* ಸಮಾಜದಲ್ಲಿ ಅರ್ಧ ಜವಾಬ್ದಾರಿಗಳನ್ನು ಮಹಿಳೆಯರು ಸಹ ನಿರ್ವಹಿಸುತ್ತಾರೆ* ಹುಡು​ಗಿ​ಯರ ಶಿಕ್ಷಣ ನಿಷೇ​ಧದ ವಿರುದ್ಧ ಹುಡು​ಗ​ರಿಂದ ತರ​ಗತಿ ಬಹಿ​ಷ್ಕಾ​ರ

ಕಾಬೂಲ್‌(ಸೆ.20): ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್‌ ಆಡಳಿತ ಹಲವು ನಿರ್ಬಂಧಗಳನ್ನು ಹೇರಿರುವ ಬೆನ್ನಲ್ಲೇ, ತಾಲಿಬಾನ್‌ನ ಈ ನಿರ್ಧಾರದ ವಿರುದ್ಧ ಶಾಲಾ ಬಾಲಕರು ಸಿಡಿದೆದ್ದಿದ್ದಾರೆ. ಬಾಲಕಿಯರಿಗೂ ಶಾಲೆಗಳು ಮುಕ್ತವಾಗುವವರೆಗೆ ತಾವು ಶಾಲೆಗೆ ಹೋಗದಿರಲು ಆಫ್ಘನ್‌ನ ಕೆಲ ಬಾಲಕರು ನಿರ್ಧರಿಸಿದ್ದಾರೆ.

ಈ ಸಮಾಜದಲ್ಲಿ ಅರ್ಧ ಜವಾಬ್ದಾರಿಗಳನ್ನು ಮಹಿಳೆಯರು ಸಹ ನಿರ್ವಹಿಸುತ್ತಾರೆ. ಹೀಗಾಗಿ ಬಾಲಕಿಯರಿಗೂ ಶಾಲೆಗಳು ಆರಂಭವಾಗುವವರೆಗೆ ನಾವು ಶಾಲೆಯಿಂದ ದೂರ ಉಳಿಯುತ್ತೇವೆ ಎಂದು ಕೆಲ ಬಾಲಕರು ಹೇಳಿದ್ದಾರೆ. ಪ್ರೌಢಶಾಲೆಗಳು ಬಾಲಕರಿಗೆ ಮುಕ್ತವಾಗಿವೆ. ಎಲ್ಲಾ ಪುರುಷ ಶಿಕ್ಷಕರು ಮತ್ತು ಸೂಚಿತ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳಬೇಕು ಎಂದಿರುವ ತಾಲಿಬಾನ್‌ ಶಿಕ್ಷಣ ಇಲಾಖೆ, ಬಾಲಕಿಯರ ಶಾಲೆ ಆರಂಭದ ಬಗ್ಗೆ ಚಕಾರವೆತ್ತಿಲ್ಲ.

ತಾಲಿಬಾನ್‌ ಸರ್ಕಾರದಿಂದ ಮಹಿಳಾ ಸಚಿವಾಲಯವೇ ರದ್ದು

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವ ತಾಲಿಬಾನ್‌ ಇದೀಗ ಮಹಿಳಾ ಸಚಿವಾಲಯವನ್ನೇ ಸ್ಥಗಿತಗೊಳಿಸಿದೆ. ಅದನ್ನು ಎಲ್ಲಾ ಪುರುಷರೇ ಇರುವ ‘ದುರಭ್ಯಾಸ ಮತ್ತು ಸದ್ಗುಣ’ ಸಚಿವಾಲಯವನ್ನಾಗಿ ಬದಲಾಯಿಸಿದೆ. ಇದು 20 ವರ್ಷಗಳ ಹಿಂದಿನ ತಾಲಿಬಾನ್‌ ಆಡಳಿತವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.

ತಾಲಿಬಾನಿಗಳು ತಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಮುಚ್ಚಲಾಗಿರುವ ಸಚಿವಾಲಯದ ಬದಲು ಮಹಿಳೆಯರಿಗೆ ಬೇರೆ ಯಾವುದಾದರೂ ಸಚಿವಾಲಯ ರಚಿಸುವ ಬಗ್ಗೆ ಉದ್ದೇಶಿಸಲಾಗಿದೇಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.