ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಉಡುಪಿಯ ಅರುಣ್ ಮತ್ತು ಬೆಂಗಳೂರಿನ ಷರೀಫ್ 200 ಗ್ರಾಂ ಚಿನ್ನ ಗೆದ್ದಿದ್ದಾರೆ. ಅಕ್ಟೋಬರ್ 3ನೇ ವಾರದಲ್ಲಿ ಒಟ್ಟು ನಾಲ್ವರು ಭಾರತೀಯರು ಈ ಬಹುಮಾನ ಪಡೆದಿದ್ದಾರೆ. ಈ ಹಿಂದೆ ಫೆಬ್ರವರಿಯಲ್ಲಿ ಉಡುಪಿಯ ಮತ್ತೊಬ್ಬರು ಇದೇ ಲಾಟರಿಯಲ್ಲಿ ₹49 ಕೋಟಿ ಗೆದ್ದಿದ್ದರು.
ಅಬುದಾಭಿ: ಉಡುಪಿ ಜಿಲ್ಲೆಯ ಕಿದಿಯೂರು ಮೂಲದ ಸದ್ಯ ಬಹ್ರೈನ್‌ನಲ್ಲಿ ನೆಲೆಸಿರುವ ಅರುಣ್ ಕೃಷ್ಣಪ್ಪ ಕಿದಿಯೂರು ಅವರು ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ₹25 ಲಕ್ಷ ಮೌಲ್ಯದ 200 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿಯನ್ನು ಗೆದ್ದಿದ್ದಾರೆ. ಇದೇ ಲಾಟರಿಯಲ್ಲಿ ಬೆಂಗಳೂರಿನ ಎಂಜಿನಿಯರ್ ಸದಾತುಲ್ಲಾ ಕೂಡ ವಿಜೇತರಾಗಿದ್ದಾರೆ.
4 ತಿಂಗಳ ಹಿಂದಷ್ಟೇ ಲಾಟರಿ ಟಿಕೆಟ್ ಖರೀದಿ
ಅಕ್ಟೋಬರ್ 3ನೇ ವಾರದಲ್ಲಿ ನಾಲ್ವರು ಭಾರತೀಯರು ಗೆದ್ದಿದ್ದು, ಅದರಲ್ಲಿ ಅರುಣ್ ಕೂಡ ಒಬ್ಬರು. 45 ವರ್ಷದ ಅರುಣ್ ಕಳೆದ 23 ನಿವಾಸಗಳಿಂದ ಬಹ್ರೈನ್‌ನಲ್ಲಿ ನೆಲೆಸಿದ್ದು, ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹಲವು ಸಮಯಗಳಿಂದ ಬಿಗ್ ಟಿಕೆಟ್ ಅಬುಧಾಬಿ ಟಿಕೆಟ್ ಖರೀದಿಸುತ್ತಿದ್ದರು. 4 ತಿಂಗಳ ಹಿಂದಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದು, ಅದೃಷ್ಟ ಖುಲಾಯಿಸಿದೆ. ‘ಗೆಲುವು ಸಾಧಿಸಿರುವುದು ತುಂಬಾ ಖುಷಿಯಾಗಿದೆ. ಇದು ಅನಿರೀಕ್ಷಿತವಾಗಿತ್ತು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅರುಣ್ ಜತೆಗೆ ಇನ್ನೂ ಮೂರು ಭಾರತೀಯರು ಲಕ್ಕಿ ಡ್ರಾ ವಿಜೇತರಾಗಿದ್ದಾರೆ. ಜಿಜೋಯ್ ವಿಶ್ವನ್, ಸದಾತುಲ್ಲಾ ಶರೀಫ್ ಮತ್ತು ಮನೀಷಾ ಹರ್ಷಲ್ ಕಸತ್ ಕೂಡ ವಿಜೇತರಾಗಿದ್ದಾರೆ. ಈ ಪೈಕಿ ಸಿವಿಲ್ ಎಂಜಿನಿಯರ್ ಆಗಿರುವ ಸದಾತುಲ್ಲಾ ಬೆಂಗಳೂರಿನ ನಿವಾಸಿಯಾಗಿದ್ದು ವರ್ಷದ ಹಿಂದೆ ದುಬೈಗೆ ತೆರಳಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅಬುಧಾಬಿಯಲ್ಲಿ ಬಿಗ್ ಟಿಕೆಟ್ ಡ್ರಾದಲ್ಲಿ ಉಡುಪಿಯ ಉದ್ಯಾವರ ಮೂಲದ ಶಾಂತನು ಶೆಟ್ಟಿಗಾರ್ ಸುಮಾರು ₹49 ಕೋಟಿ ಗೆದ್ದಿದ್ದರು.






