ಭಾರತದ ಪ್ರಧಾನಿ ನರೆಂದ್ರ ಮೋದಿ ಅವರು ಅದಾನಿ ಗ್ರೂಪ್‌ಗೆ ನೀಡುವಂತೆ ಒತ್ತಡ ಹೇರಿದ್ದರು ಎಂದು ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಚೇರ್ಮನ್‌ ಆರೋಪ ಮಾಡಿ, ನಂತರ ಉಲ್ಟಾಹೊಡೆದ ಘಟನೆ ನಡೆದಿದೆ.

ಕೊಲಂಬೊ(ಜೂ.13): ಶ್ರೀಲಂಕಾದ ಪವನ ವಿದ್ಯುತ್‌ ಯೋಜನೆಯೊಂದರ ಗುತ್ತಿಗೆಯನ್ನು ಭಾರತದ ಪ್ರಧಾನಿ ನರೆಂದ್ರ ಮೋದಿ ಅವರು ಅದಾನಿ ಗ್ರೂಪ್‌ಗೆ ನೀಡುವಂತೆ ಒತ್ತಡ ಹೇರಿದ್ದರು ಎಂದು ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಚೇರ್ಮನ್‌ ಆರೋಪ ಮಾಡಿ, ನಂತರ ಉಲ್ಟಾಹೊಡೆದ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಶ್ರೀಲಂಕಾದಲ್ಲಿ 500 ಮೆಗಾವ್ಯಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಸ್ಥಾವರ ನಿರ್ಮಿಸಲು ಭಾರತ ಆರ್ಥಿಕ ನೆರವು ನೀಡಿತ್ತು. ನಂತರ ಅದರ ಗುತ್ತಿಗೆಯನ್ನು ಅದಾನಿಗೆ ನೀಡುವಂತೆ ಮೋದಿ ಒತ್ತಡ ಹೇರುತ್ತಿದ್ದಾರೆ ಎಂದು ಅಧ್ಯಕ್ಷ ಗೋಟಬಾಯ ರಾಜಪಕ್ಸೆ ತಮಗೆ ಹೇಳಿದ್ದರು ಎಂದು ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಚೇರ್ಮನ್‌ ಎಂಎಂಸಿ ಫರ್ಡಿನಾಂಡೋ ಎಂಬುವರು ಕಳೆದ ವಾರ ಸಂಸದೀಯ ಸಮಿತಿ ಮುಂದೆ ಹೇಳಿದ್ದರು. ಆದರೆ ಎರಡು ದಿನಗಳ ನಂತರ ಉಲ್ಟಾಹೊಡೆದಿರುವ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ‘ಭಾವನಾತ್ಮಕ’ ಒತ್ತಡದಲ್ಲಿ ನಾನು ಸುಳ್ಳು ಹೇಳಿದ್ದೆ ಎಂದು ಸಮಿತಿಗೆ ಲಿಖಿತವಾಗಿ ತಿಳಿಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ವಿದ್ಯುತ್‌ ಕಂಪನಿ ಸ್ಥಾಪಿಸುವುದಕ್ಕೆ ಗುತ್ತಿಗೆ ನೀಡುವ ವಿಚಾರ ಶ್ರೀಲಂಕಾದಲ್ಲಿ ವಿವಾದಕ್ಕೆ ಕಾರಣವಾಗಿ ಆ ಕುರಿತು ಸಂಸದೀಯ ಸಮಿತಿ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ, ಸದರಿ ಯೋಜನೆಯ ಗುತ್ತಿಗೆಯನ್ನು ಭಾರತದ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ ನೀಡಲಾಗಿದೆ. ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಗೋಟಬಾಯ ರಾಜಪಕ್ಸೆ, ‘ವಿದ್ಯುತ್‌ ಯೋಜನೆಯ ಗುತ್ತಿಗೆಯನ್ನು ಯಾವುದೇ ಸಂಸ್ಥೆಗೆ ನೀಡುವಂತೆ ಒತ್ತಡ ಬಂದಿತ್ತು ಎಂಬ ಆರೋಪ ಸುಳ್ಳು’ ಎಂದು ಟ್ವೀಟ್‌ ಮಾಡಿದ್ದಾರೆ.