ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಡುವೆ ಬದುಕುಳಿದ ಪುಟ್ಟ ಬಾಲಕಿಯ ಚಿತ್ರವನ್ನು ಆಫ್ಘನ್ ಪತ್ರಕರ್ತರೊಬ್ಬರು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಇದೀಗ ಈ ಮಗುವನ್ನು ದತ್ತು ತೆಗೆದುಕೊಳ್ಳಲು ಅನೇಕರು ಮುಂದೆ ಬಂದಿದ್ದಾರೆ.

ಕಾಬೂಲ್ (ಜೂನ್ 23): ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ ಭೀಕರ ಭೂಕಂಪವು (Earthquake) ಇಡೀ ದೇಶವನ್ನು ಅಕ್ಷರಶಃ ನರಕವನ್ನಾಗಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಹೆಚ್ಚಿನ ಮಾಹಿತಿಗಳೂ ಸಿಗದೇ ಇದ್ದರೂ, ಕೆಲವೊಂದು ಚಿತ್ರಗಳು ಬೆಟ್ಟಗುಡ್ಡಗಳಿಂದಲೇ ತುಂಬಿರುವ ದೇಶದಲ್ಲಿ ಯಾವ ರೀತಿಯಲ್ಲಿ ವಿನಾಶವಾಗಿದೆ ಎನ್ನುವುದನ್ನು ಸಾರಿ ಹೇಳುವಂತಿತ್ತು.

ಭೂಕಂಪದಲ್ಲಿ ಅಫ್ಘಾನಿಸ್ತಾನದಲ್ಲಿ 1 ಸಾವಿರಕ್ಕೂ ಅಧಿಕ ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜವಾಬ್ದಾರಿಯುತ ಸರ್ಕಾರವಿಲ್ಲದೆ, ಭಯೋತ್ಪಾದಕ ಗುಂಪು ತಾಲಿಬಾನ್ (Taliban) ಆಡಳಿತದಲ್ಲಿ ಅಫ್ಘನ್ ಜನತೆ ದಿನ ದೂಡುತ್ತಿದ್ದಾರೆ. ಈ ಮಧ್ಯ ಭೂಕಂಪದ ನಡುವೆ ಅಫ್ಘಾನಿಸ್ತಾನದ 3 ವರ್ಷದ ಬಾಲಕಿಯ ಹೃದಯ ವಿದ್ರಾವಕ ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದ್ದು, ಅಫ್ಘನ್ ದೇಶದ ಪರಿಸ್ಥಿತಿಯನ್ನು ವಿವರಿಸುತ್ತಿದೆ.

ಭೂಕಂಪದಲ್ಲಿ 3 ವರ್ಷದ ಬಾಲಕಿಯ ಕುಟುಂಬದ ಎಲ್ಲಾ ಸದಸ್ಯರು ಸಾವು ಕಂಡಿದ್ದು, ಈಕೆಯೊಬ್ಬಳೇ ಬದುಕುಳಿದಿದ್ದಾಳೆ. ಭೂಕಂಪದಿಂದಾಗಿ ಸಂಪೂರ್ಣ ನಾಮಾವಶೇಷವಾಗಿರುವ ಮನೆಯ ಮುಂದೆ ನಿಂತಿರುವ ಬಾಲಕಿಯ ಚಿತ್ರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಸೆರೆಹಿಡಿದ್ದಾರೆ. ಈ ಬಾಲಕಿಯ ಚಿತ್ರವನ್ನು ನೋಡಿ ನೆಟಿಜನ್ಸ್‌ಗಳು ಭಾವುಕರಾಗಿದ್ದಾರೆ. ಚಿತ್ರದಲ್ಲಿ ಮಗುವಿನ ಮುಖದ ಮೇಲೆ ಕೆಸರಿದ್ದು, ಮುರಿದು ಬಿದ್ದ ಮನೆ ಆಕೆಯ ಹಿಂದೆ ಕಾಣುತ್ತಿದೆ.

Scroll to load tweet…


ಈ ಫೋಟೋವನ್ನು ಅಫ್ಘಾನ್ ಪತ್ರಕರ್ತ ಸೈಯದ್ ಜಿಯರ್ಮಲ್ ಹಶ್ಮಿ (Afghan journalist Syed Ziarmal Hashmi ) ಅವರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ(Twitter) ಹಂಚಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ 'ಈ ಹುಡುಗಿ ಬಹುಶಃ ತನ್ನ ಕುಟುಂಬದಲ್ಲಿ ಉಳಿದಿರುವ ಏಕೈಕ ಸದಸ್ಯೆ ಆಗಿರಬಹುದು. ಬಾಲಕಿಯ ಕುಟುಂಬದ ಬದುಕುಳಿದ ಸದಸ್ಯರನ್ನು ಹುಡುಕಲು ನಾವು ಪ್ರಯತ್ನಿಸಿದ್ದೇವೆ ಎಂದು ಸ್ಥಳೀಯ ಜನರು ಹೇಳಿದ್ದಾರೆ, ಈ ಹುಡುಗಿ ಮೂರು ವರ್ಷದವಳಂತೆ ಕಾಣುತ್ತಾಳೆ' ಎಂದು ಬರೆದುಕೊಂಡಿದ್ದಾರೆ.
ಅಫ್ಘಾನಿಸ್ತಾನ ಭೂಕಂಪಕ್ಕೆ ಸಂಬಂಧಿಸಿದಂತೆ ಸೈಯದ್ ಟ್ವೀಟ್ ವೈರಲ್ ಆಗಿದೆ. ಇದನ್ನು ಸುಮಾರು 60 ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ದತ್ತು ತೆಗೆದುಕೊಳ್ಳುತ್ತೇವೆ, ಯಾವ ನಿಯಮವಿದೆ ಎಂದು ಹೇಳಿ: ಈ ಫೋಟೋವನ್ನು ನೋಡಿದ ಬಹುತೇಕ ಜನರು ಆಕೆಯನ್ನು ದತ್ತು (Adopt) ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸರಿಯಾಗಿ ಸರ್ಕಾರವೇ ಇಲ್ಲದ ಅಫ್ಘಾನಿಸ್ತಾನದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳಲು ಯಾವೆಲ್ಲ ನಿಯಮವಿದೆ ಎಂದು ತಿಳಿಸಿ ಎಂದು ಈ ಟ್ವೀಟ್‌ಗೆ ಪ್ರತಿಕ್ರಿಯೆ ಬಂದಿದೆ. ಈ ಚಿತ್ರವನ್ನು ನೋಡಿದ ಬಹುತೇಕ ಮಂದಿ ಭಾವುಕರಾಗಿದ್ದಾರೆ.

Scroll to load tweet…


ಈ ಟ್ವೀಟ್ ನೋಡಿದ ಎಲ್ಲರೂ ಭಾವುಕವಾಗಿ ಪ್ರತಿಕ್ರಿಯೆ ಮಾಡಿದ್ದಾರೆ. ಸೈಯದ್ ಅವರು ತಮ್ಮ ಟ್ವೀಟ್‌ನಲ್ಲಿ ಅನೇಕರು ಹಣ ಮತ್ತು ಸಹಾಯ ಮಾಡಲು ಕೈ ಚಾಚಿದ್ದಾರೆ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಈ ಬಾಲಕಿ ಮತ್ತು ಭೂಕಂಪದಿಂದ ನಿರಾಶ್ರಿತರಾದ, ಬದುಕುಳಿದ ವ್ಯಕ್ತಿಗಳಿಗೆ ಯಾವ ರೀತಿಯ ಸಹಾಯ ಮಾಡಬಹುದು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, 950 ಜನರ ಸಾವು, ಸರ್ಕಾರದ ಹೇಳಿಕೆ!

ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಈ ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು. ಈ ಪುಟ್ಟ ಮುಗ್ಧ ಮಗುವನ್ನು ದತ್ತು ತೆಗೆದುಕೊಳ್ಳಲು ಹೆಚ್ಚಿನವರು ಸಿದ್ಧರಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್, ರಷ್ಯಾ, ಯುರೋಪ್ ರಾಷ್ಟ್ರಗಳ ಟ್ವಿಟರ್ ಬಳಕೆದಾರರು ಮಗುವನ್ನು ದತ್ತು ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾತನಾಡಿದ್ದಾರೆ.

ಉಗ್ರರ ದಾಳಿಗೊಳಗಾದ ಅಫ್ಘಾನ್ ಗುರುದ್ವಾರದ ದುರಸ್ತಿಗೆ 10 ಲಕ್ಷ ರೂ. ನೀಡಿದ ಕಾಶ್ಮೀರ ಸಿಖ್ ಸಂಸ್ಥೆ

ಇನ್ನೂ ಕೆಲ ಬಳಕೆದಾರರು ತಾಲಿಬಾನ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಷ್ಟೆಲ್ಲಾ ಸಾಹಸ ಮಾಡಿ ಅಧಿಕಾರಕ್ಕೆ ಬಂದ ತಾಲಿಬಾನ್ ಜನರ ಕಷ್ಟದ ಸಮಯದ ವೇಳೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದನ್ನು ದೇವರ ಪವಾಡ ಎಂದು ಕರೆದಿದ್ದಾರೆ. ಈ ಬಾಲಕಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ. ಟ್ವೀಟ್‌ ಅನ್ನು ಹಂಚಿಕೊಂಡಿರುವ ಅಫ್ಘಾನ್ ಪತ್ರಕರ್ತ ಗೋ ಫಂಡ್ ಮೀ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದು, ಆ ಮೂಲಕ ಅಫ್ಘಾನಿಸ್ತಾನದ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಬಹುದಾಗಿದೆ.