ನವದೆಹಲಿ(ಜೂ.26): ಭಾರತ ಹಾಗೂ ಚೀನಾ ನಡುವೆ 45 ವರ್ಷಗಳಲ್ಲೇ ಮೊದಲ ರಕ್ತಪಾತಕ್ಕೆ ಸಾಕ್ಷಿಯಾದ ಗಲ್ವಾನ್‌ ಕಣಿವೆಯಿಂದ ಸೇನೆ ವಾಪಸ್‌ ಕರೆಸಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿದ ಬೆನ್ನಲ್ಲೇ, ಚೀನಾ ಹೊಸ ಸಂಘರ್ಷಕ್ಕೆ ಇಳಿದಿದೆ. ಗಲ್ವಾನ್‌ನಿಂದ ಉತ್ತರಕ್ಕಿರುವ ದೆಪ್ಸಾಂಗ್‌ಗೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಯೋಧರನ್ನು ನಿಯೋಜನೆ ಮಾಡಿದೆ. ಇದಕ್ಕೆ ತಿರುಗೇಟು ಕೊಟ್ಟಿರುವ ಭಾರತ ಕೂಡ ಸೈನಿಕರು ಹಾಗೂ ಸಮರ ಸಲಕರಣೆಗಳನ್ನು ರವಾನಿಸಿದೆ.

ದೆಪ್ಸಾಂಗ್‌ನಲ್ಲಿ ತನ್ನದೆಂದು ವಾದಿಸುತ್ತಿರುವ ಪ್ರದೇಶದ ಬಳಿಗೆ ಭಾರಿ ಸಂಖ್ಯೆಯಲ್ಲಿ ಯೋಧರನ್ನು ಚೀನಾ ಕಳುಹಿಸಿದೆ. ಸೈನಿಕರ ನಿಯೋಜನೆಯಿಂದಾಗಿ ಭಾರತೀಯ ಯೋಧರ ಗಸ್ತಿಗೆ ಅಡ್ಡಿಯಾಗಿದೆ. ಇದರೊಂದಿಗೆ ಭಾರತ- ಚೀನಾ ನಡುವೆ ಗಡಿಯಲ್ಲಿ ಇತ್ತೀಚಿನ ದಿನಗಳಲ್ಲಿ 5ನೇ ಬಿಕ್ಕಟ್ಟಿನ ಸ್ಥಳ ಉದ್ಭವಿಸಿದಂತಾಗಿದೆ. ಈವರೆಗೆ ಪಾಂಗಾಂಗ್‌ ಸರೋವರದ ಫಿಂಗರ್‌ 4, ಹಾಟ್‌ ಸ್ಟ್ರಿಂಗ್‌ ಸೆಕ್ಟರ್‌, ಗಲ್ವಾನ್‌ ಕಣಿವೆಯ 14 ಮತ್ತು 15ನೇ ಗಸ್ತು ಪಾಯಿಂಟ್‌ನಲ್ಲಿ ಉಭಯ ದೇಶಗಳ ನಡುವೆ ತಿಕ್ಕಾಟ ಇತ್ತು.

3 ಪರಮಾಣು ಯುದ್ಧ ನೌಕೆ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ಸೇನೆ ಕಳಿಸಿದ ಅಮೆರಿಕ

ದೆಪ್ಸಾಂಗ್‌ ಕಣಿವೆಯಲ್ಲಿ ಚೀನಾ 2013ರಲ್ಲೂ ಕ್ಯಾತೆ ತೆಗೆದಿತ್ತು. ಇದೀಗ ಚೀನಾ ಯೋಧರ ಜಮಾವಣೆಯಿಂದಾಗಿ ಭಾರತೀಯ ಸೇನೆ ಯೋಧರು 10, 11, 11ಎ, 12 ಹಾಗೂ 13 ಗಸ್ತು ಕೇಂದ್ರಗಳಿಗೆ ಹೋಗುವುದೇ ಕಷ್ಟವಾಗಲಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.