ಹೆರಿಗೆ ವೇಳೆ ಯೋನಿಯಲ್ಲಿಯೇ ಸೂಜಿ ಬಿಟ್ಟ ನರ್ಸ್, 18 ವರ್ಷ ನೋವು ತಿಂದ ಬಳಿಕ ಗೊತ್ತಾಯ್ತು ಸತ್ಯ!
ಹೆರಿಗೆಯ ನಂತರ ಅಂದಾಜು ಎರಡು ದಶಕಗಳ ಕಾಲ ತೀವ್ರ ನೋವು ಅನುಭವಿಸಿದ ಬಳಿಕ 36 ವರ್ಷದ ಮಹಿಳೆಗೆ ಇತ್ತೀಚೆಗೆ ಒಂದು ಆಘಾತಕಾರಿ ಸತ್ಯ ಗೊತ್ತಾಗಿದೆ. ಎಕ್ಸ್-ರೇ ಪರೀಕ್ಷೆಯಲ್ಲಿ ಹೆರಿಗೆಯ ವೇಳೆ ಸೂಜಿಯೊಂದು ಅಕೆಯ ಯೋನಿಯಲ್ಲಿಯೇ ಉಳಿದುಕೊಂಡಿದ್ದು ಕಂಡುಬಂದಿದೆ.
ನವದೆಹಲಿ (ನ.13): ಹೆರಿಗೆಯ ಸಮಯದಲ್ಲಿ ಆಪರೇಷನ್‌ಗೆ ಒಳಗಾಗಿದ್ದ ಮಹಿಳೆಯೊಬ್ಬರಿಗೆ ಅಂದಿನಿಂದಲೂ ಹೊಟ್ಟೆ ನೋವು. ಕುಂತಾಗ, ನಿಂತಾಗ ಈ ಹೊಟ್ಟೆನೋವು ಬರುತ್ತಿತ್ತು.ದಿನಗಳು, ತಿಂಗಳು ಹಾಗೂ ವರ್ಷಗಳೇ ಉರುಳಿದವು. ಆದರೆ, ಆಕೆಯ ಹೊಟ್ಟೆ ನೋವು ಶಮನವಾಗುವ ಲಕ್ಷಣವೇ ಕಾಣಲಿಲ್ಲ. ಹೆರಿಗೆಯಾದ 18 ವರ್ಷಗಳ ಬಳಿಕ ಈ ನೋವು ಇನ್ನಷ್ಟು ವಿಪರೀತವಾದಾಗ ಆಕೆ ಎಕ್ಸ್‌ರೇ ಮಾಡಿಸಿದ್ದಾಳೆ. ಈ ವೇಳೆ ಆಕೆಯ ಯೋನಿಯಲ್ಲಿ ಸೂಜಿ ಇರುವುದು ಪತ್ತೆಯಾಗಿದೆ. ಹೆರಿಗೆಯ ವೇಳೆ ಮಹಿಳೆ ಆಪರೇಷನ್‌ಗೆ ಒಳಗಾಗಿದ್ದಳು. ಈ ವೇಳೆ ನರ್ಸ್ ಆಕೆಯ ಯೋನಿಯಲ್ಲಿಯೇ ಸೂಜಿ ಬಿಟ್ಟಿದ್ದಳು ಎನ್ನುವ ವಿಚಾರ ಗೊತ್ತಾಗಿದೆ. ಇದು ಥಾಯ್ಲೆಂಡ್‌ನ ನಾರಾಥಿವಾಟ್ ಪ್ರಾಂತ್ಯದ 36 ವರ್ಷದ ಮಹಿಳೆ ಕಥೆ. ಇತ್ತೀಚೆಗೆ ಪಾವೆನಾ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ವುಮೆನ್ ಬಳಿ ಈ ಮಹಿಳೆ ಸಹಾಯ ಕೇಳಿ ಬಂದಿದ್ದಾಗ ಇದು ಗೊತ್ತಾಗಿದೆ. ಇಲ್ಲಿಯವರೆಗೂ ಮೌನವಾಗಿಯೇ ನರಳುತ್ತಿದ್ದ ಈಕೆ, ಹೆರಿಗೆಯ ಸಮಯದಲ್ಲಿ ಸಂಭವಿಸಿದ ನೋವಿನ ಮತ್ತು ಆಘಾತಕಾರಿ ತಪ್ಪನ್ನು ಬಹಿರಂಗಪಡಿಸಿದಳು.
ಫೌಂಡೇಷನ್‌ನ ವೆಬ್‌ಸೈಟ್‌ನಲ್ಲಿರುವ ಆಕೆಯ ಅಕೌಂಟ್‌ನ ಮಾಹಿತಿಯ ಅನುಸಾರ, ಈ ಘಟನೆ ನಡೆದಿದ್ದು 18 ವರ್ಷಗಳ ಹಿಂದೆ. ಹೆರಿಗೆ ನೋವಿನಿಂದ ಆಪರೇಷನ್‌ಗೆ ಒಳಗಾಗಿದ್ದೆ. ಮಗು ಜನಿಸಿದ ಬಳಿಕ ಹೊಲಿಗೆ ಹಾಕುವ ವೇಳೆ ನರ್ಸ್ ಸೂಜಿಯನ್ನು ಯೋನಿಯಲ್ಲಿಯೇ ಬಿಟ್ಟಿದ್ದರು. ಈ ವೇಳೆ ವೈದ್ಯರೊಬ್ಬರು ತಮ್ಮ ಬೆರಳುಗಳಿಂದಲೇ ಸೂಜಿಯನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದರೂ ಯಶಸ್ವಿಯಾಗಿರಲಿಲ್ಲ. ಅತಿಯಾದ ರಕ್ತಸ್ರಾವದ ಆತಂಕದಿಂದಾಗಿ, ಸೂಜಿಯು ತನ್ನ ಯೋನಿಯೊಳಗೆ ಉಳಿದಿದ್ದರೂ ವೈದ್ಯರು ಕಾರ್ಯವಿಧಾನವನ್ನು ಪೂರ್ಣಗೊಳಿಸಲು ನಿರ್ಧರಿಸಿದರು ಎಂದು ಮಹಿಳೆ ನೆನಪಿಸಿಕೊಂಡಿದ್ದಾರೆ.
“ಹೆರಿಗೆಯ ನಂತರ ಹೊಲಿಯುವಾಗ ನರ್ಸ್ ಆಕಸ್ಮಿಕವಾಗಿ ಸೂಜಿಯನ್ನು ಕೈಬಿಟ್ಟರು. ವೈದ್ಯರು ತಮ್ಮ ಬೆರಳುಗಳಿಂದ ಅದನ್ನು ಹಿಂಪಡೆಯಲು ಪ್ರಯತ್ನಿಸಿದರು, ಆದರೆ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ" ಎಂದು ಮಹಿಳೆ ಪಾವೆನಾ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ವುಮೆನ್‌ಗೆ ತಿಳಿಸಿದ್ದಾರೆ. ಅಂದಿನಿಂದ ಅಂದಾಜು 2 ದಶಕಗಳ ಕಾಲ ನನಗೆ ತೀವ್ರವಾದ ಕೆಳಹೊಟ್ಟೆ ನೋವು ಬಾಧಿಸುತ್ತಿತ್ತು. ಆದರೆ, ಇದಕ್ಕೆ ಕಾರಣವೇ ಗೊತ್ತಾಗಿರಲಿಲ್ಲ. ಇತ್ತೀಚೆಗೆ ಎಕ್ಸ್‌ರೇ ಮಾಡಿದ ವೇಳೆ ಯೋನಿಯಲ್ಲಿ ಸೂಜಿ ಇರುವುದು ಗೊತ್ತಾಗಿದೆ. ಇದನ್ನು ಹೊರತೆಗೆಯಲು ಮತ್ತೊಂದು ಸರ್ಜರಿಗೂ ಆಕೆ ಒಳಗಾಗಬೇಕಿತ್ತು. ಆದರೆ, ದೇಹದಲ್ಲಿಯೇ ಸೂಜಿ ಅತ್ತಿತ್ತ ಹೋಗುತ್ತಿದ್ದ ಕಾರಣಕ್ಕೆ ಸರ್ಜರಿ ಕೂಡ ವಿಳಂಬವಾಗಿದೆ.
ಗಗನಯಾತ್ರಿಗಳು ಆಸ್ಪತ್ರೆಗೆ ದಾಖಲಾದ ಬಗ್ಗೆ ರಹಸ್ಯ ಕಾಯ್ದುಕೊಂಡ ನಾಸಾ!
ಆಕೆಯ ದೇಹದಲ್ಲಿ ಸೂಜಿ ಇನ್ನೂ ಇರುವುದರಿಂದ, ನಿಯಮಿತ ತಪಾಸಣೆಗಾಗಿ ಅವಳು ತಿಂಗಳಿಗೆ ನಾಲ್ಕು ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆಕೆಯ ವೈದ್ಯಕೀಯ ವಿಮೆಯು ಆಕೆಯ ಹೆಚ್ಚಿನ ಚಿಕಿತ್ಸೆಯನ್ನು ಒಳಗೊಂಡಿರುತ್ತದೆಯಾದರೂ, ಸಾರಿಗೆಯಂತಹ ಹೆಚ್ಚುವರಿ ವೆಚ್ಚಗಳು ಆರ್ಥಿಕವಾಗಿ ಆಕೆಯ ಮೇಲೆ ಒತ್ತಡವನ್ನುಂಟುಮಾಡಿದೆ. ಈ ಹೆಚ್ಚುವರಿ ವೆಚ್ಚಗಳ ಕಾರಣ, ಅವರು ಬೆಂಬಲಕ್ಕಾಗಿ ಮಕ್ಕಳು ಮತ್ತು ಮಹಿಳೆಯರಿಗಾಗಿ ಪಾವೆನಾ ಫೌಂಡೇಶನ್ ಸಹಾಯವನ್ನು ಕೇಳಿದ್ದಾರೆ.
ಹದಗೆಟ್ಟ ಆರೋಗ್ಯದ ಬಗ್ಗೆ ಬಾಹ್ಯಾಕಾಶ ನಿಲ್ದಾಣದಿಂದಲೇ ಮಾತನಾಡಿದ ಸುನೀತಾ ವಿಲಿಯಮ್ಸ್
ಸೂಜಿಯನ್ನು ಯಾವಾಗ ತೆಗೆಯಲಾಗುತ್ತದೆ ಅಥವಾ ಅವಳ ಚಿಕಿತ್ಸೆಯು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಘಟನೆಗೆ ಆಸ್ಪತ್ರೆಯು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಯಾವುದೇ ಕಾನೂನು ಕ್ರಮ ಅಥವಾ ಪರಿಹಾರವಿದೆಯೇ ಎಂಬುದು ಸಹ ತಿಳಿದಿಲ್ಲ.ಈ ಘಟನೆ ಆನ್‌ಲೈನ್‌ನಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಟೀಕಿಸಿದರು, ಕೆಲವರು ಅವಳು ಅನುಭವಿಸಿದ ನೋವಿನ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.