಕೊಮ್ಮೆ ಪರಿಸ್ಥಿತಿ ಪರಾಮರ್ಶೆ ನಡೆಸಲಾಗುತ್ತದೆ. ಶಾಲೆಗಳು ತೆರೆದಿರುತ್ತವೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಗಡಿ ಮುಚ್ಚಲಾಗುತ್ತದೆ. ಯಾರೇ ವಿದೇಶದಿಂದ ಬಂದರೂ ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಸ್ವ ಉದ್ಯೋಗಿಗಳು, ಅಂಗಡಿ ವ್ಯಾಪಾರಿಗಳು, ಸಣ್ಣ- ಮಧ್ಯಮ ಉದ್ದಿಮೆಗಳಿಗೆ ಲಾಕ್‌ಡೌನ್‌ನಿಂದ ಸಂಕಷ್ಟವಾಗಲಿದ್ದು ಅವರಿಗೆ ವಿಶೇಷ ಯೋಜನೆ ರೂಪಿಸಲಾಗುತ್ತದೆ. ಉದ್ಯೋಗ ಮಾಡಲಾಗದವರಿಗೆ ನಗದು ಹಾಗೂ ಬಾಡಿಗೆ ಮೊತ್ತವನ್ನು ಮುಂಬರುವ ದಿನಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಫ್ರಾನ್ಸ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೊರೋನಾ ಬಾಧಿತ ಪ್ರದೇಶಗಳಲ್ಲಿ ಕಫ್ರ್ಯೂ ಹೇರಲಾಗಿತ್ತು. ಆದರೆ ಅದರಿಂದ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮೊರೆ ಹೋಗಲಾಗಿದೆ.

ಫ್ರಾನ್ಸ್‌ನಲ್ಲಿ ಮಾಚ್‌ರ್‍ನಲ್ಲಿ ಕೊರೋನಾ ಮೊದಲ ಅಲೆ ಇದ್ದಾಗ ಗರಿಷ್ಠ ಎಂದರೆ ದಿನವೊಂದಕ್ಕೆ ಸರಾಸರಿ 7 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈಗ ಒಂದೇ ದಿನ 52 ಸಾವಿರದವರೆಗೂ ಪ್ರಕರಣಗಳು ಪತ್ತೆಯಾಗಿವೆ. ಏಪ್ರಿಲ್‌ನಲ್ಲಿ ಒಂದೇ ದಿನ 1400ಕ್ಕೂ ಅಧಿಕ ಸಾವು ಸಂಭವಿಸಿದ ನಿದರ್ಶನವಿತ್ತು. ಆದರೆ ಈಗ ದೈನಂದಿನ ಸಂಖ್ಯೆ 525ರ ಗಡಿ ದಾಟುತ್ತಿಲ್ಲ.

ಜರ್ಮನಿಯಲ್ಲಿ ಲಘು ಲಾಕ್‌ಡೌನ್‌:

ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ನ.2ರಿಂದ ಸರಳ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತಿದೆ. ಆ ಪ್ರಕಾರ, ದೇಶದಲ್ಲಿ ರೆಸ್ಟೋರೆಂಟ್‌, ಪಬ್‌ಗಳನ್ನು ನವೆಂಬರ್‌ನಾದ್ಯಂತ ಮುಚ್ಚಲಾಗುತ್ತದೆ. ಸಿನಿಮಾ ಮಂದಿರ, ವ್ಯಾಪಾರ ಮೇಳ, ರಂಗಮಂದಿರ ಹಾಗೂ ಫಿಟ್ನೆಸ್‌ ಕೇಂದ್ರಗಳು ಕೂಡ ಕಾರ್ಯನಿರ್ವಹಿಸುವಂತಿಲ್ಲ. ಶಾಲೆಗಳಿಗೆ ವಿನಾಯಿತಿ ಇದೆ. ಕ್ರೀಡಾ ಸ್ಪರ್ಧೆಗಳನ್ನು ಪ್ರೇಕ್ಷಕರಿಲ್ಲದೆ ನಡೆಸಬೇಕು. 10ಕ್ಕಿಂತ ಹೆಚ್ಚು ಜನ ಒಂದು ಕಡೆ ಒಟ್ಟಿಗೆ ಸೇರುವಂತಿಲ್ಲ ಎಂದು ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ತಿಳಿಸಿದ್ದಾರೆ.

ಮಾಸ್ಕ್ ನಿಯಮಕ್ಕೆ ಲಾಜಿಕ್ಕೇ ಇಲ್ಲ; ಕೊರೊನಾ ಹೆಸರಲ್ಲಿ ಬಿಬಿಎಂಪಿ ತುಘಲಕ್ ದರ್ಬಾರ್..!

ಜರ್ಮನಿಯಲ್ಲಿ ಬುಧವಾರ 14 ಸಾವಿರ ಸೋಂಕಿತರು ಪತ್ತೆಯಾಗಿದ್ದರು. ಕೊರೋನಾ ಮೊದಲ ಅಲೆ ಇದ್ದಾಗ ಮಾಚ್‌ರ್‍ನಲ್ಲಿ ದಿನವೊಂದಕ್ಕೆ ಗರಿಷ್ಠ ಎಂದರೆ 6900 ಪ್ರಕರಣ ಪತ್ತೆಯಾಗಿದ್ದವು. ಏಪ್ರಿಲ್‌ನಲ್ಲಿ ದಿನವೊಂದಕ್ಕೆ 300 ಸಾವು ಸಂಭವಿಸಿದ್ದ ಈ ದೇಶದಲ್ಲಿ ಈಗ ದೈನಂದಿನ ಸಾವು 100ರ ಗಡಿಯನ್ನು ದಾಟುತ್ತಿಲ್ಲ.

ಅಧಿಕ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸದ್ಯ ಕೇವಲ ಶೇ.25ರಷ್ಟುಐಸಿಯು ಬೆಡ್‌ಗಳು ಮಾತ್ರ ಲಭ್ಯ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

ಇಟಲಿ ಮತ್ತೆ ತತ್ತರ:

ಮಾಚ್‌ರ್‍- ಏಪ್ರಿಲ್‌ನಲ್ಲಿ ಕಂಡುಬಂದ ಕೊರೋನಾ ಮೊದಲ ವೇಳೆ ಅತಿ ಹೆಚ್ಚು ನಲುಗಿದ್ದ ದೇಶವಾಗಿದ್ದ ಇಟಲಿಯಲ್ಲಿ ಈಗ ಸೋಂಕು ಹಿಂದೆಂದಿಗಿಂತ ಹೆಚ್ಚಾಗಿದೆ. ಮಾಚ್‌ರ್‍ನಲ್ಲಿ ಒಂದೇ ದಿನ 6500 ಪ್ರಕರಣ ದಾಖಲಾಗಿದ್ದರಿಂದ ಇಟಲಿ ಸಮಸ್ಯೆಗೆ ಈಡಾಗಿತ್ತು. ಈಗ ದೈನಂದಿನ ಪ್ರಕರಣ 24 ಸಾವಿರದವರೆಗೂ ತಲುಪಿದೆ. ಆದರೆ ಸಾವಿನ ಸಂಖ್ಯೆ ಮಾಚ್‌ರ್‍ನಲ್ಲಿ 920 ಇದ್ದದ್ದು ಈಗ ನಿತ್ಯ 200ರ ಆಸುಪಾಸಿನಲ್ಲಿದೆ. ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯಲ್ಲಿ ಸಂಜೆ 6ರ ನಂತರ ಎಲ್ಲ ಬಾರ್‌ ಹಾಗೂ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುತ್ತಿದೆ. ಆ ನಂತರ ಪಾರ್ಸಲ್‌ ಒಯ್ಯಬಹುದು. ಜಿಮ್‌, ಈಜುಕೊಳ, ರಂಗಮಂದಿರ, ಚಿತ್ರಮಂದಿರಗಳು ಬಾಗಿಲು ತೆರೆಯುವಂತಿಲ್ಲ. ಮ್ಯೂಸಿಯಂಗಳು ಕಾರ್ಯನಿರ್ವಹಿಸಬಹುದು. ವಿವಾಹ, ಅಂತ್ಯಕ್ರಿಯೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರ ಜಮಾವಣೆ ನಿಷೇಧಿಸಲಾಗಿದೆ. ಶಾಲೆಗಳು ಹಾಗೂ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ಸ್ಪೇನ್‌ನಲ್ಲಿ ಸೋಂಕು ಡಬಲ್‌:

ಸ್ಪೇನ್‌ನಲ್ಲಿ ಮಾಚ್‌ರ್‍ ತಿಂಗಳಿನಲ್ಲಿ ದಿನವೊಂದಕ್ಕೆ 10 ಸಾವಿರ ಪ್ರಕರಣ ಕಂಡುಬಂದಿದ್ದವು. ಈಗ 20 ಸಾವಿರ ಪ್ರಕರಣ ವರದಿಯಾಗುತ್ತಿವೆ. 950ರ ಆಸುಪಾಸಿನಲ್ಲಿದ್ದ ಸಾವಿನ ಸಂಖ್ಯೆ 250ಕ್ಕೆ ಇಳಿದಿದೆ. ಕೊರೋನಾ ಹತ್ತಿಕ್ಕಲು ಅ.25ರಿಂದ ದೇಶಾದ್ಯಂತ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಜನರು ಮನೆಯಿಂದ ಹೊರಬರುವಂತಿಲ್ಲ.

ಇತರೆಡೆ ಹೇಗಿದೆ?:

ಚೆಕ್‌ ಗಣರಾಜ್ಯದಲ್ಲಿ ಭಾಗಶಃ ಲಾಕ್‌ಡೌನ್‌ ಇದೆ. ಐರ್ಲೆಂಡ್‌ನಲ್ಲಿ ಆರು ವಾರಗಳ 2ನೇ ಹಂತದ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಬ್ರಿಟನ್‌ನಲ್ಲಿ ಏಪ್ರಿಲ್‌ನಲ್ಲಿ ಒಂದೇ ದಿನ ದಾಖಲೆಯ 7 ಸಾವಿರ ಪ್ರಕರಣ ಪತ್ತೆಯಾಗಿದ್ದವು. ಆದರೆ ಈಗ 25 ಸಾವಿರಕ್ಕೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೋಂಕಿತ ಪ್ರದೇಶಗಳಲ್ಲಿ ಲಾಕ್‌ಡೌನ್‌ ಸೇರಿದಂತೆ ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿದೆ.

ಪಾಕ್‌ನಲ್ಲೂ ಲಾಕ್‌ಡೌನ್‌:

ಕಳೆದೆರಡು ವಾರಗಳಿಂದ ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಪಾಕಿಸ್ತಾನ ಸರ್ಕಾರ ಮತ್ತೆ ದೇಶಾದ್ಯಂತ ಭಾಗಶಃ ಲಾಕ್‌ಡೌನ್‌ ಹೇರಿಕೆ ಮಾಡಿದೆ. ಈ ಪ್ರಕಾರ ಮೆಡಿಕಲ್‌, ಆಸ್ಪತ್ರೆ ಸೇರಿ ಇನ್ನಿತರ ತುರ್ತು ಸೇವೆಗಳು ಹೊರತುಪಡಿಸಿ ಮಾಲ್‌ಗಳು, ಮಾರುಕಟ್ಟೆಗಳು ಹಾಗೂ ಕಲ್ಯಾಣ ಮಂಟಪಗಳು ರಾತ್ರಿ 10 ಗಂಟೆ ನಂತರ ತೆರೆಯುವಂತಿಲ್ಲ.

ಎಲ್ಲಿ ಏನು ನಿರ್ಬಂಧ?

1. ಫ್ರಾನ್ಸ್‌: ಡಿ.1ರವರೆಗೆ ಲಾಕ್‌ಡೌನ್‌. ಅಗತ್ಯ ವಸ್ತುಗಳಿಗಾಗಿ ಮಾತ್ರ ಹೊರಬರಲು ಅವಕಾಶ. ಅಂತಾರಾಷ್ಟ್ರೀಯ ಗಡಿ ಬಂದ್‌

2. ಜರ್ಮನಿ: ಸರಳ ಲಾಕ್‌ಡೌನ್‌. ರೆಸ್ಟೋರೆಂಟ್‌, ಪಬ್‌, ಥಿಯೇಟರ್‌ ಬಂದ್‌. 10ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ

3. ಇಟಲಿ: ಅ.25ರಿಂದಲೇ ದೇಶವ್ಯಾಪಿ ರಾತ್ರಿ ಕಫä್ರ್ಯ. ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಜನರ ಓಡಾಟಕ್ಕೆ ಪೂರ್ಣ ನಿರ್ಬಂಧ

4. ಚೆಕ್‌, ಐರ್ಲೆಂಡ್‌: ಚೆಕ್‌ ಗಣರಾಜ್ಯದಲ್ಲಿ ಈಗಾಗಲೇ ಭಾಗಶಃ ಲಾಕ್‌ಡೌನ್‌. ಐರ್ಲೆಂಡ್‌ನಲ್ಲೂ 2ನೇ ಹಂತದ ಲಾಕ್‌ಡೌನ್‌

5. ಬ್ರಿಟನ್‌: ನಿತ್ಯ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಬ್ರಿಟನ್‌ನಲ್ಲಿ ಹಲವು ರೀತಿಯ ನಿರ್ಬಂಧಗಳು ಜಾರಿ

ದೇಶ ಆಗ ಈಗ

ಫ್ರಾನ್ಸ್‌ 7000 ಕೇಸು 50000 ಕೇಸು

ಜರ್ಮನಿ 6900 ಕೇಸು 14000 ಕೇಸು

ಇಟಲಿ 6500 ಕೇಸು 24000 ಕೇಸು

ಸ್ಪೇನ್‌ 10000 ಕೇಸು 20000 ಕೇಸು

ಬ್ರಿಟನ್‌ 7000 ಕೇಸು 25000 ಕೇಸು

* ಪ್ರತಿನಿತ್ಯದ ಗರಿಷ್ಠ ಪ್ರಕರಣಗಳು