ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!
* ಅಪ್ಘಾನಿಸ್ತಾನಕ್ಕೆ ನೆರವು ನೀಡಲು ಮುಂದಾದ ಭಾರತ
* ಆಹಾರಕ್ಕೆ ಕುತ್ತು ಬಂದ ನಾಡಿಗೆ ಗೋಧಿ ರವಾನಿಸಲು ಸಿದ್ಧತೆ
* ಪಾಕಿಸ್ತಾನ ಕೊಡುತ್ತಾ ರಫ್ತಿಗೆ ಅವಕಾಶ
ಕಾಬೂಲ್(ಅ.19): ತಾಲಿಬಾನಿಯರ(Taliban) ಕೈವಶವಾಗಿರುವ ಅಪ್ಘಾನಿಸ್ತಾನದಲ್ಲಿ(Afghanistan) ಸದ್ಯ ಆಹಾರದ(Food) ಬಿಕ್ಕಟ್ಟು, ಲಕ್ಷಾಂತರ ಜನರನ್ನು ಹಸಿವಿನಿಂದ ನರಳುವಂತೆ ಮಾಡಿದೆ. ಹೀಗಿರುವಾಗ ತಾಲಿಬಾನ್ ಆಳ್ವಿಕೆಯ ರಾಷ್ಟ್ರಕ್ಕೆ ಭಾರತ 50,000 ಮೆಟ್ರಿಕ್ ಟನ್ ಗೋಧಿ(Wheat) ಮತ್ತು ವೈದ್ಯಕೀಯ ನೆರವನ್ನು ನೀಡಲು ಮುಂದಾಗಿದೆ.
50,000 ಮೆಟ್ರಿಕ್ ಟನ್ ಗೋಧಿ
ಚಳಿಗಾಲದ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಭಾರೀ ಕ್ಷಾಮ ಉಂಟಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಆಹಾರ ಹಾಗೂ ವೈದ್ಯಕೀಯ ನೆರವು ನೀಡಲು ಭಾರತ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿರುವ ಭಾರತ ಸರ್ಕಾರ 50,000 ಮೆಟ್ರಿಕ್ ಟನ್ ಗೋಧಿ ರಫ್ತು ಮಾಡುವುದರೊಂದಿಗೆ ವೈದ್ಯಕೀಯ ನೆರವನ್ನು ಕೂಡಾ ಅಫ್ಘಾನಿಸ್ತಾನಕ್ಕೆ ನೀಡಲು ಯೋಚಿಸಿದೆ.
ರಫ್ತು ಮಾಡೋದೇ ಸವಾಲು
ಅಫ್ಘಾನಿಸ್ತಾನಕ್ಕೆ ಆಹಾರ ಸಹಾಯವನ್ನು ರವಾನಿಸಲು ಸದ್ಯಕ್ಕಿರುವ ಸವಾಲೆಂದರೆ ದಕ್ಷ ಲಾಜಿಸ್ಟಿಕ್ಸ್. ಭಾರತ ಸದ್ಯ ಅಫ್ಘಾನಿಸ್ತಾನಕ್ಕೆ ಯಾವುದೇ ಅಡೆತಡೆ ಇಲ್ಲದ ಹಾಗೂ ನೇರವಾಗಿ ತಲುಪುವ ಮಾನವೀಯ ನೆರವು ನೀಡಲು ಬಯಸುತ್ತದೆ. ಇದು ವಿಶ್ವಸಂಸ್ಥೆಯ(United Nations) ಮೇಲ್ವಿಚಾರಣೆಯಲ್ಲಿ ಮಾತ್ರ ಸಾಧ್ಯ. ಅಲ್ಲದೇ ವಿದೇಶಾಂಗ ಸಚಿವ ಜೈಶಂಕರ್ ಕೂಡಾ "ಅನುಕೂಲಕರ ವಾತಾವರಣ" ಇದೆಯೋ ಇಲ್ಲವೋ ಎಂಬುದರ ಮೇಲೆ ಭಾರತದ ಸಹಾಯ ಅವಲಂಬಿತವಾಗಿರುತ್ತದೆ ಎಂದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಭಾರತ ರಫ್ತು ಮಾಡಿದರೂ ಅಪ್ಘಾನಿಸ್ತಾನಕ್ಕೆ ಈ ಉತ್ಪನ್ನ ಹೇಗೆ ತಲುಪಿಸುತ್ತದೆ ಎಂಬುವುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಸಹಾಯದ ಭರವಸೆ ಕೊಟ್ಟಿದ್ದ ಮೋದಿ
ಅಫ್ಘಾನಿಸ್ತಾನ ವಿಚಾರದಲ್ಲಿ ಜಿ20 ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಅಫ್ಘಾನಿಸ್ತಾನ ಜನರಿಗೆ ಭಾರತದ ಬಗ್ಗೆ ಉತ್ತಮ ಭಾವನೆ ಇದೆ. ಅಫ್ಘಾನ್ ಜನರಿಗೆ ಭಾರತದೊಂದಿಗೆ ಉತ್ತಮ ಸ್ನೇಹವಿದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನವು ಹಸಿವಿನಿಂದ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವ ಹಿನ್ನೆಲೆ ಭಾರತದ ಎಲ್ಲಾ ಜನರಿಗೆ ನೋವುಂಟಾಗಿದೆ," ಎಂದು ಹೇಳಿದ್ದರು.
ಪಾಕಿಸ್ತಾನ ಅನುಮತಿ ಬೇಕು
ಅಟ್ಟಾರಿ-ವಾಘಾ ಗಡಿ ಮೂಲಕ ಭಾರತ ಅಫ್ಘಾನಿಸ್ತಾನಕ್ಕೆ ಈ ಉತ್ಪನ್ನಗಳನ್ನು ರಫ್ತು ಮಾಡುವ ಸಾಧ್ಯತೆ ಇದೆ. ಆದರೆ ಈ ಗಡಿಯಿಂದ ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ರಫ್ತು, ಆಮದು ಪ್ರಕ್ರಿಯೆ ನಡೆಯಬೇಕಾದರೆ ಪಾಕಿಸ್ತಾನದ ಅನುಮೋದನೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿದೆ.