ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಸಾವನ್ನಪ್ಪಿದ್ದು, ಅಪಘಾತದ ಕಾರಣ ತಿಳಿಯಲು ವಾಯುಸೇನೆ ತನಿಖೆ ಆರಂಭಿಸಿದೆ.
ಕ್ಯಾಲಿಫೋರ್ನಿಯಾ: ಅಮೆರಿಕ ವಾಯುಪಡೆಯ B-52 ಸ್ಟ್ರಾಟೋಫೋರ್ಟ್ರೆಸ್ ಸಬ್‌ಸಾನಿಕ್ ಬಾಂಬರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ತಕ್ಷಣವೇ ಈ ದುರಂತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸಾಮಾನ್ಯವಾಗಿ B-52 ವಿಮಾನದಲ್ಲಿ ಐದು ಮಂದಿ ಸಿಬ್ಬಂದಿ ಇರುತ್ತಾರೆ.
110 ಮಿಲಿಯನ್ ಡಾಲರ್ ದುಬಾರಿಯ B-52 ಬಾಂಬರ್
ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ B-52 ಬಾಂಬರ್‌ಗಳು ಸುಮಾರು 70,000 ಪೌಂಡ್ (ಸುಮಾರು 31,750 ಕೆ.ಜಿ.) ಭಾರವನ್ನು ಹೊರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 110 ಮಿಲಿಯನ್ ಡಾಲರ್ (ಅಂದಾಜು 1,065 ಕೋಟಿ ರೂಪಾಯಿ). ಈ ವಿಮಾನವು 1955ರಿಂದ ಅಮೆರಿಕ ವಾಯುಪಡೆಯ ಭಾಗವಾಗಿದೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷಗಳಲ್ಲಿ ಬಾಂಬ್ ದಾಳಿ ಕಾರ್ಯಾಚರಣೆಗಳಿಗಾಗಿ B-52 ಬಾಂಬರ್‌ಗಳನ್ನು ಬಳಸಲಾಗಿತ್ತು.
ಈ ಸೇನಾ ನೆಲೆ ಲಾಸ್ ಏಂಜಲೀಸ್‌ನ ಈಶಾನ್ಯಕ್ಕಿರುವ ಪಶ್ಚಿಮ ಮೊಜಾವೆ ಮರುಭೂಮಿಯಲ್ಲಿದೆ. ಅಪಘಾತ ಸ್ಥಳದ ವೈಮಾನಿಕ ದೃಶ್ಯಗಳಲ್ಲಿ, ವಿಮಾನ ಬಿದ್ದ ಜಾಗದಲ್ಲಿ ದಟ್ಟವಾದ ಹೊಗೆ ಹಾಗೂ ಕರಕಲಾದ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿವೆ. ಬೋಯಿಂಗ್ ಕಂಪನಿ ನಿರ್ಮಿಸಿದ B-52 ಸ್ಟ್ರಾಟೋಫೋರ್ಟ್ರೆಸ್, ದೀರ್ಘ-ಶ್ರೇಣಿಯ ದಾಳಿ ಮತ್ತು ಭಾರೀ ಪ್ರಮಾಣದ ಬಾಂಬ್ ದಾಳಿಗೆ ಬಳಸುವ ಒಂದು ಪ್ರಮುಖ ಯುದ್ಧ ವಿಮಾನವಾಗಿದೆ.
ಎಂಟು ಜನರ ಸಾವು
ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಮೃತಪಟ್ಟಿರುವುದಾಗಿ ಅಮೆರಿಕ ವಾಯುಸೇನೆ ಅಧಿಕೃತವಾಗಿ ಖಚಿತಪಡಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಬಗ್ಗೆ ವಾಯುಸೇನೆ ವಿಸ್ತೃತ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


